DistrictShivamogga

ಶಿವಮೊಗ್ಗ: ಹೊರ ವರ್ತುಲ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ|1200 ಮೀಟರ್ ಉದ್ದದ ರಿಂಗ್ ರಸ್ತೆ|ಸಾವಿರ ಅಪಾಟರ್ಮೆಂಟ್‌ ನಿರ್ಮಾಣ-ಹೆಚ್.ಎಸ್.ಸುಂದರೇಶ್

ಊರಗಡೂರಿನಲ್ಲಿ 4 ಎಕರೆ ಜಾಗದಲ್ಲಿ 1, 2 ಮತ್ತು 3 ಬಿಹೆಚ್‌ಕೆಯ ಸುಮಾರು 1000 ಫ್ಲಾಟ್‌ಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದು ಆಡಳಿತಾತ್ಮಕ ಮಂಜೂರಾತಿಗೆ ಕಳುಹಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.

ಶಿವಮೊಗ್ಗ: 5 ಕೋಟಿರೂ. ವೆಚ್ಚದಲ್ಲಿ ಹೊರವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಹಂತಹಂತವಾಗಿ ರಿಂಗ್ ರಸ್ತೆ ಅಭಿವೃದ್ದಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 3.70 ಕೋಟಿ ವೆಚ್ಚದ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಿಸುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪದವರೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರದಂದು ನಡೆದ 60.00 ಮೀ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು 34 ಕಿ.ಮೀ. ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.

ಊರಗಡೂರಿನಲ್ಲಿ 4 ಎಕರೆ ಜಾಗದಲ್ಲಿ 1, 2 ಮತ್ತು 3 ಬಿಹೆಚ್‌ಕೆಯ ಸುಮಾರು 1000 ಫ್ಲಾಟ್‌ಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದು ಆಡಳಿತಾತ್ಮಕ ಮಂಜೂರಾತಿಗೆ ಕಳುಹಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.

ಇನ್ನು 15 ರಿಂದ 20 ದಿನಗಳಲ್ಲಿ ಮಂಜೂರಾತಿ ದೊರೆತು ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದೆಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ವಿವರಿಸಿದರು.

ಅದೇ ರೀತಿ ಜೆಹೆಚ್ ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಅಪಾಟರ್ಮೆಂಟ್‌ ನಿರ್ಮಿಸುವ ಯೋಜನೆಯಿದ್ದು ಖಾಸಗಿ ಅಪಾಟರ್ಮೆಂಟ್‌ನಲ್ಲಿರುವಂತೆ ಸ್ವಿಮ್ಮಿಂಗ್ ಪೂಲ್, ಪಾರ್ಕ್, ಕ್ಲಬ್ ಹೌಸ್, ಸಭಾಂಗಣ ಇತರೆ ಎಲ್ಲ ಸೌಲಭ್ಯ ಹೊಂದಿರುವ ಅಪಾಟರ್ಮೆಂಟ್‌ಗಳನ್ನು ನಿರ್ಮಿಸಲಾಗುವುದು ಎಂದರು.

ಸಾಮಾನ್ಯ ಜನರ ಅನುಕೂಲಕ್ಕಾಗಿ ವಿವೇಕಾನಂದ ಬಡಾವಣೆಯ ಒಂದೂಕಾಲು ಎಕರೆ ಜಾಗದಲ್ಲಿ ಸೂಡಾ ವತಿಯಿಂದ ದೊಡ್ಡ ಮಾಲ್ ಅನ್ನು ನಿರ್ಮಿಸಲಾಗುವುದು ಎಂದ ಅವರು, ಸೋಮಿನಕೊಪ್ಪ ರಸ್ತೆಯಲ್ಲಿ ಮತ್ತೊಂದು ಮಾಲ್‌ ಅನ್ನು ನಿರ್ಮಿಸುವುದಾಗಿ ತಿಳಿಸಿದರು.

ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ 100 ಪಾರ್ಕುಗಳನ್ನು ಅಭಿವೃದ್ದಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಈಗಾಗಲೇ ವಾಕಿಂಗ್ ಪಾಥ್, ಲೈಟಿಂಗ್, ಗಿಡ ನೆಡಲು ಸ್ಥಳಾವಕಾಶ ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ 50 ಪಾರ್ಕುಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಸೂಡಾ ವತಿಯಯಿಂದ ಕೆರೆಗಳು, ಪಾರ್ಕ್ಗಳ ಅಭಿವೃದ್ದಿ ಕಾರ್ಯದೊಂದಿಗೆ ಜನ ಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ಹಂಚಿಕೆ ಮಾಡುವ ಕೆಲಸ ಆಗುತ್ತಿದೆ ಎಂದರು.

ರಾಜ್ಯ ಸರ್ಕಾರವು ನಗರಾಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.

ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 12 ಎಕರೆ ಜಾಗ ಮಂಜೂರಾಗಿದ್ದು, ವೇಗವಾಗಿ ಕಾಮಗಾರಿ ನಡೆಯಬೇಕಿದೆ .ಜೊತೆಗೆ ಫುಟ್‌ಬಾಲ್ ಕ್ರೀಡಾಂಗಣ ಮಂಜೂರಾತಿ ಬಗ್ಗೆಯೂ ಕ್ರೀಡಾ ಸಚಿವರ ಬಳಿ ಮಾತನಾಡುವುದಾಗಿ ತಿಳಿಸಿದರು.

ಸೂಡಾ ಸದಸ್ಯರಾದ ಪ್ರವೀಣ್, ಸೂಡಾ ಆಯುಕ್ತರಾದ ಬಿ.ಆರ್ ಮಂಜುನಾಥ್, ಎಇ ಗಂಗಾಧರ್, ಎಇಇ ಬಸವರಾಜಪ್ಪ, ಟಿಪಿಎಂ ಅಭಿಲಾಷ್, ಸ್ಥಳೀಯ ನಿವಾಸಿಗಳು ಹಾಜರಿದ್ದರು.

Follow Us

Leave a Reply

Your email address will not be published. Required fields are marked *

Back to top button