ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ ವಿಚಾರ|ನ್ಯಾ.ಜಸ್ವಂತ್‌ಸಿಂಗ್ ವರದಿ ಅನ್ವಯ ಶಿವಮೊಗ್ಗವೇ ಸೂಕ್ತ|ತೀವ್ರಗೊಂಡ ವಕೀಲರ ಚಳುವಳಿಗೆ ಸರ್ವಾಪಿ ಬೆಂಬಲ
ನ್ಯಾ. ಜಸ್ವಂತ್‌ಸಿಂಗ್ ಅವರ ಸೂತ್ರದ ಪ್ರಕಾರ ಮಂಗಳೂರಿಗಿಂತ ಶಿವಮೊಗ್ಗ ನಗರ ಎಲ್ಲ ಆಯಾಮ ಹಾಗೂ ದೃಷ್ಟಿಕೋನಗಳು ಪರಿಪೂರ್ಣತೆ ಪಡೆದಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿ ನಡೆದಿರುವ ಹೋರಾಟ ದಿನೆ ದಿನೆ ತೀವ್ರಗತಿಯಲ್ಲಿ ಸಾಗತೊಡಗಿದೆ.
ಪಕ್ಷಬೇಧವಿಲ್ಲದೇ ಎಲ್ಲರೂ ಸಂಚಾರಿ ಹೈಕೋರ್ಟ್‌ಪೀಠ ಸ್ಥಾಪನೆಗೆ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಹೋರಾಟ ನಡೆಸುತ್ತಿರುವ ವಕೀಲರು, ಶಿವಮೊಗ್ಗಕ್ಕೆ ಸಂಚಾರಿ ಹೈಕೋರ್ಟ್ ಪೀಠಕ್ಕೆ ಬೇಕಾದ ಪೂರಕ ಅಂಶಗಳನ್ನು ಮುಂದಿಟ್ಟು ಈ ಭಾಗದ ಜನರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ|
ನ್ಯಾ.ಜಸ್ವಂತ್‌ಸಿಂಗ್ ಆಯೋಗದ ಸೂತ್ರವೇನು?
ಭಾರತದಲ್ಲಿ ರಾಜ್ಯಗಳ ಪುನರ್ವಿಂಗಡನೆಯಾದ ಬಳಿಕ ಬಹುತೇಕ ರಾಜ್ಯಗಳಿಂದ ಸಂಚಾರಿ ಪೀಠಗಳ ಸ್ಥಾಪನೆಗೆ ಆಗ್ರಹಿಸಿ ಒತ್ತಾಯಗಳು ಕೇಳಿ ಬರತೊಡಗಿದವು.

1981 ರಲ್ಲಿ ಆಗ ಕೇಂದ್ರ ಸರ್ಕಾರವು ನ್ಯಾ.ಜಸ್ವಂತ್ ಸಿಂಗ್ ನೇತೃತ್ವದ ಮೂರು ಜನರ ಸಮಿತಿಯನ್ನು ರಚಿಸಿತು. ಈ ಸಮಿತಿಯು ದೇಶದ ಎಲ್ಲಾ ರಾಜ್ಯಗಳಲ್ಲೂ ಸಂಚರಿಸಿ ಜನಾಭಿಪ್ರಾಯ ಕ್ರೋಡೀಕರಿಸಿ ಕೆಲ ಸೂತ್ರಗಳನ್ನ ಮುಂದಿಟ್ಟು ಸರ್ಕಾರಕ್ಕೆ ವರದಿ ಸಲ್ಲಿಸಿತು.
ನ್ಯಾ ಜಸ್ವಂತ್‌ಸಿಂಗ್ ವರದಿಯನ್ನು ಅವಲೋಕಿಸಿದಾಗ ಮತ್ತು ಶಿಫಾರಸ್ಸು ಮಾಡಿರುವ ಅಂಶಗಳಲ್ಲಿ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠವು ಸ್ಥಾಪನೆಗೆ ಅರ್ಹತೆ ಇರುವುದು ಈಗ ಸಾಬೀತಾಗಿದೆ.
1.ಜನರಿಗೆ ಕೈಗೆಟುಕುವಂತಹ ನ್ಯಾಯವಿತರಣಾ ವ್ಯವಸ್ಥೆ ಒದಗಿಸಬೇಕು.
2.ಸಮರ್ಥ ವಕೀಲರ ತಂಡವಿರಬೇಕು.
3.ಸಂಚಾರಿ ಪೀಠ ಸ್ಥಾಪನೆಯಾದರೆ ಅದಕ್ಕೆ ಬೇಕಾಗುವಷ್ಟು ಪ್ರಕರಣಗಳು ಇರಬೇಕು.
4.ಪೀಠಕ್ಕೆ ಒಳಪಡುವ ಜಿಲ್ಲೆಗಳನ್ನು ಗುಂಪುಗಳನ್ನಾಗಿ ಮಾಡಿ ಆ ಜಿಲ್ಲೆಯ ಜನರ, ಜನಪ್ರತಿನಿಧಿಗಳ ಒಮ್ಮತದ ಅಭಿಪ್ರಾಯ ಸಂಗ್ರಹವಾಗಬೇಕು.
5.ಪೀಠಕ್ಕೆ ಬೇಕಾದ ಮೂಲಭೂತ ಸೌಕರ್ಯಗ ವ್ಯವಸ್ಥೆ ಇರಬೇಕು ಎಂಬುದು ಸೇರಿದಂತೆ ಹಲವು ಸೂತ್ರಗಳು ಇವೆ.
ನ್ಯಾ. ಜಸ್ವಂತ್‌ಸಿಂಗ್ ಸೂತ್ರದಂತೇ ಶಿವಮೊಗ್ಗಕ್ಕೆ ಸಕಲ ಅರ್ಹತೆ|
ನ್ಯಾ. ಜಸ್ವಂತ್‌ಸಿಂಗ್ ಅವರ ಸೂತ್ರದಂತೇ ಅವಲೋಕಿಸಿದಾಗ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್‌ಪೀಠ ಸ್ಥಾಪನೆಗೆ ಎಲ್ಲ ಅರ್ಹತೆಯನ್ನು ಹೊಂದಿದೆ ಎಂಬುದು ಈಗ ಸಾಬೀತಾಗಿದೆ.

ಮಧ್ಯ ಕರ್ನಾಟಕದಿಂದ ಶಿವಮೊಗ್ಗ ತಲುಪಲು ಚಿತ್ರದುರ್ಗದಿಂದ 104 ಕಿ.ಮೀ, ಚಿಕ್ಕಮಗಳೂರುದಿಂದ 96ಕಿ.ಮೀ, ಉಡುಪಿಯಿಂದ 145ಕಿಮೀ, ದಾವಣಗೆರೆಯಿಂದ 105ಕಿಮೀ, ದೂರವಿದೆ. ಹೀಗಾಗಿ ಶಿವಮೊಗ್ಗ ನಗರಕ್ಕೆ ಕಕ್ಷಿದಾರರು ತಲುಪಲು ಅನುಕೂಲವಾಗಲಿದೆ.
ಹೀಗಾಗಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಶಿವಮೊಗ್ಗ ನಗರ ಎಲ್ಲ ಅರ್ಹತೆ ಹೊಂದಿದೆ ಎಂಬುದು ದಾಖಲಾತಿಗಳಿಂದ ಸ್ಪಷ್ಟಗೊಳ್ಳುತ್ತದೆ.

ಇನ್ನು ಶಿವಮೊಗ್ಗ ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದ್ರೆ ಆಗುವ ಲಾಭಗಳು ಏನು ಮತ್ತು ನ್ಯಾ. ಜಸ್ವಂತ್‌ಸಿಂಗ್ ಅವರ ಸೂತ್ರದ ಪ್ರಕಾರ ಮಂಗಳೂರಿಗಿಂತ ಶಿವಮೊಗ್ಗ ನಗರ ಎಲ್ಲ ಆಯಾಮ ಹಾಗೂ ದೃಷ್ಟಿಕೋನಗಳು ಪರಿಪೂರ್ಣತೆ ಪಡೆದಿದೆ.
ಇದಕ್ಕೆ ದಾಖಲಾತಿಗಳನ್ನು ನೋಡಿದಾಗ ಶಿವಮೊಗ್ಗದಲ್ಲಿ ಸಮರ್ಥ ವಕೀಲರ ತಂಡ ಮತ್ತು ಹೈಕೋರ್ಟ್ ಪೀಠಕ್ಕೆ ಬೇಕಾದಷ್ಟು ಪ್ರಕರಣ ಸಂಖ್ಯೆ ಇದೆ. ರಾಜ್ಯ ಹೈಕೋರ್ಟನಲ್ಲಿ ಗುರುತಿಸಲ್ಪಡುವ 106 ಹಿರಿಯ ವಕೀಲರಲ್ಲಿ ಶಿವಮೊಗ್ಗ ಜಿಲ್ಲೆಯ 18 ಮಂದಿ ವಕೀಲರಿರುವುದು ಈ ಭಾಗದ ಹೆಗ್ಗಳಿಕೆ!
ಮಧ್ಯ ಕರ್ನಾಟಕದಲ್ಲಿ ವಾರ್ಷಿಕ ದಾಖಲಾಗುವ ಪ್ರಕರಣಗಳು|
- ಶಿವಮೊಗ್ಗ- 86,001( ಸಿವಿಲ್ ಮತ್ತು ಕ್ರಿಮಿನಲ್ ಕೇಸ್ )
- ದಾವಣಗೆರೆ 59,992 ,
- ಚಿಕ್ಕಮಗಳೂರು-32048,
- ಚಿತ್ರದುರ್ಗ 42,187ಉಡುಪಿ 35,866
ಇನ್ನು ವಕೀಲರ ಸಂಖ್ಯೆ ಗಮನಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ 1200, ದಾವಣಗೆರೆ 1250, ಚಿಕ್ಕಮಗಳೂರು 520, ಚಿತ್ರದುರ್ಗ, ಉಡುಪಿ, 900, ವಕೀಲರು ಸೇವೆಗೆ ಲಭ್ಯವಿದ್ದಾರೆ.

ಇನ್ನು ವಿಚಾರಣೆ ಬಾಕಿ ಇರುವ, ಪ್ರಕರಣಗಳ ಸಂಖ್ಯೆಯೂ ದೊಡ್ಡಮಟ್ಟದಲ್ಲಿದೆ. ಜಿಲ್ಲಾ ನ್ಯಾಯಾಲಯದ ಪ್ರಕರಣಗಳಲ್ಲಿ ಅಂದಾಜು 2800 ಕೇಸ್ ಮೇಲ್ಮನವಿ ಸಲ್ಲಿಕೆಯಾಗುತ್ತವೆ.
ಹೀಗಾಗಿ ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಪೀಠದ ಅವಶ್ಯಕತೆ ತುರ್ತಾಗಿದ್ದು ಶಿವಮೊಗ್ಗವೇ ಸೂಕ್ತ ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಮನವಿ ಮೂಲಕ ಗಮನಾರ್ಹ ಅಂಕಿ ಅಂಶ ಸಹಿತ ವಿವರಣೆ ನೀಡಿದೆ.
ಶಿವಮೊಗ್ಗಕ್ಕೆ ಸಂಚಾರಿ ಹೈಕೋರ್ಟ್‌ಪೀಠ|
ಸರ್ವಾಪಿ ಬೆಂಬಲ ಘೋಷಣೆ|
ಇನ್ನೂ ಜನಪ್ರತಿನಿಧಿಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ವಿಚಾರದಲ್ಲಿ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಬೇಕೆಂಬ ವಕೀಲರ ಹೋರಾಟಕ್ಕೆ ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲಕ್ಕೆ ನಿಂತಿದ್ದಾರೆ.

ಮಲೆನಾಡು ಹೋರಾಟಕ್ಕೆ ಹೆಸರುವಾಸಿ. ಹೈಕೋರ್ಟ್ ಪೀಠದ ಹೋರಾಟಕ್ಕೆ ರೈತರು, ಕಾರ್ಮಿಕರು, ಸಂಘಸಂಸ್ಥೆ ಜನಪ್ರತಿನಿಧಿಗಳಾದ ಖುದ್ದು ಜಿಲ್ಲಾ ಉಸ್ತವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ.
ಕೇಂದ್ರ ಮಟ್ಟದಲ್ಲಿ ಧ್ವನಿಯಾಗುವೆ
ಸಂಸದ ರಾಘವೇಂದ್ರ ಭರವಸೆ|
ಮಂಗಳವಾರದಂದು ನಡೆದ 9 ನೇ ದಿನದ ವಕೀಲರ ಸಂಘದ ಹೋರಾಟಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಖುದ್ದು ಆಗಮಿಸಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಮಟ್ಟದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಧ್ವನಿಯಾಗುವದಾಗಿ ಅವರು ಭರವಸೆ ನೀಡಿದರು. ಇದೇ ವೇಳೆ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಕೂಡ ಧರಣಿ ಸ್ಥಳಕ್ಕೆ ತೆರಳಿ ರಾಷ್ಟ್ರ ಭಕ್ತರ ಬಳಗವೂ ಬೆಂಬಲಿಸುವುದಾಗಿ ಹೇಳಿದರು.
ಒಟ್ಟಾರೇ, ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಮರ್ಥ ವಕೀಲರ ತಂಡ, ಪ್ರಕರಣಗಳ ಸಂಖ್ಯೆ, ವಾಸ್ತವಿಕ ಪ್ರಯಾಣ, ಖರ್ಚು ವೆಚ್ಚ ಹಾಗೂ ಮೂಲಸೌಕರ್ಯವಾಗಿ ರೈಲು, ಸುಸಜ್ಜಿತ ಸಾರಿಗೆ ,ರಸ್ತೆ, ಸಂಪರ್ಕದಲ್ಲಿ ಶಿವಮೊಗ್ಗ ಅತ್ಯುತ್ತಮವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಲಕ್ಷಾಂತರ ಮಲೆನಾಡಿನ ಜನರ ಧ್ವನಿಯಾಗಿ ನಡೆಯುತ್ತಿರುವ ಶಿವಮೊಗ್ಗ ಜಿಲ್ಲಾ ವಕೀಲರ ಹೋರಾಟ ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿದೆ.
ಎಲ್ಲ ವರ್ಗದ ಜನರೂ ಒಮ್ಮತದಿಂದ ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಘೋಷಣೆಗೆ ಆಗ್ರಹಿಸುತ್ತಿದ್ದಾರೆ. ಪೀಠಸ್ಥಾಪನೆಯಲ್ಲಿ ರಾಜಕೀಯಕ್ಕಿಂತ ನ್ಯಾಯಯುತ ಬೇಡಿಕೆಯೇ ಈಗ ಮಹತ್ವ ಪಡೆದುಕೊಂಡಿದೆ.
ವಿಶೇಷ ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ








