ChitradurgaKarnataka

ಲಾರಿ ಮತ್ತು ಬಸ್‌ ಮಧ್ಯೆ ಭೀಕರ ಅಪಘಾತ| ಬೆಂಕಿಯ ಕೆನ್ನಾಲಿಗೆಗೆ 6 ಜನರ ಬಲಿ|ಪ್ರವಾಸಕ್ಕೆ ಹೊರಟಿದ್ದ 43 ಮಕ್ಕಳು ಬಚಾವ್-UPDATED

ಶಾಲಾ ಪ್ರವಾಸದ ಬಸ್‌ ಚಾಲಕ ಹಾಗೂ ಘಟನೆಯ ಪ್ರತ್ಯಕ್ಷದರ್ಶಿ ಸಚಿನ್‌ ಅವರ ಹೇಳಿಕೆ ಪ್ರಕಾರ, ಕಂಟೇನರ್‌ ಲಾರಿಯೊಂದು ಡಿವೈಡರ್‌ ದಾಟಿ ಬಂದು ಸಿಬರ್ಡ್‌ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಚಿತ್ರದುರ್ಗ : ಐಷಾರಾಮಿ ಸ್ಲೀಪರ್ ಬಸ್ ಹಾಗೂ ಕಂಟೇನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್‌ಗೆ ಬೆಂಕಿ ಹತ್ತಿಕೊಂಡು, 6 ಜನರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿ ಬಳಿಯ ಹೆದ್ದಾರಿಯಲ್ಲಿ (ಗೊರ್ಲತ್ತು ಕ್ರಾಸ್‌) ನಡೆದಿದೆ.

32 ಪ್ರಯಾಣಿಕರಿದ್ದ ಸೀಬರ್ಡ್‌ ಬಸ್‌ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿತ್ತು. ಗುರುವಾರ ಬೆಳಗಿನ ಜಾವ 1.30 ರ ಸುಮಾರಿಗೆ ಎದುರಿನಿಂದ ಬಂದ ಕಂಟೇನರ್‌ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

ಅಪಘಾತದಲ್ಲಿ ಕಂಟೇನರ್‌ ಲಾರಿಯ ಚಾಲಕ ಕುಲದೀಪ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸೀಬರ್ಡ್‌ ಬಸ್‌ ಚಾಲಕ ರಫೀಕ್‌ ತೀವ್ರ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತಪಟ್ಟವರನ್ನು ಬೆಂಗಳೂರಿನವರಾದ ಬಿಂದು(29), ಇವರ ಪುತ್ರಿ ಗ್ರೇಯಾ(5) ರಶ್ಮಿ ಮಹಾಲೆ(24), ಚೆನ್ನರಾಯಪಟ್ಟಣದವರಾದ ನವ್ಯಾ(26), ಮಾನಸ(27) ಹಾಗೂ ಕಂಟೇನರ್‌ ಲಾರಿ ಚಾಲಕ ಕುಲದೀಪ್‌ ಯಾದವ ಎಂದು ಗುರುತಿಸಲಾಗಿದೆ.

ಬಸ್‌ಗೆ ಬೆಂಕಿಹೊತ್ತಿಕೊಳ್ಳುತ್ತಿದ್ದಂತೇ ಪ್ರಯಾಣಿಕರು ಕಿಟಕಿ ಗಾಜು ಒಡೆದು ಬಸ್‌ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಪ್ರಾಣದ ಹಂಗು ತೊರೆದು ಹಲವು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಇನ್ನು ಇದೇ ಸೀಬರ್ಡ್‌ ಬಸ್‌ನಿಂದ ಗುದ್ದಿಸಿಕೊಂಡರೂ ಸಮಯಪ್ರಜ್ಞೆಯಿಂದಾಗಿ 43 ಮಕ್ಕಳನ್ನು ಬಚಾವ್‌ ಮಾಡಿದ್ದ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದ್ಯೊಯುತ್ತಿದ್ದ ಬಸ್‌ ಚಾಲಕ ಸಚಿನ್‌, ಪ್ರಾಣದ ಹಂಗು ತೊರೆದು ಸೀಬರ್ಡ್‌ ಬಸ್‌ನಲ್ಲಿ ಸಿಲುಕಿದ್ದ ಹಲವರನ್ನು ಹೊರಬರುವಲ್ಲಿ ಸಹಾಯ ಮಾಡಿದ್ದಾನೆ.

ಬಸ್‌ಗೆ ಹತ್ತಿದ್ದ ಬೆಂಕಿ ಇಡಿ ಬಸ್‌ ಅನ್ನು ಕೆಲವೆ ನಿಮಿಷಗಳಲ್ಲಿ ಅಪೋಷನ್‌ ತೆಗೆದುಕೊಂಡು ಬಿಟ್ಟಿತ್ತು. ಬೆಂಕಿಯ ತೀವ್ರತೆ ನೋಡಿದರೇ ಯಾರು ಉಳಿಯಲು ಸಾಧ್ಯವಿಲ್ಲ ಎಂಬಂತಹ ವಾತಾವರಣವಿತ್ತು.

ಆದರೆ ಆ ಕ್ಷಣದಲ್ಲಿ ತೋರಿದ ಸಮಯಪ್ರಜ್ಞೆಯಿಂದ 27 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಗೊಂಡವರಲ್ಲಿ ಎಂ ಮಂಜುನಾಥ್‌, ಎಚ್.ಸಂಧ್ಯಾ, ಎಚ್.ವಿ.ಶಶಾಂಕ್‌, ದಿಲೀಪ್‌, ಪ್ರತಿಶ್ವರನ್‌, ಕೆ.ಕವಿತಾ, ಅನಿರುದ್ದ, ಅಮೃತಾ, ಇಷಾ,ಸೂರಜ್‌, ಮಿಲಜಾ, ವಿಜಯ್‌ ಬಂಢಾರಿ, ಅಭೀಷೇಕ್‌, ಕಿರಣ್‌ ಪಾಲ್, ಕೀರ್ತನಾ, ಜಿ.ಬಿ.ನಂದಿತಾ, ದೇವಿಕಾ, ಮೇಘರಾಜ್‌, ಚಂದ್ರಕಾಂತ್‌, ಹೇಮರಾಜ್‌ಕುಮಾರ್‌, ಕಲ್ಪನಾ ಪ್ರಜಾಪತಿ, ಆರ್.ರಕ್ಷಿತಾ, ಗಗನಶ್ರೀ, ಎನ್.ಆದಿತ್ಯ, ವರುಣ್‌, ಮಸರತ್‌ಉನ್ನಿಸಾ, ಸಯ್ಯದ ಜಮೀರ್‌ ಗೌಸ್‌ ಎಂದು ಗುರುತಿಸಲಾಗಿದೆ.

ತೀವ್ರ ಗಾಯಗೊಂಡ ಮಂಜುನಾಥ್‌, ದಿಲೀಪ್‌ ಸೇರಿ ಮೂವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಲಾಗಿದೆ. ಬಸ್‌ನ ಚಾಲಕ ಹಾಗೂ ಕ್ಲೀನರ್‌ ಅವರನ್ನು ಹುಬ್ಬಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದ ಗಾಯಾಳು ಪ್ರಯಾಣಿಕರನ್ನು ಚಿತ್ರದುರ್ಗ, ತುಮಕೂರು, ಹಿರಿಯೂರು ಹಾಗು ಶಿರಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಕರ್ಣಕ್ಕೆ 25 ಜನರು, ಕುಮಟಾ ಹಾಗು ಶಿವಮೊಗ್ಗಕ್ಕೆ ಪ್ರಯಾಣಿಸಲು ತಲಾ ಇಬ್ಬರು ಟಿಕೆಟ್‌ ಪಡೆದಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ ಗೊರಗುಂಟೆಪಾಳ್ಯದಿಂದ ಬಸ್‌ ಏರಬೇಕಿದ್ದ ಒಬ್ಬರಿಗೆ ಬಸ್‌ ತಪ್ಪಿದೆ.

ಈ ಮಧ್ಯೆ ದಾಸರಹಳ್ಳಿಯಿಂದ ದಾಂಡೇಲಿಗೆ ಶಾಲಾ ಪ್ರವಾಸಕ್ಕೆ ಹೊರಟಿದ್ದ 43ಶಾಲಾ ಮಕ್ಕಳನ್ನು ಕರೆದುಕೊಂಡು ಹೊರಟಿದ್ದ ಬಸ್‌ಗೆ ಸೀಬರ್ಡ್‌ ಬಸ್‌ ಡಿಕ್ಕಿ ಹೊಡೆದಿದೆ.

ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳಿದ್ದ ಬಸ್‌
ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳಿದ್ದ ಬಸ್‌

ಆದರೆ ಅದೃಷ್ಟವಾತ ಬಸ್‌ನಲ್ಲಿದ್ದ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಸಚಿನ್‌ಗೆ ಸಣ್ಣಪುಟ್ಟ ಗಾಯಗಳಾಗಿದೆ.

ಶಾಲಾ ಪ್ರವಾಸದ ಬಸ್‌ ಚಾಲಕ ಹಾಗೂ ಘಟನೆಯ ಪ್ರತ್ಯಕ್ಷದರ್ಶಿ ಸಚಿನ್‌ ಅವರ ಹೇಳಿಕೆ ಪ್ರಕಾರ, ಕಂಟೇನರ್‌ ಲಾರಿಯೊಂದು ಡಿವೈಡರ್‌ ದಾಟಿ ಬಂದು ಸಿಬರ್ಡ್‌ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಹೊಡೆತದ ರಭಸಕ್ಕೆ ಸೀಬರ್ಡ್‌ ಬಸ್‌ ಹಿಂದೆ ಇದ್ದ ನಮ್ಮ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದಿದ್ದಾರೆ. ಆದರೆ ನಮ್ಮ ವಾಹನದಲ್ಲಿದ್ದ ಎಲ್ಲ ಮಕ್ಕಳು ಸೇಫ್‌ ಆಗಿದ್ದಾರೆ.

ನಂತರ ಬೆಂಕಿ ಹೊತ್ತಿಕೊಂಡಿದ್ದ ಬಸ್‌ ಬಳಿ ತೆರಳಿ ಹಲವರನ್ನು ಹೊರಗೆ ಕರೆತರಲು ಸಹಾಯ ಮಾಡಿದೆ. ಸ್ವಲ್ಪ ಹೊತ್ತಿನಲ್ಲಿ ಸ್ಪೋಟ ಸಂಭವಿಸಿ ಕಣ್ಣೆದುರಿಗೆ ಬಸ್‌ ಧಗ ಧಗ ಉರಿದಿದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಕವಿತ.ಕೆ ಎನ್ನುವವರ ಮದುವೆ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಬ್ಯಾಚುಲರ್‌ ಪಾರ್ಟಿ ಏರ್ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾವಳ್ಳಿಯಿಂದ ಸಿಬರ್ಡ್‌ ಬಸ್‌ನಲ್ಲಿ ಗೋಕರ್ಣಕ್ಕೆ ಗೆಳೆಯರ ತಂಡ ಪ್ರಯಾಣ ಮಾಡುತ್ತಿತ್ತು ಎಂದು ಹೇಳಲಾಗಿದೆ.

ಸ್ನೇಹಿತರ ತಂಡದಲ್ಲಿ ಮಂಜುನಾಥ್ (4L ಸೀಟ್‌), ಸಂಧ್ಯಾ ಹೆಚ್ (5L ಸೀಟ್‌). ಶಶಾಂಕ್‌ ಹೆಚ್‌ವಿ (6L ಸೀಟ್‌). ದಿಲೀಪ್ (7Lಸೀಟ್‌), ಪ್ರೀತಿಸ್ವರನ್ (7U ಸೀಟ್‌), ಬಿಂದು (8Lಸೀಟ್‌)ಹಾಗೂ ಕವಿತ ಕೆ (9L ಸೀಟ್‌) ಎನ್ನುವವರು ಪ್ರಯಾಣ ಮಾಡುತ್ತಿದ್ದರು.

ಘಟನೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಿಲೀಪ್‌ ಎನ್ನುವವರ ಅಕ್ಕ ಹಾಗೂ ಅವರ ಮಗು ಸಾವನ್ನಪ್ಪಿದ್ದಾರೆಂದು ಈಗ ಖಚಿತಗೊಂಡಿದೆ.

ಇನ್ನು ಮಂಜುನಾಥ್‌ ಎನ್ನುವವರಿಗೆ ತೀವ್ರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ದಿಲೀಪ್‌ ಹಾಗೂ ಶಶಾಂಕ್‌ ಎನ್ನುವವರನ್ನೂ ಕೂಡ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಸಣ್ಣ ಪುಟ್ಟಗಾಯದಿಂದ ದಿಲೀಪ್ ಬದುಕುಳಿದಿದ್ದಾರೆ. ಮಂಜುನಾಥ್ ,ಶಶಾಂಕ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ತೀವ್ರ ಸುಟ್ಟು ಗಾಯಗಳಿಂದ ಬಳಲುತ್ತಿದ್ದ ಯುವತಿಯನ್ನು ಸಹ ವಿಕ್ಟೋರಿಯಾ ಆಸ್ಪತ್ರೆಗ ದಾಖಲಿಸಲಾಗಿದೆ.

ಬಸ್‌ನಲ್ಲಿ ದೊರಕಿರುವ ಕೆಲ ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಎಸ್ಪಿ, ಡಿವೈಎಸ್ಪಿ, ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಟ್ರಕ್-ಬಸ್ ಡಿಕ್ಕಿಯಲ್ಲಿ ಸಂಭವಿಸಿದ ಜೀವಹಾನಿಯಿಂದ ತಮಗೆ ಅತೀವ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್‌ ಸಂದೇಶದಲ್ಲಿ ಹೇಳಿದ್ದಾರೆ.

ಮೃತಪಟ್ಟ ಪ್ರತಿಯೊಬ್ಬರ ಹತ್ತಿರದ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರವನ್ನು ಹಾಗು ಗಾಯಾಳುಗಳಿಗೆ ತಲಾ ₹50,000 ನೀಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.

ಇನ್ನು ಅಪಘಾತದಲ್ಲಿ ಸಾವನ್ನಪ್ಪಿದ್ದ ಮೃತರ ಕುಟುಂಬಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ಸೂಚಿಸಿದ್ದಾರೆ.

ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಕರ್ನಾಟಕದ ಚಿತ್ರದುರ್ಗದಲ್ಲಿ ಸಂಭವಿಸಿದ ದುರಂತ ಬಸ್ ಬೆಂಕಿ ಅವಘಡದಿಂದ ತೀವ್ರ ನೋವುಂಟಾಗಿದೆ ಎಂದು ತಮ್ಮ ಎಕ್ಸ್‌ ಸಂದೇಶದಲ್ಲಿ ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ‌ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್‌ ಸಂದೇಶದಲ್ಲಿ ಹೇಳಿದ್ದಾರೆ.

ಮೃತಪಟ್ಟ ಕುಟುಂಬಗಳಿಗೆ ತಲಾ ರೂ.5 ಲಕ್ಷರೂ. ಹಾಗೂ ಗಾಯಗೊಂಡವರಿಗೆ ತಲಾ ರೂ.50,000ರೂ. ಪರಿಹಾರ ನೀಡಲಾಗುವುದು ಎಂದಿರುವ ಸಿಎಂ, ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ.

ಈ ಬಗ್ಗೆ ತನಿಖೆ ನಡೆಸಿ, ಅಪಘಾತಕ್ಕೆ ಕಾರಣ ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಶೀಘ್ರ ಗುಣಮುಖರಾಗಲಿ ಪ್ರಾರ್ಥಿಸುವದಾಗಿ ತಿಳಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button