100ಕೋ.ರೂ.ವೆಚ್ಚದಲ್ಲಿ ಮಳೆಮಾಪನ ಕೇಂದ್ರ ಸ್ಥಾಪನೆ|ಪ್ರತಿ ತಾಲೂಕಿಗೂ ರೈಲು ಸಂಪರ್ಕದ ಗುರಿ|ಜನರ ನಿರೀಕ್ಷೆಗೆ ತಕ್ಕಂತೇ ಕೆಲಸ ಮಾಡಿದ್ದೇನೆ-ಸಂಸದ ಬಿ.ವೈ.ರಾಘವೇಂದ್ರ
ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ರೈಲ್ವೇ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಶೇ.75 ರಷ್ಟು ಪೂರ್ಣಗೊಂಡಿದ್ದು, ಶೇ.90 ರಷ್ಟು ಭೂಸ್ವಾಧೀನ ಪೂರ್ಣಗೊಂಡ ನಂತರ ರೈಲ್ವೆ ಇಲಾಖೆಯು ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ: ನಾಲ್ಕು ಬಾರಿ ಸಂಸದನಾಗಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಹಗಲಿರಳು ಶ್ರಮಿಸುತ್ತಿರುವದಾಗಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಸಂಸದನಾಗಿ ನಾಲ್ಕು ಬಾರಿಯ ಈ ಅವಧಿಯನ್ನು ಜನಪರ ಕೆಲಸಗಳಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ತೃಪ್ತಿ ತಮಗಿದೆ ಎಂದು ತಿಳಿಸಿದರು.
ಶುಕ್ರವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಯಾವ ತಾಲೂಕು ರೈಲು ಸಂಪರ್ಕದಿಂದ ವಂಚಿತವಾಗಬಾರದೆಂಬ ಇರಾದೆ ಹೊಂದಿದ್ದು, ತೀರ್ಥಹಳ್ಳಿ ಮತ್ತು ಸೊರಬ ತಾಲ್ಲೂಕಿಗೂ ರೈಲು ಸಂಪರ್ಕ ಕಲ್ಪಿಸಲು ಸಾಕಷ್ಟು ಪ್ರಯತ್ನ ನಡೆದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಯೋಜನೆಗಳು, ಹೊಸ ರೈಲು ಸಂಪರ್ಕದ ಪ್ರಯತ್ನ, ಪ್ಲೈಓವರ್, ಸೇರಿದಂತೆ ಸಾಕಾರಗೊಂಡ ಕಾಮಗಾರಿ ಜಾರಿಯಲ್ಲಿರುವ ಪ್ರಯತ್ನ ಕುರಿತು ಮಾಹಿತಿ ನೀಡಿದರು.
2 ಹೊಸ ರೈಲು ಮಾರ್ಗಗಳಾದ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರಿಗೆ ರೈಲು ಸಂಪರ್ಕ ಕಲ್ಪಿಸುವುದು ಹಾಗೂ ಶಿವಮೊಗ್ಗ-ತೀರ್ಥಹಳ್ಳಿ-ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸಲು ರೈಲ್ವೇ ಇಲಾಖೆಯಿಂದ ಸರ್ವೇ ಕಾರ್ಯ ನಡೆದಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಶಿಕಾರಿಪುರ- ರಾಣೆಬೆನ್ನೂರು ರೈಲ್ವೇ ಯೋಜನೆ|
ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ರೈಲ್ವೇ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಶೇ.75 ರಷ್ಟು ಪೂರ್ಣಗೊಂಡಿದ್ದು, ಶೇ.90 ರಷ್ಟು ಭೂಸ್ವಾಧೀನ ಪೂರ್ಣಗೊಂಡ ನಂತರ ರೈಲ್ವೆ ಇಲಾಖೆಯು ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಇನ್ನು ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಟರ್ಮಿನಲ್ ಕಾಮಗಾರಿಗೆ ಹಲವು ಅಡೆತಡೆಗಳಿವೆ. ಅದೆಲ್ಲ ನಿವಾರಣೆಯಾಗಿ ಯೋಜನೆ ಪೂರ್ಣಗೊಂಡರೆ ಶಿವಮೊಗ್ಗಕ್ಕೆ ರೈಲಿನ ಸಂಪರ್ಕ ಹೆಚ್ಚಾಗಲಿದೆ ಮಾತ್ರವಲ್ಲ ಶಿವಮೊಗ್ಗ ನಗರ ಪರ್ಯಾಯ ಕೇಂದ್ರವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ಗುಂಡಪ್ಪ ಶೆಡ್, ವಿದ್ಯಾನಗರದ ಅಂಡರ್ ಪಾಸ್ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ. ಜನದಟ್ಟಣೆ ಇರುವಲ್ಲಿ ಹಲವು ಸ್ಕೈವಾಕ್ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.
ಇನ್ನು 100 ಕೋಟಿ ರೂ. ವೆಚ್ಚದಲ್ಲಿ ಮಳೆಮಾಪನ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.
ಶಿವಪ್ಪನಾಯ್ಕ ಮಾರುಕಟ್ಟೆಯ ಬಳಿಯ ಅಂಡರ್ ಪಾಸ್ ನಿಮಾರ್ಣಗೊಂಡು ಹಲವು ವರ್ಷಗಳಾಗಿದ್ದರೂ ಬೀಗ ಹಾಕಿದ ಸ್ಥಿತಿಯಲ್ಲಿದ್ದು ಸಾರ್ವಜನಿಕರ ಬಳಕೆಗೆ ಸಿಗದಂತಾಗಿದೆ. ಆದಷ್ಟು ಬೇಗ ಅಲ್ಲಿನ ಸಮಸ್ಯೆ ನಿವಾರಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇದಕ್ಕೂ ಮುನ್ನ ಮಾಧ್ಯಮ ಸಂವಾದಕ್ಕೆ ಆಗಮಿಸಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಹಿರಿಯ ಪತ್ರಕರ್ತ ಹಾಗೂ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹಾಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಯು.ವೈದ್ಯನಾಥ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ವೇದಿಕೆ ಮೇಲೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹಾಲಸ್ವಾಮಿ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.








