ಶಿವಮೊಗ್ಗ:ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ಬೇಡ|ಕೆಪಿಟಿಸಿಎಲ್ ನೌಕರರಿಂದ ಪ್ರತಿಭಟನೆ|ದರ ಹೆಚ್ಚಿಸಿ, ಗ್ರಾಹಕರ ಹಿತ ನಿರ್ಲಕ್ಷವಾಗುವ ಸಾಧ್ಯತೆ ಆರೋಪ
ಎಂಆರ್ ಎಸ್ ವೃತ್ತದಲ್ಲಿರುವ ವಿದ್ಯುತ್ ಭವನ ಕಚೇರಿ ಬಳಿ ಪ್ರತಿಭಟನೆ ನಡೆಸಿದ ನೂರಾರು ಕೆಪಿಟಿಸಿಎಲ್ ಸಿಬ್ಬಂದಿ, ಸರ್ಕಾರಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಟಾಟಾ ಪವರ್ ಲಿಮಿಟೆಡ್ ಖಾಸಗಿ ಕಂಪನಿಗೆ ವಹಿಸುವುದನ್ನು ತೀವ್ರವಾಗಿ ವಿರೋಧಿಸಿದರು.

ಶಿವಮೊಗ್ಗ: ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದೆಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಬುಧವಾರದಂದು ಕೆಪಿಟಿಸಿಎಲ್ ನೌಕರರ ಸಂಘದ ಜಿಲ್ಲಾ ಘಟಕದ ಸಿಬ್ಬಂದಿ ಬೃಹತ್ ಪ್ರತಿಭಟನೆ ನಡೆಸಿದರು.
ಎಂಆರ್ ಎಸ್ ವೃತ್ತದಲ್ಲಿರುವ ವಿದ್ಯುತ್ ಭವನ ಕಚೇರಿ ಬಳಿ ಪ್ರತಿಭಟನೆ ನಡೆಸಿದ ನೂರಾರು ಕೆಪಿಟಿಸಿಎಲ್ ಸಿಬ್ಬಂದಿ, ಸರ್ಕಾರಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಟಾಟಾ ಪವರ್ ಲಿಮಿಟೆಡ್ ಖಾಸಗಿ ಕಂಪನಿಗೆ ವಹಿಸುವುದನ್ನು ತೀವ್ರವಾಗಿ ವಿರೋಧಿಸಿದರು.

ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ವಿದ್ಯತ್ ವಿತರಣಾ ಕಂಪನಿಗಳು ನಷ್ಟದಲ್ಲಿದ್ದರೂ ಕೂಡ ದರ ಹೆಚ್ಚಳ ಮಾಡದೇ ಗ್ರಾಹಕರಿಗೆ ಕಡಿಮೆ ದರದಲ್ಲೇ ವಿದ್ಯುತ್ ಪೂರೈಸುತ್ತಿದ್ದು, ಲಾಭಕ್ಕಿಂತ ಗ್ರಾಹಕರ ಸೇವೆಗೆ ಆಧ್ಯತೆ ನೀಡಿವೆ.
ಆದರೆ ವಿದ್ಯುತ್ ವಿತರಣಾ ಪರವಾನಿಗೆಯನ್ನು ಖಾಸಗಿ ಕಂಪನಿಗಳಿಗೆ ನೀಡಿದರೆ ಲಾಭದ ಉದ್ದೇಶಕ್ಕಾಗಿ ಮನಸೋ ಇಚ್ಚೆ ದರ ಹೆಚ್ಚಿಸಿ ಗ್ರಾಹಕರ ಹಿತ ನಿರ್ಲಕ್ಷಿಸಲ್ಪಡುತ್ತದೆ ಎಂದು ಆರೋಪಿಸಿದರು.

ಹೀಗಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಈಗಾಗಲೇ 15 ಸಾವಿರ ಆಕ್ಷೇಪಣಾ ಅರ್ಜಿಗಳನ್ನ ಸಲ್ಲಿಸಿದ್ದು ಟಾಟಾ ಪವರ್ ಕಂಪನಿ ಲಿಮಿಟೆಡ್ ಆಯಾ ಪ್ರದೇಶಕ್ಕೆ ಸಮಾನಾಂತರವಾಗಿ ವಿದ್ಯುತ್ ವಿತರಿಸಲು ಕೋರಿರುವ ಪರವಾನಿಗೆ ಅರ್ಜಿ ತಿರಸ್ಕರಿಸಬೇಕೆಂದು ಕೆಪಿಟಿಸಿಲ್ ಶಿವಮೊಗ್ಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಇಂಧೂದರ್ ಒತ್ತಾಯಿಸಿದರು.
ಪ್ರತಿಭಟನಾಕಾರರ ಆಗ್ರಹ ಮತ್ತು ಆತಂಕಗಳೇನು?
1.ಸರ್ಕಾರಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನ ಖಾಸಗೀಕರಣಗೊಳಿಸಿದರೆ ಸಾವಿರಾರು ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಮರೀಚಿಕೆಯಾಗಲಿದ್ದು, ಉದ್ಯೋಗ ಭದ್ರತೆ ಆತಂಕ ಎದುರಾಗಲಿದೆ
2.ಬಡ, ಮಧ್ಯಮ ವರ್ಗದ ಉದ್ಯೋಗ ಮೀಸಲಾತಿಗೆ ಪೆಟ್ಟುಬೀಳಲಿದೆ.
3.ಖಾಸಗೀ ಕಂಪನಿಗಳು ನಗರ ಮತ್ತು ಲಾಭದಾಯಕ ಪ್ರದೇಶಗಳಿಗೆ ಮಾತ್ರ ಸೇವೆನೀಡಲಿದ್ದು, ಗ್ರಾಮೀಣ, ಹಿಂದುಳಿದ ಪ್ರದೇಶಗಳು,ಮಲೆನಾಡು,ಕರಾವಳಿ ಪ್ರದೇಶಗಳು ನಿರ್ಲಕ್ಷ್ಯ ಕ್ಕೊಳಪಡುವ ಆತಂಕವಿದೆ.
4 .ಸಾರ್ವಜನಿಕ ಹಣದಿಂದ ಸರ್ಕಾರ ನಿರ್ಮಿಸಿದ ವಿದ್ಯುತ್ ಜಾಲ, ಗ್ರಿಡ್, ಕಂಬಗಳು, ಮೂಲಭೂತ ಸೌಕರ್ಯಗಳನ್ನ ಖಾಸಗೀ ಕಂಪನಿಗಳಿಗೆ ವಹಿಸುವುದು ಜನರ ಹಣ ದುರುಪಯೋಗವಾಗಲಿದೆ.ಸಣ್ಣ, ಮಧ್ಯಮ , ಕೈಗಾರಿಕೆಗಳು ದರ ಏರಿಕೆ ಪರಿಣಾಮದಿಂದ ಅಭಿವೃದ್ಧಿ ಕುಂಠಿತವಾಗಲಿದ್ದು ಎಲ್ಲ ವಸ್ತುಗಳ ಬೆಲೆ ಹೆಚ್ಚಳವಾಗುವ ಅಪಾಯವಿದೆ.
5.ಸರ್ಕಾರಿ ಕಂಪನಿಗಳು , ಜನರು, ಕಾನೂನು, ಜನಪ್ರತಿನಿಧಿಗಳಿಗೆ ಉತ್ತರದಾಯಿತ್ವ ಹೊಂದಿರುತ್ತವೆ. ಖಾಸಗೀ ಕಂಪನಿಗಳ ಸ್ವಾಮ್ಯಕ್ಕೊಳಪಡಿಸಿದರೆ ಉತ್ತರದಾಯಿತ್ವಕ್ಕೆ ಅವಕಾಶವಿಲ್ಲ.
ಖಾಸಗೀ ಕಂಪನಿಗಳು ಗ್ರಾಹಕರು ಮತ್ತು ಕೃಷಿಯೋಜನೆಗಳಿಗೆ ರಿಯಾಯಿತಿ ಹಾಗೂ ಉಚಿತವಾಗಿ ವಿದ್ಯುತ್ ವಿತರಿಸುವುದಿಲ್ಲ ಎಂದು ಕೆಪಿಟಿಸಿಎಲ್ ನೌಕರರ ಸಂಘ ಕಳವಳ ವ್ಯಕ್ತಪಡಿಸಿತು.
ಸಾರ್ವಜನಿಕರು ಮತ್ತಷ್ಟು ಸಂಖ್ಯೆಯಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸುವಂತೆ ಕೆಪಿಟಿಸಿಎಲ್ ನೌಕರರ ಸಂಘ ಮನವಿ ಮಾಡಿತು.
ಸಧ್ಯ ಪರವಾನಿಗೆ ನೀಡಲು ಆಕ್ಷೇಪಣೆ ಸಲ್ಲಿಕೆಯಿಂದಾಗಿ ಅಭಿಪ್ರಾಯ ಸಂಗ್ರಹಣೆಗೆ ಕೆಇಆರ್ ಸಿಇ ಆಯೋಗ ಉನ್ನತ ಮಟ್ಟದ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿದೆ.ವರದಿಯ ಅಂಶಗಳನ್ನ ಪರಿಗಣಿಸಿ ಸಂಘ ಮುಂದಿನ ಹೋರಾಟ ನಡೆಸುವುದಾಗಿ ಕೆಪಿಟಿಸಿಎಲ್ ನೌಕರರ ಸಂಘ ತಿಳಿಸಿದೆ.

ವಿದ್ಯುತ್, ನೀರು, ಲೋಕೋಪಯೋಗಿಯಂತಹ ಸಂಸ್ಥೆಗಳು ಸರ್ಕಾರದ ಹಿಡಿತದಲ್ಲೇ ಇರಬೇಕು,ಆಗ ಮಾತ್ರ ಜನಪರ ಯೋಜನೆಗಳ ಜಾರಿ ಸಾಧ್ಯ, ವಿದ್ಯತ್ ಕ್ಷೇತ್ರವನ್ನ ಸರ್ಕಾರದ ಅಧೀನಲ್ಲೇ ಉಳಿಸಬೇಕು ಖಾಸಗಿ ಕಂಪನಿಗೆ ಹಸ್ತಾಂತರಿಸಬಾರದೆಂಬುದು ಪ್ರತಿಭಟನಾಕಾರ ಪ್ರಮುಖ ಬೇಡಿಕೆ ಮತ್ತು ಆಗ್ರಹವಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಹೇಮಣ್ಣ, ಕಾರ್ಯದರ್ಶಿ ಚಂದ್ರಶೇಖರ್, ಪದಾಧಿಕಾರಿಗಳಾದ ಕೆಂಪರಾಜು, ರಮೇಶ್, ರಾಘವೇಂದ್ರ, ಕಿರಣ್ ,ಜ್ಞಾನೇಶ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ






