ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಪ್ರತಿಭಟನೆ|ಕೆ.ಎಸ್.ಈಶ್ವರಪ್ಪ, ಎ.ಟಿ.ರಾಮಸ್ವಾಮಿ ಭಾಗಿ|ಯೋಜನೆ ಕೈಬಿಡದಿದ್ದರೇ ಉಗ್ರ ಹೋರಾಟದ ಎಚ್ಚರಿಕೆ
ಅರಣ್ಯ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕಾದ ಸರ್ಕಾರವೇ ಕಾಯ್ದೆ ಉಲ್ಲಂಘಿಸಿ ಯೋಜನೆ ಜಾರಿಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಎ.ಟಿ.ರಾಮಸ್ವಾಮಿ ಕಿಡಿಕಾರಿದರು.

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜನರ ಉದ್ದಾರಕ್ಕಾಗಿ ಮಾಡುತ್ತಿಲ್ಲ. ಈ ಯೋಜನೆ ಜಾರಿಗೆ ತರುವುದರ ಹಿಂದೆ ಕೇವಲ ಜೇಬು ತುಂಬಿಸಿಕೊಳ್ಳುವದಾಗಿದೆ ಎಂದು ಮಾಜಿ ಶಾಸಕ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಯ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ.

ಈ ಯೋಜನೆಯಿಂದ ನಮ್ಮ ನೀರಿನ ಭದ್ರತೆಗೆ ಕಂಟಕಪ್ರಾಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜಲಮೂಲಕ್ಕೆ ಧಕ್ಕೆ ತರಲಿರುವ ಈ ಯೋಜನೆಯನ್ನು ಈ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಗುರುವಾರದಂದು ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಗೋಪಿಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಅವರು, ಪ್ರಪಂಚದ ಅಪರೂಪದ ಜೀವವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಒಂದು ಮರಕಡಿಯಲು ಬಿಡುವುದಿಲ್ಲ ಎಂದು ಹೇಳಿದರು.

ಅರಣ್ಯ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕಾದ ಸರ್ಕಾರವೇ ಕಾಯ್ದೆ ಉಲ್ಲಂಘಿಸಿ ಯೋಜನೆ ಜಾರಿಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಎ.ಟಿ.ರಾಮಸ್ವಾಮಿ ಕಿಡಿಕಾರಿದರು.
ಪ್ರತಿಭಟನಾ ಜಾಥಾದ ನೇತೃತ್ವ ವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಹಾಗೂ ಬಂಗಾರಮಕ್ಕಿ ಸ್ವಾಮೀಜಿ ಯೋಜನೆಯಿಂದಾಗುವ ಪರಿಸರ ಹಾನಿ ಹಾಗೂ ಆರ್ಥಿಕ ನಷ್ಟದ ಅಂಕಿ ಅಂಶಗಳನ್ನು ವಿವರಿಸಿದರು.
ಸಾಧಕ ಬಾಧಕದ ಅರಿವಿಲ್ಲದೇ ಸೂಕ್ತ ಅಧ್ಯಯನ ನಡೆಸದೇ ಯೋಜನೆಗೆ ಮುಂದಾಗಿದ್ದನ್ನು ಖಂಡಿಸಿದ ಅವರುಗಳು, ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಯಾಗದಂತೆ ನೋಡಿಕೊಳ್ಳೋಣ ಎಂದರು.
ಪ್ರತಿಭಟನೆಯಲ್ಲಿ ಪರಿಸರವಾದಿ ಪ್ರೊ. ಎಂ.ಬಿ. ಕುಮಾರಸ್ವಾಮಿ, ವಿವಿಧ ಮಠಾಧೀಶರು, ಪರಿಸರಪ್ರೇಮಿಗಳು ಹಾಗೂ ಸಂಘಟನೆ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







