ರಾಜ್ಯದ ಮೊದಲ ಬೃಹತ್ ಕ್ರೀಡಾಂಗಣಕ್ಕೆ ಸಿಎಂ ಶಂಕುಸ್ಥಾಪನೆ|ಗುಜರಾತ್ ನಂತರ ಅತಿದೊಡ್ಡ ಸ್ಟೇಡಿಯಂ ಹೆಗ್ಗಳಿಕೆ|ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ನಾಂದಿ-ಸಿದ್ದರಾಮಯ್ಯ
ಈವರೆಗೆ ಕೇವಲ ಮನೆಗಳ ನಿರ್ಮಾಣ ಮಾಡುತ್ತಿದ್ದ ವಸತಿ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿಯು ಈಗ 80 ಸಾವಿರ ಆಸನ ವ್ಯವಸ್ಥೆಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ದೂರದೃಷ್ಟಿಯ ಹೆಜ್ಜೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು: ಆನೇಕಲ್ ಬಳಿಯ ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣದಿಂದ ಈ ಭಾಗದಲ್ಲಿ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇವೆ ಎಂದ ಅವರು, ಈವರೆಗೆ ಕೇವಲ ಮನೆಗಳ ನಿರ್ಮಾಣ ಮಾಡುತ್ತಿದ್ದ ವಸತಿ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿಯು ಈಗ 80 ಸಾವಿರ ಆಸನ ವ್ಯವಸ್ಥೆಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ದೂರದೃಷ್ಟಿಯ ಹೆಜ್ಜೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಎರಡನೇ ಅತಿ ದೊಡ್ಡ ಕ್ರೀಡಾಂಗಣಕ್ಕೆ ಚಾಲನೆ|
ಬೆಂಗಳೂರಿನ ಸೂರ್ಯನಗರದಲ್ಲಿ ಶನಿವಾರದಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.

ಗುಜರಾತನಲ್ಲಿರುವ ಬೃಹತ್ 90 ಸಾವಿರ ಆಸನ ವ್ಯವಸ್ಥೆ ಇರುವ ಕ್ರೀಡಾಂಗಣದ ನಂತರ ಸೂರ್ಯನಗರದಲ್ಲಿ ಎರಡನೇ ಅತಿ ದೊಡ್ಡ ಕ್ರೀಡಾಂಗಣವಾಗಲಿದೆ ಎಂದರು.
ಇದರಿಂದ ಪ್ರವಾಸೋದ್ಯಮದ ಪ್ರಗತಿಯ ಜೊತೆಗೆ ಸುತ್ತ ಮುತ್ತಲ ಊರುಗಳ ಆರ್ಥಿಕತೆಯೂ ಬೆಳೆಯುತ್ತದೆ, ಉದ್ಯೋಗವೂ ಹೆಚ್ಚುತ್ತದೆ ಎಂದು ತಿಳಿಸಿದರು.

ಸರ್ಕಾರದ ಆರ್ಥಿಕ ನೆರವಿಲ್ಲದೆ ಗೃಹಮಂಡಳಿ ಹಣದಿಂದಲೇ ಕ್ರೀಡಾಂಗಣ ನಿರ್ಮಾಣ ಆಗಲಿದೆ ಎಂದು ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡರು ಹೇಳಿದ್ದಾರೆ. ಇದೊಂದು ಮಹತ್ತರ ಬೆಳವಣಿಗೆ ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು.
ಕೆಹೆಚ್ಬಿ ಗೆ 20 ಸಾವಿರ ಕೋಟಿ ಆದಾಯ|
ಖಾಲಿ ಇರುವ ಗೃಹಮಂಡಳಿಯ ನಿವೇಶನಗಳ ಮಾರಾಟದಿಂದ 20 ಸಾವಿರ ಕೋಟಿ ಆದಾಯ ಬರುವ ಅಂದಾಜಿದೆ. ನೆತ್ತಿ ಮೇಲೆ ಸೂರು ಇರಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಈಗ ಭೂಮಿ ಬೆಲೆ ಹೆಚ್ಚುತ್ತಿರುವುದರಿಂದ ಬಡ, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಗೃಹಮಂಡಳಿ ನಿವೇಶನಗಳನ್ನು ನಿರ್ಮಿಸಿ ಒದಗಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಕ್ರೀಡಾಂಗಣ, ರಸ್ತೆ ಮಾತ್ರವಲ್ಲದೆ ವಸತಿ ಇಲಾಖೆ ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಮನೆ ಮತ್ತು ನಿವೇಶನಗಳನ್ನೂ ರಾಜ್ಯದಲ್ಲಿ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ವಸತಿ ಇಲಾಖೆ ಸಚಿವ ಜಮೀರ್‌ಅಹ್ಮದ್ ಖಾನ್, ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಆನೇಕಲ್ ಶಾಸಕ ಬಿ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.









