CrimeDistrictKarnatakaShivamogga

Shivmogga:’ಡೆತ್‌ ನೋಟ್‌’ನಲ್ಲಿ ಮುಖ್ಯಪೇದೆ ಬರೆದಿದ್ದೇನು?ಪೊಲೀಸರು ಹೇಳೋದೇನು?ಮಹಮ್ಮದ್‌ ಜಕ್ರಿಯಾ ಆತ್ಮಹತ್ಯೆ ಹಿಂದಿನ ಅಸಲಿ ರಹಸ್ಯವೇನು?

Head Constable Mohmmed Jakria Sucied In West Traffic Police Station in Shivmogga city.. Special Report By Soumya Reddy.

ಶಿವಮೊಗ್ಗ: ಈವರೆಗೆ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಬರುತ್ತಿದ್ದವು. ಆದರೆ ಈಗ ಸ್ವತಃ ತಾವು ಕಾರ್ಯನಿರ್ವಹಿಸುವ ಠಾಣೆಯಲ್ಲಿಯೇ ಪೊಲೀಸ್‌ರೊಬ್ಬರು ನೇಣಿಗೆ ಶರಣಾದ ಘಟನೆ ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆಯಲ್ಲಿ ನಡೆದಿದೆ.

ಈ ಕುರಿತು ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.

ಎರಡು ತಿಂಗಳ ಸುದೀರ್ಘ ರಜೆ ಮೇಲೆ ತೆರಳಿದ್ದ ಕೇವಲ 55 ವಯಸ್ಸಿನ ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಜನೆವರಿ 6 ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.

ಮರುದಿನ ಬುಧವಾರವು ಹಗಲು ಡ್ಯೂಟಿ ಮಾಡಿದ್ದ ಮಹಮ್ಮದ್ ಜಕ್ರಿಯಾ ಅವರನ್ನು ಅಂದು ರಾತ್ರಿ ಠಾಣೆಯ ಸ್ಟೇಶನ್‌ ಹೌಸ್‌ ಆಫೀಸರ್‌ ಆಗಿ ನಿಯೋಜಿಸಲಾಗಿತ್ತು.

ರಾತ್ರಿ ಡ್ಯೂಟಿಗೆ ಬಂದಾಗ ಸಹಜವಾಗಿಯೇ ಇದ್ದ ಮಹಮ್ಮದ್ ಜಕ್ರಿಯಾ ಬೆಳಗಿನ ಜಾವ ಠಾಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಮುಖ್ಯಪೇದೆ ಮಹಮ್ಮದ ಜಕ್ರಿಯಾ ಅವರ ಪಾರ್ಥಿವ ಶರೀರದ ಮುಂದೆ ರೋಧಿಸುತ್ತಿರುವ ಕುಟುಂಬಸ್ಥರು

ಸ್ವಲ್ಪ ಹೊತ್ತಿನ ನಂತರ ಈ ವಿಷಯ ಗಮನಕ್ಕೆ ಬಂದಿತಾದರೂ ಅಷ್ಟರಲ್ಲಿ ಮಹಮ್ಮದ್ ಜಕ್ರಿಯಾ ಅವರು ನಿಧನರಾಗಿದ್ದರು.

ನೋಡಲು ಗಟ್ಟಿಮುಟ್ಟಾಗಿದ್ದ ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ತಿಂಗಳ ರಜೆ ಮೇಲೆ ತೆರಳಿದ್ದರು ಎಂದು ಹೇಳಲಾಗಿದೆ.

ಆದರೆ ಇನ್ನೊಂದೆಡೆ ಉಡುಪಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಬಂದೋಬಸ್ತ್‌ಗೆ ಹೋಗಿದ್ದರು ಎನ್ನಲಾಗಿದೆ.

ರಜೆ ಮೇಲಿದ್ದರೂ ಅವರು ಉಡುಪಿಗೆ ಹೋಗಿದ್ದರಾ? ಎಂಬ ಪ್ರಶ್ನೆಗೆ ಇಲಾಖೆಯವರೇ ಸ್ಪಷ್ಟಪಡಿಸಬೇಕು.

ಕೆಲವು ಮೂಲಗಳ ಪ್ರಕಾರ ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರ ಆರೋಗ್ಯದ ಬಗ್ಗೆ ಅವರ ಸಹೋದ್ಯೋಗಿಯೊಬ್ಬರು ವ್ಯಂಗ್ಯ ಹಾಗೂ ಅಪಹಾಸ್ಯ ಮಾಡುತ್ತಿದ್ದರಲ್ಲದೇ ಬೇರೆಯವರ ಮುಂದೆಯು ಸಹ ಈ ಬಗ್ಗೆ ಮಾತನಾಡುತ್ತಿದ್ದರು ಎನ್ನಲಾಗಿದೆ.

ಇದು ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರಿಗೆ ತುಂಬ ನೋವು ತಂದಿತ್ತು ಎಂದು ಅವರು ಬರೆದಿಟ್ಟರೆನ್ನಲಾದ ಡೆತ್‌ ನೋಟ್‌ (?) ನಲ್ಲಿ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.

ವ್ಯಾಟ್ಸಾಪ್‌ ಮುಖಾಂತರ ಈ ವಿಷಯವನ್ನು ಸಾಯುವ ಮುನ್ನ ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರು ತಮ್ಮ ಆಪ್ತ ಆದಿಲ್‌ ಅವರಿಗೆ ಸಂದೇಶ ಕಳುಹಿಸಿದ್ದರು ಎಂದು ಈಗ ಹೇಳಲಾಗುತ್ತಿದೆ.

ಮೃತ ಜಕ್ರಿಯಾ ಅವರ ಸ್ನೇಹಿತ ಆದಿಲ್‌

ಈ ವ್ಯಾಟ್ಸಾಪ್‌ ಸಂದೇಶದಲ್ಲಿ ನಾಸಿರ ಎಂಬ ಮುಖ್ಯ ಪೇದೆ ಅಪಹಾಸ್ಯ ಮಾಡಿದ್ದಾರೆ ಎಂದು ಜಕ್ರಿಯಾ ಹೇಳಿಕೊಂಡಿದ್ದರು.

ಆದರೆ ಪುತ್ರ ಮೊಹಮ್ಮದ ಅಮೀರ್‌ ನೀಡಿರುವ ಹೇಳಿಕೆಯಲ್ಲಿ, ಕರ್ತವ್ಯದ ಮಧ್ಯೆ ಸಿಬ್ಬಂದಿಗಳ ನಡುವೆ ಭಿನ್ನಾಭಿಪ್ರಾಯ ಬರುವುದು ಸರ್ವೆ ಸಾಮಾನ್ಯ. ಇದೇ ಕಾರಣಕ್ಕೆ ತಮ್ಮ ತಂದೆ ಮಹಮ್ಮದ ಜಕ್ರಿಯಾ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗದು ಎಂದು ತಿಳಿಸಿರುವುದು ಗಮನಾರ್ಹವಾಗಿದೆ.

ಇದೇ ವಿಷಯವು ಎಫ್‌ಐಆರ್‌ನಲ್ಲಿ ನಮೂದಿಸಿರುವದರಿಂದ ಹಾಗೂ ಜಕ್ರಿಯಾ ಕುಟುಂಬದ ಯಾವ ಸದಸ್ಯರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸದೇ ಇರುವುದರಿಂದ ಈ ಪ್ರಕರಣವು ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರ ಜೊತೆಗೆ ಮಣ್ಣು ಸೇರಿದೆ. ಆ ಮೂಲಕ ಅಪಹಾಸ್ಯ ಮಾಡಿದ್ದರು ಎನ್ನಲಾದ ಮುಖ್ಯಪೇದೆ ನಾಸೀರ್‌ ಸದ್ಯಕ್ಕೆ ಪಾರಾಗಿದ್ದಾರೆ.

ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರು ಹಠಾತ ಆಗಿ ನೇಣು ಹಾಕಿಕೊಳ್ಳುವಂತಹ ಪ್ರಸಂಗ ಯಾಕೆ ಬಂದಿತು? ಎಂಬುದಕ್ಕೆ ಅವರ ಕುಟುಂಬದವರು ಜಕ್ರಿಯಾ ಅವರಿಗೆ ಬೆನ್ನು ನೋವು ಇತ್ತು ಎಂದು ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳುತ್ತವೆ.

ಈ ಹಿನ್ನೆಲೆಯಲ್ಲಿ ಜಕ್ರಿಯಾ ಅವರದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.

ಆದರೆ ಕೇವಲ ಬೆನ್ನು ನೋವಿನಿಂದ ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರು ನೇಣಿಗೆ ಶರಣಾಗುವಂತಹ ಹಂತಕ್ಕೆ ಬರಲು ಕಾರಣವಾಯಿತಾ? ಎಂಬುದು ಈಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ನೇಣಿಗೆ ಶರಣಾಗುವಂತಹ ಸ್ಥಿತಿ ಅವರಿಗೆ ಬರಲು ಇನ್ನಾವುದು ಕಾರಣವಾಯಿತು! ಎಂಬುದು ಈಗ ಪೊಲೀಸ್‌ ಇಲಾಖೆಯ ತನಿಖೆಯಿಂದ ಹೊರಬರಬೇಕು ಅಷ್ಟೇ!

ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರು ನೇಣಿಗೆ ಶರಣಾದ ನಂತರ ಎಸ್‌ಪಿ ಬಿ.ನಿಖಿಲ್‌ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಎಸ್‌ಪಿ ಬಿ.ನಿಖಿಲ್‌, ಮುಖ್ಯಪೇದೆ ಮಹಮ್ಮದ್ ಜಕ್ರಿಯಾ ಅವರು ಬೆನ್ನುನೋವಿನಿಂದ ಬಳಲುತ್ತಿದ್ದರು. ಅಲ್ಲದೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹಿಂದೆಯೂ ಒಮ್ಮೆ ಆತ್ಮಹ್ಯತ್ಯೆಗೆ ಯತ್ನಿಸಿದ್ದರೆಂದು ತಿಳಿದುಬಂದಿದೆ ಹೀಗಾಗಿ ಎಲ್ಲಾ ಆಯಾಮಾದಲ್ಲೂ ತನಿಖೆ ನಡೆಸುವುದಾಗಿ ತಿಳಿಸಿದರು.

ಜನರಿಗೆ ರಕ್ಷಣೆ ನೀಡುವ ಮತ್ತು ಧೈರ್ಯದಿಂದ ಇರಬೇಕಾದ ಪೊಲೀಸ್‌ರು ಆತ್ಮಹತ್ಯೆಗೆ ಶರಣಾಗುವುದು ಆಘಾತಕಾರಿ ವಿಚಾರ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆಗೆ ಕಾರಣರಾದವರ ವಿರುದ್ದ ಜಿಲ್ಲಾ ವರಿಷ್ಠಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒತ್ತಡದಿಂದ ಕಾರ್ಯನಿರ್ವಹಿಸುವ ಕೆಳಹಂತದ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಕೌನ್ಸಿಲಿಂಗ್ ನಡೆಸುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕೆಂದು ಕೆ.ಬಿ.ಪ್ರಸನ್ನಕುಮಾರ್ ಮನವಿ ಮಾಡಿದ್ದಾರೆ.

ನೇಣಿಗೆ ಶರಣಾದ ಮುಖ್ಯ ಪೊಲೀಸ್ ಪೇದೆ ಮಹಮ್ಮದ್ ಜಕ್ರಿಯಾ ಅವರಿಗೆ ಇನ್ನು ಐದು ವರುಷ ಸೇವಾ ಅವಧಿಯಿತ್ತು. ಎಎಸ್‌ಐ ಆಗಿ ಬಡ್ತಿ ಸಹ ಅವರಿಗೆ ಸಿಕ್ಕಿತ್ತು.

ಬಹುಶಃ ಬಡ್ತಿ ಒಪ್ಪಿಕೊಂಡು ಜಕ್ರಿಯಾ ಬೇರೆಡೆ ವರ್ಗಾವಣೆ ಆಗಿ ಹೋಗಿದ್ದರೇ ಬದುಕುತ್ತಿದ್ದರೇನೋ? ಎಂಬ ನೋವು ಕುಟುಂಬಸ್ಥರದ್ದು.

ಕರ್ತವ್ಯದಲ್ಲಿದ್ದಾಗಲೂ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಜಕ್ರಿಯಾ ಅವರು ತಮಗೆ ನೀಡಿದ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದರು ಎಂದು ಅವರ ಆಪ್ತ ವಲಯ ಹೇಳುತ್ತದೆ.

ಒಟ್ಟಾರೇ, ಮುಖ್ಯ ಪೊಲೀಸ್ ಪೇದೆ ಮಹಮ್ಮದ್ ಜಕ್ರಿಯಾ ಸಾಯುವ ಮುನ್ನ ಸಹೋದ್ಯೋಗಿ ಮುಖ್ಯ ಪೇದೆ ನಾಸಿರ್‌ ಮೇಲೆ ಆರೋಪ ಮಾಡಿರುವದರಿಂದ, ಯಾವುದೇ ಮುಲಾಜಿಗೊಳಗಾಗದೇ ಪೊಲೀಸರು ತನಿಖೆ ನಡೆಸಿ ನಿಜಾಂಶ ಬಹಿರಂಗಪಡಿಸಬೇಕಿದೆ.

ಆ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಪೊಲೀಸ್‌ ಇಲಾಖೆ ಮಾಡಬೇಕಿದೆ.

Follow Us

Leave a Reply

Your email address will not be published. Required fields are marked *

Back to top button