ಕೊಲೆಯಾದ ಬಾಲಕನ ಸಮಾಧಿ ಕಟ್ಟೆ ಒಡೆದ ಪುಂಡರು|ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಡಿಸಿಎಂ |ಸಂಕೇತ್ ತಾಯಿಗೆ ಶಾಲೆಯಲ್ಲಿ ನೌಕರಿ ನೀಡಿದ ಕೆ.ಎಸ್.ಈಶ್ವರಪ್ಪ
ಮನೆಯಲ್ಲಿ ಇದ್ದಷ್ಟು ಹೊತ್ತು ಮಗನ ಸಾವಿನ ದುಃಖ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ನಂದನ ಶಾಲೆಯಲ್ಲಿ ನೌಕರಿ ನೀಡುವದಾಗಿ ಇದೇ ವೇಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಭಯ ನೀಡಿದರು.

ಶಿವಮೊಗ್ಗ: ಅನ್ಯಕೋಮಿನ ಬಾಲಕರಿಂದ ಹತ್ಯೆಯಾಗಿದ್ದ ಸೂಳೆಬೈಲಿನ ಸಂಕೇತ್ ಸಮಾದಿ ಕಟ್ಟೆಯನ್ನು ಧ್ವಂಸಗೊಳಿಸಿದ್ದ ಸ್ಥಳಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಜಿ.ಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಭೇಟಿ ನೀಡಿ, ಮಾಹಿತಿ ಪಡೆದರು.
ಕಳೆದ ಫೆಬ್ರುವರಿ 23 ರಂದು ಕೊಲೆಯಾಗಿದ್ದ ಸಂಕೇತ್ನ ಅಂತ್ಯಕ್ರಿಯೆ ನಂತರ ಗುಡ್ಡೆಮರಡಿ ಗ್ರಾಮದಲ್ಲಿ ಸಮಾಧಿ ಕಟ್ಟೆ ನಿರ್ಮಿಸಲಾಗಿತ್ತು.

ನಿನ್ನೆ ಬುಧವಾರದಂದು ಕೆಲ ಪುಂಡರು ಸಮಾಧಿ ಕಟ್ಟೆಯನ್ನು ಧ್ವಂಸಗೊಳಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ನಂತರ ಸಂಕೇತ್ನ ಕುಟುಂಬಸ್ಥರು ಮತ್ತೆ ಸಮಾಧಿ ಕಟ್ಟೆಯನ್ನು ದುರಸ್ಥಿಗೊಳಿಸಿದ್ದಾರೆ.
ಗುರುವಾರದಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ರಾಷ್ಟ್ರಭಕ್ತರ ಬಳಗದ ಪ್ರಮುಖರೊಂದಿಗೆ ಸಂಕೇತ್ನ ಸಮಾಧಿಕಟ್ಟೆಗೆ ಆಗಮಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಳಿಕ ಸಂಕೇತ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕೇತ್ ಕೊಲೆ ಮತ್ತು ಸಮಾಧಿ ಧ್ವಂಸ ಪ್ರಕರಣ ವ್ಯವಸ್ಥಿತ ಸಂಚು ಎಂದು ಆರೋಪಿಸಿದರು.
ಸರ್ಕಾರ ಪರಿಹಾರ ನೀಡಿದ ಮಾತ್ರಕ್ಕೆ ಸಮಸ್ಯೆ ನಿಲ್ಲದು. ದುಷ್ಕರ್ಮಿಗಳ ದೇಶದ್ರೋಹಿ ಮನಸ್ಥಿತಿ ಬದಲಾಯಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ರಕ್ಷಣಾಧಿಕಾರಿಗಳ ಬಗ್ಗೆ ನನಗೆ ನಂಬಿಕೆ ಇದೆ. ಈಗಾಗಲೇ ಎರಡು ತಂಡ ರಚಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ, ಸರ್ಕಾರ ದುಷ್ಕರ್ಮಿಗಳ ಬಗ್ಗೆ ಮೃಧು ಧೋರಣೆ ಮನಸ್ಥಿತಿ ಬದಲಾಯಿಸಬೇಕಿದೆ ಎಂದರು.
ಸಂಕೇತ್ ತಾಯಿಗೆ ನಂದನ ಶಾಲೆಯಲ್ಲಿ ನೌಕರಿ!
ಮನೆಯಲ್ಲಿ ಇದ್ದಷ್ಟು ಹೊತ್ತು ಮಗನ ಸಾವಿನ ದುಃಖ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ನಂದನ ಶಾಲೆಯಲ್ಲಿ ನೌಕರಿ ನೀಡುವದಾಗಿ ಇದೇ ವೇಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಭಯ ನೀಡಿದರು.

ಮಕ್ಕಳ ಜೊತೆಗೆ ಕಾಲ ಕಳೆದರೆ ಮನಸ್ಸು ಹಗುರಾಗುತ್ತದೆ ಎಂದು ಸಲಹೆ ನೀಡಿ ಕೆಲಸ ಮಾಡಲು ಒಪ್ಪಿಸಿದರು.ಮಾಜಿ ಕಾರ್ಪೋರೇಟರ್ ಈ.ವಿಶ್ವಾಸ್, ಮೋಹನ್ ಜಾಧವ್, ರಾಜು, ಕುಬೇರಪ್ಪ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯ ಕನ್ನಡ
ಶಿವಮೊಗ್ಗ.







