ಶಿವಮೊಗ್ಗ: 63 ನೇ ಫಲಪುಷ್ಪ ಪ್ರದರ್ಶನ|ಜ.24ರಿಂದ 4ದಿನಗಳ ಕಾಲ ಫ್ರೀಡಂಪಾರ್ಕ್‌ನಲ್ಲಿ ಆಯೋಜನೆ|ಲಕ್ಷ ಹೂವುಗಳಿಂದ ವಿವಿಧ ಕಲಾಕೃತಿ ರಚನೆ-ಹೇಮಂತ್.ಎನ್
ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂವುಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯಂ, ಕಾಮಿನಿ ಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಿ ವಿಶೇಷವಾದ ಹೂವಿನ ಕಲಾಕೃತಿಗಳನ್ನು ರಚನೆ ಇರುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್. ಎನ್ ತಿಳಿಸಿದರು.

ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63 ನೇ ಫಲ ಪುಷ್ಪ ಪ್ರದರ್ಶನವನ್ನು ಜ.24 ರಿಂದ 27 ರವರೆಗೆ ನಾಲ್ಕು ದಿನಗಳ ಕಾಲ ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್. ಎನ್ ತಿಳಿಸಿದರು.
ಮಂಗಳವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಲೆನಾಡು ಕರಕುಶಲ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.

ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪನವರು ಜ.24 ರ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ನಗರ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ಆಕರ್ಷಣೆ|
ಕೆಳದಿ ಶಿವಪ್ಪ ನಾಯಕನ ಪ್ರತಿಮೆ|
ಜೋಗ ಜಲಪಾತದ ಕಲಾಕೃತಿ|
ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂವುಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯಂ, ಕಾಮಿನಿ ಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಿ ವಿಶೇಷವಾದ ಹೂವಿನ ಕಲಾಕೃತಿಗಳನ್ನು ರಚನೆ ಇರುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್. ಎನ್ ತಿಳಿಸಿದರು.

ವಿವಿಧ ಜಾತಿಯ ಹೂವುಗಳಿಂದ 16 ಅಡಿ ಎತ್ತರದ ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕನ ಪ್ರತಿಮೆ ರಚನೆ, 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನದ ರಚನೆ, ಹೂವುಗಳು ಹಾಗೂ ಫೋಲಿಯೇಜ್‌ನಿಂದ 60 ಅಡಿ ಅಗಲ x 22 ಅಡಿ ಎತ್ತರದ ಜೋಗ ಜಲಪಾತದ ಕಲಾಕೃತಿಗಳು ಈ ಬಾರಿಯ ಆಕರ್ಷಣೆಗಳಾಗಿದ್ದು, ಹೂವಿನ ಐ ಲವ್ ಶಿವಮೊಗ್ಗ ಸೆಲ್ಫಿ ಪಾಯಿಂಟ್ ಕುಜ್ಬ ಗಿಡಗಳು(ಬೋನ್ಸಾಯ್) ಗಿಡಗಳ ಪ್ರದರ್ಶನ ಸಹ ಇರುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ವಿವರಿಸಿದರು.
ಮಾರಾಟ ಮೇಳ|
ಕ್ರಾಫ್ಟ್ಸ್ ಆಫ್ ಮಲ್ನಾಡ್ ಎಂಬ ಹೆಸರಿನ ಸ್ವಸಹಾಯ ಸಂಘದ ಮಹಿಳೆಯರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಗುಂಪಿನ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕ್ರಾಫ್ಟ್ಸ್ ಆಫ್ ಮಲ್ನಾಡ್ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಬ್ರಾಂಡಿಗ್ ಮಾಡಿದ್ದು, ಈಗಾಗಲೇ ಈ ಬ್ರಾಂಡ್ ಅಡಿಯಲ್ಲಿ ಮಹಿಳೆಯರು ತಯಾರಿಸಿದ ದೀಪಗಳು ಮತ್ತಿತರೆ ಉತ್ಪನ್ನಗಳ ಉತ್ತಮ ಮಾರಾಟವಾಗಿದೆ.
ಇದೀಗ ವಿಶೇಷವಾಗಿ ಇ-ಕಾಮರ್ಸ್ ವೆಬ್‌ಸೈಟ್ ರಚನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ವಿವಿಧ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅವರು, ಮೇಳದ ಉದ್ಘಾಟನೆಯಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ವೆಬ್‌ಸೈಟ್‌ಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಮಳಿಗೆಗಳು ಅದರ ವೈಶಿಷ್ಟತೆಗಳು|
ಮೇಳದ ಮಳಿಗೆಗಳಲ್ಲಿ ರಾಜ್ಯ, ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣ್ಣಿನ ಅಲಂಕಾರಿಕ ಉತ್ಪನ್ನಗಳು, ಮ್ಯಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ ಮತ್ತು ಭತ್ತದ ತೋರಣ, ಈಚಲು ಚಾಪೆ, ಮಣ್ಣಿನ ಆಭರಣಗಳು, ಮರದ ಕೆತ್ತನೆಗಳು, ಖೌದಿ ಉತ್ಪನ್ನಗಳು, ಕೊಪ್ಪಳದ ಕಿನ್ನಾಳ ಉತ್ಪನ್ನಗಳು, ಕೊಪ್ಪಳದ ಬನಾನ ಫೈಬರ್ ಉತ್ಪನ್ನಗಳು, ಚಿಕ್ಕಬಳ್ಳಾಪುರ ಲೆದರ್ ಉತ್ಪನ್ನಗಳು, ನವಲಗುಂದ ದುರಿ, ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು, ಬೀದರ್ ಜಿಲ್ಲೆಯ ಬಿದರಿ ಉತ್ಪನ್ನಗಳು ಹಾಗೂ ಅಕ್ಕ ಕೆಫೆಯ ಸದಸ್ಯರು, ಇತರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತವೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ತಿಳಿಸಿದರು. ಅದೇ ರೀತಿ ಸಿರಿಧಾನ್ಯ ಮೇಳ ಹಾಗೂ ಕೈ ಮಗ್ಗ ಜವಳಿ ಮೇಳವನ್ನು ಸಹ ಆಯೋಜಿಸಲಾಗಿದೆ ಎಂದರು.
ರೈತರಿಗಾಗಿ ವಿವಿಧ ಸ್ಪರ್ಧೆಗಳು|
ಉತ್ಪನ್ನಗಳ ಪ್ರದರ್ಶನ|
ಇನ್ನು ರೈತ ಬಾಂಧವರಿಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬೆಳೆದ ವಿಶಿಷ್ಟ, ವಿಶೇಷ ರೀತಿಯ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಜ.26 ರ ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ.
ಹೂ ರಂಗೋಲಿ ಸ್ಪರ್ಧೆ|
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಹೂ, ಹಣ್ಣು, ತರಕಾರಿ, ಬೇಳೆಕಾಳುಗಳ ಹಾಗೂ ದವಸ ಧಾನ್ಯಗಳನ್ನು ಬಳಸಿ ರಂಗೋಲಿ ರಚನೆ ಮಾಡಬೇಕು ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಫಲ ಪುಷ್ಪ ಪ್ರದರ್ಶನದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಅಭಿನಂದಿಸಲಾಗುವುದು ಎಂದು ಹೇಳಿದರು.
ಕಳೆದ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಜನ ಭೇಟಿ ನೀಡಿ ಸುಮಾರು ರೂ.20 ಲಕ್ಷ ವಹಿವಾಟು ಆಗಿತ್ತು. ಈ ಬಾರಿಯೂ ಜಿಲ್ಲೆಯ ಜನತೆ ಉತ್ತಮವಾಗಿ ಸ್ಪಂದಿಸುವ ಎಂದು ಹೇಮಂತ್.ಎನ್ ಆಶಯವನ್ನು ವ್ಯಕ್ತಪಡಿಸಿದರು.
ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ವೈ ಆರ್ ಮಲ್ಲಿಕಾರ್ಜುನ, ದುಮ್ಮಳ್ಳಿ ರಘು, ಚಂದ್ರಕಾಂತ ಹಸಗೋಡು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







