DistrictKarnatakaShivamogga

ಶಿವಮೊಗ್ಗ:ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಗೆ ವಿರೋಧ|ಫೆ.12ರಂದು ಬೃಹತ್‌ ಜಾಥಾ|ಯೋಜನೆ ಜಾರಿಗೆ ತರಲು ಬಿಡುವುದಿಲ್ಲ-ಕೆ.ಎಸ್.ಈಶ್ವರಪ್ಪ

ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಜಾರಿಗೆ ತರುವದರ ಹಿಂದೆ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗುಳುಂ ಮಾಡುವ ಹುನ್ನಾರ ಅಡಗಿದೆ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಶಿವಮೊಗ್ಗ: ಪರಿಸರಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯನ್ನು ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ, ಫೆಬ್ರುವರಿ 12 ರಂದು ಶಿವಮೊಗ್ಗದಲ್ಲಿ “ಪರಿಸರಕ್ಕಾಗಿ ನಾವು ಸಂಘಟನೆ” ಹಮ್ಮಿಕೊಂಡಿರುವ ಬೃಹತ್‌ ಜಾಥಾಕ್ಕೆ ರಾಷ್ಟ್ರಭಕ್ತ ಬಳಗವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮಂಗಳವಾರದಂದು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆ ಜಾರಿಯಾದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೃಷಿಯನ್ನೆ ಆಶ್ರಯಿಸಿರುವ ರೈತರು ಅಕ್ಷರಶಃ ಬೀದಿಗೆ ಬರಲಿದ್ದಾರೆ. ಈ ಯೋಜನೆಯು ಆರಂಭದಿಂದಲೇ ಅವೈಜ್ಞಾನಿಕವಾಗಿದೆ ಎಂದರು.

ಅರಣ್ಯ, ಪರಿಸರಕ್ಕೆ ತೀವ್ರ ಹಾನಿಗೊಳಿಸಲಿದೆ. ಜನ ವಿರೋಧಿಯಾದ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯನ್ನು ಕೈ ಬಿಡಲು ಒತ್ತಾಯಿಸಿ “ಪರಿಸರಕ್ಕಾಗಿ ನಾವು ಸಂಘಟನೆ” ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಜಾಥಾದಲ್ಲಿ ವಿವಿಧ ಮಠಾಧೀಶರು ಹಾಗೂ 10ಸಾವಿರಕ್ಕೂ ಹೆಚ್ಚು ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಆರಂಭದಿಂದಲೂ ಯೋಜನೆ ಅವೈಜ್ಞಾನಿಕವಾಗಿದೆ. ಪರಿಸರಕ್ಕೆ ಮಾರಕ, ಜನವಿರೋಧಿಯಾಗಿದೆ ಎಂದು ಪರಿಸರವಾದಿಗಳು ಸ್ವಾಮೀಜಿಗಳು ಅನೇಕ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಮೊಂಡು ಧೋರಣೆ ಮುಂದುವರೆಸಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯನ್ನು ಜಾರಿಗೆ ತರುವುದರ ಹಿಂದೆ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗುಳುಂ ಮಾಡುವ ಹುನ್ನಾರ ಅಡಗಿದೆ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಬಲವಂತದಿಂದ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿರುವ ಕೆ.ಎಸ್.ಈಶ್ವರಪ್ಪ, ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವುದಿಲ್ಲ ಎಂದರು.

ಈ ಯೋಜನೆಯ ವಿರುದ್ದ ನ್ಯಾಯಾಲಯದ ಮೊರೆ ಹೋಗುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಯೋಜನೆಯ ಸಾಧಕ ಹಾಗೂ ಬಾಧಕಗಳು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.

ಪರಿಸರ ಹೋರಾಟಗಾರ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯನ್ನು ಜಾರಿಗೆ ತರಲು ಹೊರಟಿರುವದನ್ನು ತೀವ್ರವಾಗಿ ಖಂಡಿಸಿದರು.

ದಟ್ಟ ಅರಣ್ಯ, ಪ್ರಾಣಿ ಸಂಕುಲ ನಾಶ ಮಾಡಿ ಶರಾವತಿ ಪಂಪ್ಡ್‌ ಸ್ಟೋರೇಜ್ ನಿರ್ಮಿಸುವ ಬದಲು ಬ್ಯಾಟರಿ ಸ್ಟೋರೇಜ್‌ ತಂತ್ರಜ್ಞಾನವನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಪರಿಸರಕ್ಕೆ ಮಾರಕವಾಗಲಿರುವ ಈ ಯೋಜನೆಯನ್ನು ಬಲವಂತದಿಂದ ಜಾರಿಗೆ ತರಲು ಮುಂದಾದರೇ ಅದು, ಪರಿಸರದ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದಂತೇ ಎಂದು ಖಾರವಾಗಿ ಹೇಳಿದರು.

ಪರಿಸರ ಹೋರಾಟಗಾರ ಡಾ.ಶ್ರೀಪತಿ ಎಲ್‌.ಕೆ. ರಾಷ್ಟ್ರಭಕ್ತ ಬಳಗದ ಕೆ.ಇ.ಕಾಂತೇಶ್‌, ಇ.ವಿಶ್ವಾಸ್, ಎಂ.ಶಂಕರ್‌, ಡಾ.ಶೇಖರ್‌ ಗೌಳೇರ್‌, ಜನಾರ್ಧನ್‌ ಪೈ ಹಾಗೂ ಮೋಹನ್‌ ಜಾಧವ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button