DistrictShivamoggaSpecial Stories

ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣದಲ್ಲಿ ದುರವಸ್ಥೆ|ಸಾರ್ವಜನಿಕರಿಂದ ಶಾಸಕರಿಗೆ ದೂರು ಹಿನ್ನೆಲೆ|ಸ್ಥಳಕ್ಕೆ ಭೇಟಿ-ಅಧಿಕಾರಿಗಳ ವಿರುದ್ದ ಎಸ್‌.ಎನ್‌.ಚೆನ್ನಬಸಪ್ಪ ಕಿಡಿ

ಅಧಿಕಾರಿಗಳ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕ ಎಸ್‌.ಎನ್‌.ಚೆನ್ನಬಸಪ್ಪ, ಒಂದು ತಿಂಗಳೊಳಗೆ ಎಲ್ಲವೂ ಸರಿಪಡಿಸಿ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ನಿರ್ವಹಣಾ ಲೋಪಗಳ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನಲೆ ಶಿವಮೊಗ್ಗ ಶಾಸಕ ಎಸ್‌.ಎನ್‌.ಚೆನ್ನಬಸಪ್ಪ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸೋಮವಾರದಂದು ಖುದ್ದು ಪರಿಶೀಲನೆ ನಡೆಸಿದರು.

ಒಂದು ತಿಂಗಳಲ್ಲಿ ಎಲ್ಲ ಸರಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಗಡುವು ನೀಡಿ ತಾಕೀತುಮಾಡಿದರು.

ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ಪರಿಶೀಲನೆ ತೆರಳಿದ್ದ ವೇಳೆ ಶಾಸಕ ಎಸ್‌.ಎನ್‌.ಚೆನ್ನಬಸಪ್ಪ ಅವರಿಗೆ ಅಲ್ಲಿನ ದುರವಸ್ಥೆ ಕಂಡು ಕೆಂಡಮಂಡಲರಾದ ಘಟನೆ ನಡೆಯಿತು.

ಪ್ರಯಾಣಿಕರ ವಿಶ್ರಾಂತಿಗಾಗಿ ನಿರ್ಮಿಸಲಾದ ವಿಶ್ರಾಂತಿ ಕೊಠಡಿಗಳಲ್ಲಿ ವಿಶ್ರಾಂತಿ ಪಡೆಯುವುದಿರಲಿ, ನಿಲ್ಲಲು ಸಹ ಆಗದೇ ದುರ್ವಾಸನೆ ಸೂಸುತ್ತ ವಾಕರಿ ಬರಿಸುವಂತಿದ್ದ ದೃಶ್ಯ ಕಂಡು ಬಂದಿತು.

ಬಸ್ ನಿಲ್ದಾಣದ ಸುತ್ತಮುತ್ತಲೂ ಹಾಳಾಗಿರುವ ಪುಟ್ ಪಾಥ್ ಹಲವು ಕಡೆ ಕಿತ್ತುಹೋದ ಟೈಲ್ಸ್ , ಹೂವಿನ ಹಾಗೂ ಹಣ್ಣಿನ ಅಂಗಡಿಗಳು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸಲು ತೊಂದರೆಯಾಗುತ್ತಿರುವ ವಿಚಾರಗಳು ಗಮನಕ್ಕೆ ಬಂದಿತು.

ಬಸ್ ನಿಲ್ದಾಣದ ಆಸನಗಳ ಮೇಲೆ ಪಕ್ಷಿಗಳು ಮತ್ತು ಪ್ರಾಣಿಗಳ ಮಲಮೂತ್ರ ವಿಸರ್ಜನೆಯಿಂದಾಗಿ ಅಸ್ವಚ್ಚತೆ ಎದ್ದು ಕಾಣುವಂತಿತ್ತು.

ಅಧಿಕಾರಿಗಳ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕ ಎಸ್‌.ಎನ್‌.ಚೆನ್ನಬಸಪ್ಪ, ಒಂದು ತಿಂಗಳೊಳಗೆ ಎಲ್ಲವೂ ಸರಿಪಡಿಸಿ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರ ಭೇಟಿ ಹಿನ್ನೆಲೆ ಜಮಾಯಿಸಿದ್ದ ನಾಗರಿಕರು ಖಾಸಗಿ ಬಸ್‌ ನಿಲ್ದಾಣದಲ್ಲಿನ ಹಲವಾರು ಅವ್ಯವಸ್ಥೆ ಬಗ್ಗೆ ದೂರು ನೀಡಿದರು.

ಈ ಹಿಂದೆ ಅಳವಡಿಸಲಾಗಿದ್ದ ಟಿವಿ ಈಗ ಇಲ್ಲದಿರುವುದರಿಂದ, ಸರ್ಕಾರಿ ಯೋಜನೆಗಳು ಮತ್ತು ಸಾರ್ವಜನಿಕ ಮಾಹಿತಿ ಪ್ರಸಾರಕ್ಕೆ ಇದ್ದ ಅವಕಾಶವೂ ಕಳೆದುಹೋಗಿದೆ ಹಲವು ಸಾರ್ವಜನಿಕರು ದೂರಿದರು.

ಮೊದಲ ಮಹಡಿಯಲ್ಲಿರುವ ಮಹಾನಗರ ಪಾಲಿಕೆ ಸುಪರ್ದಿಯ ಶೌಚಾಲಯಗಳಲ್ಲಿ ನೀರಿಲ್ಲದ ಮಹಿಳಾ ಶೌಚಾಲಯ, ಬಾಗಿಲುಗಳಿಲ್ಲದೆ ಬಳಕೆಗೆ ಯೋಗ್ಯವಿಲ್ಲದಂತಾಗಿದ್ದುದು ಪಾಲಿಕೆ ಗಂಭೀರ ನಿರ್ಲಕ್ಷ್ಯವೆಂದು ಸ್ಥಳೀಯರು ಆರೋಪಿಸಿದರು.

ಪ್ಲಾಟ್‌ಫಾರ್ಮ್ ಮೇಲೆಯೇ ದ್ವಿಚಕ್ರ ವಾಹನ ನಿಲುಗಡೆಯಿಂದಾಗಿ ಪ್ರಯಾಣಿಕರ ಸಂಚಾರಕ್ಕೆ ಆಗುತ್ತಿರುವ ಅಡಚಣೆ ಸರಿಪಡಿಸುವಂತೆ ಶಾಸಕ ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಕ್ಷಣ ದುರಸ್ತಿ ಹಾಗೂ ಸ್ವಚ್ಛತಾ ಕ್ರಮಗಳನ್ನು ಕೈಗೊಂಡು ಖಾಸಗಿ ಬಸ್ ನಿಲ್ದಾಣವನ್ನು ಸಾರ್ವಜನಿಕರಿಗೆ ಅನುಕೂಲಕರವಾಗುವಂತೆ ರೂಪಿಸಬೇಕೆಂದು ನಿರ್ದೇಶನ ನೀಡಿದರು.

ಶಿವಮೊಗ್ಗ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಶಿವಮೊಗ್ಗದ ಅಭಿವೃದ್ದಿಯ ಚಿತ್ರಣ ನೀಡುವಂತಿದೆ.

ಹೀಗಾಗಿ ಇಲ್ಲಿ ಕುಡಿಯುವ ನೀರು, ಆಸನಗಳು, ಪಾದಚಾರಿ ಮಾರ್ಗ, ಶೌಚಾಲಯ ವ್ಯವಸ್ಥಿತವಾಗಿದ್ದು ಉತ್ತಮ ನಿರ್ವಹಣೆಯೊಂದಿಗೆ ಜನಸ್ನೇಹಿ ಬಸ್ ನಿಲ್ದಾಣವಾಗಬೇಕೆಂಬ ಆಶಯವಿದೆ ಎಂದು ನಾಗರೀಕ ಹಕ್ಕು ವೇದಿಕೆ ವಸಂತಕುಮಾರ್ ನ್ಯೂ ಇಂಡಿಯಾ ಕನ್ನಡಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರ ಭೇಟಿ ಹೊರ ಭರವಸೆ ಮೂಡಿಸಿದ್ದು ತಿಂಗಳ ಬಳಿಕ ಮತ್ತೊಂದು ದಿಢೀರ್ ಭೇಟಿಯ ಮೂಲಕ ದುರವಸ್ಥೆಗೆ ಬ್ರೇಕ್ ಬೀಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Follow Us

Leave a Reply

Your email address will not be published. Required fields are marked *

Back to top button