Parappan Agrahar: ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ|ಶಿವಮೊಗ್ಗ ಎಸ್ಪಿ ಕಚೇರಿಗೆ ಬಿಜೆಪಿಯಿಂದ ಮುತ್ತಿಗೆ ಯತ್ನ!ಅಮಿತ್ ಶಾ ಗೆ ಬಳೆ ಪೋಸ್ಟ್ ಮಾಡಿದ ಕಾಂಗ್ರೆಸ್
ನೂರಾರು ಸಂಖ್ಯೆಯಲ್ಲಿ ಇದ್ದ ಬಿಜೆಪಿ ಪ್ರತಿಭಟನಾಕಾರರು ಎಸ್ಪಿ ಅವರ ಕಚೇರಿ ಆವರಣ ಪ್ರವೇಶಿಸಿದ್ದಾರೆ. ನಂತರ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಲ್ಲದೇ ತಮ್ಮ ವಶಕ್ಕೆ ಪಡೆದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾರೋಷವಾಗಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲರಾದ ರಾಜ್ಯದ ಗೃಹ ಸಚಿವ ಡಾ ಪರಮೇಶ್ವರ್ ಅವರ ರಾಜೀನಾಮೆಗೆ ಆಗ್ರಹಿಸಿ, ಶಿವಮೊಗ್ಗ ಜಿಲ್ಲಾ ಬಿಜಿಪಿ ಯುವಮೋರ್ಚಾದ ನೂರಾರು ಕಾರ್ಯಕರ್ತರು ಬುಧವಾರ ಜಿಲ್ಲಾ ಎಸ್ಪಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.

ಬುಧವಾರ ಬೆಳಗ್ಗೆ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೇ ಜಮಾಯಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಖಂಡಿಸಿ, ಘೋಷಣೆ ಕೂಗಿದರು.
ಬಳಿಕ ನೂರಾರು ಸಂಖ್ಯೆಯಲ್ಲಿ ಇದ್ದ ಬಿಜೆಪಿ ಪ್ರತಿಭಟನಾಕಾರರು ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಲ್ಲದೇ ತಮ್ಮ ವಶಕ್ಕೆ ಪಡೆದಿದ್ದಾರೆ.


ಪ್ರತಿಭಟನೆಯಲ್ಲಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ್ ಆರ್ ವಿ, ನಗರ ಸಮಿತಿ ಅಧ್ಯಕ್ಷ ರಾಹುಲ್ ಬಿದರೆ, ಅರುಣ್ ಕುಗ್ವೆ ,ಮಾಲತೇಶ್, ಮಹಿಳಾ ಮುಖಂಡರಾದ ಮಂಗಳಾ, ಸುಮಿತ್ರಾ, ಚೈತ್ರಾ ಪೈ, ಕೆವಿ ಅಣ್ಣಪ್ಪ ಮತ್ತಿತರು ಭಾಗಿಯಾಗಿದ್ದರು.
ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ
ಸೀನಪ್ಪ ಶೆಟ್ಟಿ ವೃತ್ತದಲ್ಲಿ ಯುವ ಕಾಂಗ್ರೆಸ್ನಿಂದ ಪ್ರತಿಭಟನೆ
ಇದೇ ವೇಳೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೇಜವಾಬ್ದಾರಿಯಿಂದಾಗಿ ದೇಶದಲ್ಲಿ ಉಗ್ರರ ಕೃತ್ಯಗಳ ಹೆಚ್ಚಲು ಕಾರಣವಾಗಿದೆ ಎಂದು ಆರೋಪಿಸಿ ಬಳೆ ಪೋಸ್ಟ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿತು.

ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು , ಕೇಂದ್ರ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ದೇಶದಲ್ಲಿ ಉಗ್ರರ ಕೃತ್ಯ ಹೆಚ್ಚಳವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಹತ್ತಿರದಲ್ಲಿನ ಅಂಚೆ ಕಚೇರಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಳೆಗಳನ್ನು ರವಾನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಗ್ರ ದಾಳಿ ಹೆಚ್ಚಿವೆ.

ಚುನಾವಣಾ ವೇಳೆಯಲ್ಲಿಯೇ ಇಂತಹ ದಾಳಿಯಾಗುವುದು ಶಂಕೆ ಮೂಡಿಸಿತ್ತದೆ ಎಂದರು. ರಾಷ್ಟ್ರಪತಿಗಳು, ಅಸಮರ್ಥ ಗೃಹಸಚಿವ ಅಮಿತ್ ಶಾ ರನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎನ್ ರಮೇಶ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಚರಣ್ ಜಿ, ಮುಖಂಡರಾದ ರೇಷ್ಮಾ, ಗಿರೀಶ್ ,ಮಹಮ್ಮದ್ ಗೌಸ್, ಮಧುಸೂದನ್ ಗೌತಮ್ ಮತ್ತಿತರರು ಭಾಗಿಯಾಗಿದ್ದರು.
ವರದಿ: ಸೌಮ್ಯ ರೆಡ್ಡಿ,
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ






