AgricultureDistrictShivamogga

ಮಲೆನಾಡು ಅಡಿಕೆ ಸರಬರಾಜು ಲಾರಿಗೆ ಮಹಾರಾಷ್ಟ್ರದಲ್ಲಿ ತಡೆ|ಮ್ಯಾಮ್ಕೋಸ್ ನಿಯೋಗದಿಂದ 55 ಸರಕು ಲಾರಿ ಬಿಡುಗಡೆ ನೆರವಿಗೆ ಸಂಸದರಿಗೆ ಮನವಿ|ಬಿಎಸ್ ಯಡಿಯೂಪ್ಪ ಸ್ಪಂದನೆ,ಶೀಘ್ರ ಪರಿಹಾರದ ಭರವಸೆ

ಮಹಾರಾಷ್ಟ್ರದಲ್ಲಿ ಅಡಕೆಗೆ ಯಾವುದೇ ನಿಷೇಧವಿಲ್ಲವಾದರೂ ಸಹ ಜೂನ್ 11 ರಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ತಪಾಸಣೆ ಹೆಸರಲ್ಲಿ ರಾಜ್ಯದ 55 ಕ್ಕೂ ಹೆಚ್ಚು ಅಡಿಕೆ ಲಾರಿ ತಡೆದು ಕಿರುಕುಳ ನೀಡುತ್ತಿದ್ದಾರೆಂದು ನಿಯೋಗ ಆರೋಪಿಸಿತು.

ಶಿವಮೊಗ್ಗ: ಮಲೆನಾಡು ಅಡಿಕೆ ಮಾರಾಟಗಾರರು ಮತ್ತು ವರ್ತಕರಿಗೆ ಸೇರಿದ ಅಡಿಕೆ ಸರಕು ಹೊತ್ತ 50 ಕ್ಕೂ ಹೆಚ್ಚು ಲಾರಿಗಳು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಇಲಾಖೆ ವಶದಲ್ಲಿದ್ದು ತಕ್ಷಣ ಬಿಡಿಸಿಕೊಡುವಂತೆ ಶಿವಮೊಗ್ಗ, ಶಿರಸಿ,ಸಿದ್ದಾಪುರ ಭಾಗದ ಅಡಿಕೆ ವರ್ತಕರು ಮಾರಾಟಗಾರರ ನಿಯೋಗ ಸಂಸದ ಬಿವೈ ರಾಘವೇಂದ್ರ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.

ಶುಕ್ರವಾರ ಸಂಸದರ ನಿವಾಸಕ್ಕೆ ತೆರಳಿದ್ದ ಮ್ಯಾಮ್ಕೋಸ್ ನೇತೃತ್ವದ ನಿಯೋಗವು, ಮಹಾರಾಷ್ಟ್ರ ಸರ್ಕಾರದಿಂದ ರಾಜ್ಯದ ಅಡಿಕೆ ಸಾಗಾಟಕ್ಕೆ ಹೇಗೆಲ್ಲಾ ಅಡಚಣೆಯಾಗುತ್ತಿದೆ ಮತ್ತು ಎದುರಾಗಿರುವ ಸಂಕಷ್ಟದ ಬಗ್ಗೆ ವಿವರಿಸಿದರು.

ಕಳೆದ ಎರಡು ತಿಂಗಳ ಹಿಂದೆ ಮಂಗಳೂರಿನ ಕ್ಯಾಂಪ್ಕೋಸ್ ಸಂಸ್ಥೆಯು ಈ ವಿಚಾರವಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಪಢ್ನವೀಸ್‌ಗೆ ಮನವಿ ಮಾಡಿತ್ತು.

ಆಗ ಸಿಎಂ ಫಡ್ನವೀಸ್‌ ಅವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕರ್ನಾಟಕದ ಅಡಿಕೆ ಸಾಗಾಟದ ಲಾರಿಗಳಿಗೆ ಅಡಚಣೆಯಾಗಬಾರದೆಂದು ನಿರ್ದೇಶಿಸಿದ್ದರು.

ಅಲ್ಲದೇ ಮಹಾರಾಷ್ಟ್ರದಲ್ಲಿ ಅಡಕೆಗೆ ಯಾವುದೇ ನಿಷೇಧವಿಲ್ಲವಾದರೂ ಸಹ ಜೂನ್ 11 ರಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ತಪಾಸಣೆ ಹೆಸರಲ್ಲಿ ರಾಜ್ಯದ 55 ಕ್ಕೂ ಹೆಚ್ಚು ಅಡಿಕೆ ಲಾರಿ ತಡೆದು ಕಿರುಕುಳ ನೀಡುತ್ತಿದ್ದಾರೆಂದು ನಿಯೋಗ ಆರೋಪಿಸಿತು.

ಅಡಿಕೆಮೂಟೆ ಹೊತ್ತ ಲಾರಿಗಳು ರಾಜಸ್ಥಾನ ನವದೆಹಲಿ, ಉತ್ತರ ಪ್ರದೇಶ,ಮಧ್ಯಪ್ರದೇಶಕ್ಕೆ ತಲುಪಬೇಕಿತ್ತು. ಲಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ವಶದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತರ ಭಾರತದಿಂದ ರಾಜ್ಯದ ಅಡಿಕೆ ಖರೀದಿ ವ್ಯವಹಾರ ಕುಂಠಿತವಾಗಲಿದೆ.

ಇಲ್ಲಿನ ಸಾವಿರಾರು ಅಡಿಕೆ ಬೆಳೆಗಾರರು, ವರ್ತಕರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಳಲು ತೋಡಿಕೊಂಡರು.

ಆಗ ಉಪಸ್ಥಿತರಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡಲೇ ಕೇಂದ್ರದ ಸಚಿವ ಪ್ರಲ್ಹಾದ್ ಜೋಶಿಯವರಿಗೆ ಕರೆ ಮಾಡಿದ್ದಲ್ಲದೇ, ಮಲೆನಾಡಿನ ಅಡಿಕೆ ವರ್ತಕರ ಲಾರಿ ಸಂಕಷ್ಟಕ್ಕೆ ಒಳಗಾದ ವಿಚಾರ ವಿವರಿಸಿದರಲ್ಲದೇ, ಈ ಕೂಡಲೇ ಸಹಾಯ ಮಾಡಬೇಕೆಂದು ಅವರು ಒತ್ತಾಯಿಸಿದರು.

ಮಲೆನಾಡಿದ ಬೆನ್ನೆಲುಬಾದ ಅಡಿಕೆ ಬೆಳೆಗಾರರು, ವರ್ತಕರ ಹಿತ ಕಾಯಲು ಸದಾ ಬದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಿಕೆ ಲಾರಿಗಳ ಮುಕ್ತ ಸಾಗಾಣಿಕೆ ಅಲ್ಲಿನ ಸಿಎಂ ಜೊತೆ ನೇರ ಸಂಪರ್ಕ ಸಾಧಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಈ ಕೂಡಲೇ ಲಾರಿಗಳನ್ನ ಬಿಡಿಸಿಕೊಡಲು ಕೇಂದ್ರ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಸಂಸದ ಬಿವೈ ರಾಘವೇಂದ್ರ ಮ್ಯಾಮ್ಕೋಸ್ ನಿಯೋಗಕ್ಕೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಶ್ರೀ ಮಹೇಶ್ ಹುಲ್ಕುಳಿ, ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲೆಯ ಪ್ರಮುಖ ಅಡಿಕೆ ಬೆಳೆಗಾರರು ಮತ್ತು ಗಣ್ಯರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button