DistrictShivamogga

ದೂರು ನೀಡಲು ಸಾರ್ವಜನಿಕರು ಹೆದರುವುದು ಬೇಡ!”ಪಬ್ಲಿಕ್ ಐ” ವ್ಯಾಟ್ಸಾಪ್‌ ಗ್ರೂಪ್‌ ರಚನೆ|ಪೋಲೀಸರೆಂದರೆ ಭಯ ಅಲ್ಲ ಭದ್ರತೆ-ನೂತನ SP ಬಿ.ನಿಖಿಲ್‌

ಪೊಲೀಸ್ ಠಾಣೆಗೆ ಬರುವ ಸಂತ್ರಸ್ತರೊಂದಿಗೆ ಗೌರವದಿಂದ ಸಂವಹನ ನಡೆಸಿ ಸೂಕ್ತ ರೀತಿ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಮುಕ್ತ ಮತ್ತು ಭದ್ರತೆಯ ವಾತಾವರಣ ನಿರ್ಮಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ನೂತನ ಎಸ್‌.ಪಿ ಬಿ.ನಿಖಿಲ್‌ ಹೇಳಿದರು.

ಶಿವಮೊಗ್ಗ: ಜಿಲ್ಲೆಯ ಜನರು ಈ ಹಿಂದೆ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಪೊಲೀಸ್‌ ಠಾಣೆಗೆ ಹೋಗುವ ಅನಿವಾರ್ಯತೆ ಇತ್ತು.

ಇನ್ನು ಪೊಲೀಸ ಠಾಣೆಗೆ ಹೋಗಲು ಕೆಲ ಜನರು ಭಯ ಮತ್ತು ಮುಜುಗರ ಪಡುತ್ತಿದ್ದರು.

ಆದರೆ ಈಗ ದೂರು ನೀಡಲು ತಂದಿರುವ ಹೊಸ ಪದ್ದತಿ ಜನಸ್ನೇಹಿ ಅಷ್ಟೇ ಅಲ್ಲ. “ಪೋಲೀಸರೆಂದರೆ ಭಯ ಅಲ್ಲ ಭದ್ರತೆ ” ಎಂಬ ಪರಿಕಲ್ಪನೆಯೊಂದಿಗೆ “ಪಬ್ಲಿಕ್ ಐ” ವ್ಯಾಟ್ಸಾಪ್‌ ಗ್ರೂಪ್‌ ರಚಿಸಲಾಗಿದೆ.

ತಮಗಾಗಿರುವ ಸಮಸ್ಯೆ ಹೇಳಿಕೊಂಡು ಈ “ಪಬ್ಲಿಕ್ ಐ” ವ್ಯಾಟ್ಸಾಪ್‌ ಗ್ರೂಪ್‌ಗೆ ಸಂದೇಶ್‌ ಕಳಹಿಸಿದರೇ ಸಾಕು. ಆ ಕೂಡಲೇ ಪೊಲೀಸರು ಸ್ಪಂದಿಸಲಿದ್ದಾರೆ ಎಂದು ನೂತನ ಎಸ್‌.ಪಿ ಬಿ.ನಿಖಿಲ್‌ ಭರವಸೆ ನೀಡಿದ್ದಾರೆ.

2026 ಹೊಸ ವರುಷದಂದು ಶಿವಮೊಗ್ಗ ಜಿಲ್ಲೆಯ ನೂತನ ಎಸ್‌.ಪಿ ಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಬಿ.ನಿಖಿಲ್‌ ಹಲವು ಜನಸ್ನೇಹಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ಶುಕ್ರವಾರದಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಬರುವ ಸಂತ್ರಸ್ತರೊಂದಿಗೆ ಗೌರವದಿಂದ ಸಂವಹನ ನಡೆಸಿ ಸೂಕ್ತ ರೀತಿ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಮುಕ್ತ ಮತ್ತು ಭದ್ರತೆಯ ವಾತಾವರಣ ನಿರ್ಮಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳು ದೂರುಗಳನ್ನ ಹೇಳಿಕೊಳ್ಳಲು ಅನುಕೂಲವಾಗುವಂತೆ “ಪಬ್ಲಿಕ್ ಐ” ವ್ಯಾಟ್ಸಾಪ್‌ ಗ್ರೂಪ್‌ ರಚಿಸಲಾಗಿದ್ದು, ದೂರುದಾರರು ವೈಯಕ್ತಿಕವಾಗಿ ತಮಗೆ ಕರೆ ಮಾಡಬಹುದಾಗಿದೆ.

ಕರೆ ಸ್ವೀಕರಿಸದಿದ್ದರೆ ಸಂದೇಶ ಕಳುಹಿಸಬಹುದು. ಜನರ ಕಷ್ಟಕ್ಕೆ ತಾವು ಸದಾ ಲಭ್ಯವಿರುವದಾಗಿ ಎಂದು ನೂತನ ಎಸ್‌.ಪಿ ಬಿ.ನಿಖಿಲ್‌ ಅಭಯ ನೀಡಿದರು.

ಜನತೆ ಮತ್ತು ಪೊಲೀಸರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮದ ಪಾತ್ರ ಬಹು ದೊಡ್ಡದು ಎಂದು ಅಭಿಪ್ರಾಯಪಟ್ಟರು.

ಪೊಲೀಸ್‌ ಇಲಾಖೆಯ ವ್ಯವಸ್ಥೆಯ ಕೆಲವು ಲೋಪಗಳನ್ನು ಹಾಗೂ ಒಳ್ಳೆಯ ಕೆಲಸಗಳನ್ನು ಎತ್ತಿ ತೋರಿಸುವ ಮೂಲಕ ಪೊಲೀಸ್‌ ಇಲಾಖೆ ಸದಾ ಜಾಗೃತರಾಗಿರುವಂತೇ ಮಾಡುವಲ್ಲಿ ಮಾಧ್ಯಮದ ಸಲಹೆ ಸೂಚನೆಗೆ ತಾವು ಬದ್ದವಾಗಿರುವದಾಗಿ ಎಸ್‌.ಪಿ ಬಿ.ನಿಖಿಲ್‌ ಹೇಳಿದರು.

ಸೈಬರ್ ಅಪರಾಧ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳನ್ನು ಕಡಿವಾಣ ಹಾಕಲು ಮಾಧ್ಯಮದವರ ಸಹಕಾರ ಕೋರಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ನಿಯಂತ್ರಣದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಡ್ರಗ್ಸ್ ಜಾಲದ ವಿರುದ್ದ ಪೊಲೀಸ್ ಇಲಾಖೆ ನಿರಂತರವಾಗಿ ಸಮರ ಸಾರಲಿದೆ.

ಶಿವಮೊಗ್ಗವನ್ನು ಡ್ರಗ್ಸ್ ಮುಕ್ತ ಮಾದರಿ ಜಿಲ್ಲೆಯನ್ನಾಗಿ ಮಾಡುವುದು ತಮ್ಮ ಗುರಿ ಎಂದು ನೂತನ ಎಸ್‌.ಪಿ ಬಿ.ನಿಖಿಲ್‌ ತಿಳಿಸಿದರು.

ಇನ್ನು ಸನ್ಮಿತ್ರ ಕಾರ್ಯಕ್ರಮದ ಮೂಲಕ ಡ್ರಗ್ಸ್ ಕುರಿತು ಶಾಲಾ ಕಾಲೇಜುಗಳಲ್ಲಿ ಜನಜಾಗೃತಿ ಮೂಡಿಸುವುದಾಗಿ ಹೇಳಿದರು. ಇನ್ನು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ರಮೇಶ್, ಕಾರ್ಯಪ್ಪ, ಪ್ರೊಬೆಷನರಿ ಪೊಲೀಸ್ ಅಧಿಕಾರಿ ಮೇಘಾ ಅಗರ್ವಾಲ್ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button