ಕುವೆಂಪು ವಿವಿ 35 ನೇ ಘಟಿಕೋತ್ಸವ|ಕಾಲಕ್ಕೆ ತಕ್ಕಂತೆ ಜ್ಞಾನ,ಕೌಶಲ್ಯ ಬೆಳೆಸಿಕೊಳ್ಳಬೇಕು-ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕರೆ
ಕೆ.ವಿ. ಅಕ್ಷರ ಹಾಗೂ ಪ್ರೊ. ಎಚ್.ಎ. ರಂಗನಾಥ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರು ಕಾರಣಾಂತರಗಳಿಂದ ಘಟಿಕೋತ್ಸವದಲ್ಲಿ ಭಾಗವಹಿಸಿರಲಿಲ್ಲ.

ಶಿವಮೊಗ್ಗ: ಪದವಿಯು ಕೇವಲ ಜ್ಞಾನದ ಸಂಕೇತವಲ್ಲ, ಸಮಾಜಕ್ಕೆ ಉತ್ತಮ ದಿಕ್ಕು ನೀಡಬಲ್ಲ ವಿದ್ಯಾರ್ಥಿಗಳ ಸಾಮರ್ಥ್ಯದ ಪ್ರತೀಕವಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 35 ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸೋಲುಗಳು ಜೀವನದ ಭಾಗ, ಆದರೆ ಅವುಗಳಿಂದ ಕಲಿತು ಮುಂದೆ ಸಾಗುವುದೇ ನಿಜವಾದ ಯಶಸ್ಸು ಎಂದು ವಿದ್ಯಾರ್ಥಿಗಳು ಕಿವಿ ಮಾತು ಹೇಳಿದರು.

ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳ ಸಾಧನೆ ಹಿಂದೆ ಪೋಷಕರ ಹಾಗೂ ಶಿಕ್ಷಕರ ಪಾತ್ರ ಬಹುದೊಡ್ಡದು. ಅವರಿಗೆ ತಾವು ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದರು.
ಜ್ಞಾನದ ದೇಗುಲದಿಂದ ಹೊರಬಂದು ಕರ್ಮಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳು, ಇಲ್ಲಿ ಪಡೆದ ಶಿಕ್ಷಣವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಗೊಳಿಸುವುದಲ್ಲದೆ, ಜೀವನವನ್ನು ಸಾರ್ಥಕಗೊಳಿಸಲು ಸಹಕಾರಿಯಾಗಲಿದೆ ಎಂದರು.

ಜೀವನದಲ್ಲಿ ಯಶಸ್ಸಿಗಾಗಿ ನಿರಂತರ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ದೃಷ್ಟಿಕೋನ ಅತ್ಯಗತ್ಯ ಎಂದು ತಿಳಿ ಹೇಳಿದರು. ಜಗತ್ತು ಕ್ಷಿಪ್ರ ಬದಲಾವಣೆಯ ಹಂತದಲ್ಲಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ಜೀವನದ ಪ್ರತಿಯೊಂದು ಕ್ಷೇತ್ರವನ್ನು ಪ್ರಭಾವಿಸಿದೆ.
ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಡಿಜಿಟಲ್ ಕ್ರಾಂತಿಯು ಹೊಸ ಅವಕಾಶಗಳ ಜೊತೆಗೆ ಹೊಸ ಸವಾಲುಗಳನ್ನೂ ತಂದೊಡ್ಡಿದೆ.
ಈ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರವಾಗಿ ಕಲಿಯುವ ಪ್ರವೃತ್ತಿ ಮತ್ತು ಸಾಮಾಜಿಕ ಜವಾಬ್ದಾರಿ ಬಹಳ ಮುಖ್ಯವಾಗಿದೆ.
ಆದ್ದರಿಂದ ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ್ಯಗಳನ್ನು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಮಹಾನ್ ಸಾಹಿತಿ ಮತ್ತು ಚಿಂತಕ ‘ಕುವೆಂಪು’ ಅವರ ಹೆಸರಿನಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯವು, ‘ವಿಶ್ವಮಾನವ’ ಸಂದೇಶ ನೀಡಿದ ಅವರ ಆದರ್ಶಗಳಿಂದ ಪ್ರೇರಿತವಾಗಿದೆ ಎಂದ ಅವರು, ಕುವೆಂಪು ಅವರ ಸಾಹಿತ್ಯವು ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಪ್ರಗತಿಪರ ಚಿಂತನೆಗಳನ್ನು ಉತ್ತೇಜಿಸಿದೆ ಎಂದು ಹೇಳಿದರು.
ನಿರಂತರ ಕಲಿಕೆಯಲ್ಲಿ ತೊಡಗಿ|
ಪ್ರೊ.ಅನಿಲ್ ಸಹಸ್ರಬುದ್ಧೆ|
ಶಿಕ್ಷಣ ನಿಮ್ಮ ಮನೆ ಬಾಗಿಲನಲ್ಲೇ ಇದ್ದು ವಿದ್ಯಾರ್ಥಿಗಳು, ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುದ್ಧೆ ಕರೆ ನೀಡಿದರು.
ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಿದ ಅವರು, ಜಗತ್ತು ಹಲವಾರು ಅವಕಾಶಗಳನ್ನು ನೀಡಿದೆ.
ಕೋವಿಡ್-19, ರಷ್ಯಾ-ಉಕ್ರೇನ್ ಯುದ್ಧ ಹಾಗೂ ಆರ್ಥಿಕ ಕುಸಿತದಂತಹ ಘಟನೆಗಳು ಜಗತ್ತಿನಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿವೆ ಎಂದರು
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಇಂದು ದೊಡ್ಡ ಬದಲಾವಣೆಗಳನ್ನು ತರುತ್ತಿವೆ.
ಭಾರತ ಸರ್ಕಾರವು AI ತಂತ್ರಜ್ಞಾನದ ಸದ್ಬಳಕೆಗಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಎಐ ಕೇಂದ್ರಗಳನ್ನು ಸ್ಥಾಪಿಸಿದ್ದು, ಕೃಷಿಯಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಎಐ ತನ್ನ ಛಾಪು ಮೂಡಿಸಿದೆ ಎಂದು ಹೇಳಿದರು.
ನಿರಂತರ ಕಲಿಕೆ ಹಾಗೂ ಪದವಿ ಪಡೆಯುವುದು ಶಿಕ್ಷಣದ ಅಂತ್ಯವಲ್ಲ, ಬದಲಾಗಿ ಜವಾಬ್ದಾರಿಯುತ ಬದುಕಿನ ಆರಂಭ ಎಂದು ತಿಳಿ ಹೇಳಿದರು.
ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಒಂದು ಕಾಲದಲ್ಲಿ ಜಾಗತಿಕ ಜಿಡಿಪಿಯಲ್ಲಿ ಭಾರತದ ಪಾಲು ಶೇ. 32ರಷ್ಟಿತ್ತು. ಆ ವೈಭವವನ್ನು ಮರಳಿ ಪಡೆಯಲು ಇಂದಿನ ಯುವಶಕ್ತಿ ಶ್ರಮಿಸಬೇಕಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿ ಡಾ. ಎಂ. ಸಿ. ಸುಧಾಕರ್ ಮಾತನಾಡಿ, 35 ವರ್ಷಗಳ ಪಯಣ ಮುಗಿಸಿರುವ ಕುವೆಂಪು ವಿವಿ, ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡಿದ್ದರೂ ಹಲವು ಸಮಸ್ಯೆ ಗಳು ಸಹ ಇವೆ.
ಗುಣಮಟ್ಟದ ಶಿಕ್ಷಣದೊಂದಿಗೆ ಸಂಶೋಧನೆಗೆ ಒತ್ತು ನೀಡಬೇಕು. ಅಭಿವೃದ್ದಿ ಹೊಂದವಲ್ಲಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕಿದೆ ಎಂದು ಸೂಚ್ಯವಾಗಿ ಹೇಳಿದರು.
ಇದಕ್ಕೂ ಮುನ್ನ ಕೆ.ವಿ. ಅಕ್ಷರ ಹಾಗೂ ಪ್ರೊ. ಎಚ್.ಎ. ರಂಗನಾಥ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರು ಕಾರಣಾಂತರಗಳಿಂದ ಘಟಿಕೋತ್ಸವದಲ್ಲಿ ಭಾಗವಹಿಸಿರಲಿಲ್ಲ.
ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ವಿಶ್ವವಿದ್ಯಾಲಯದ ವರದಿ ವಾಚಿಸಿದರು. ಕುಲಸಚಿವ ಹೇಮಂತ್ ಎನ್. ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ. ಆರ್. ತಿಮ್ಮರಾಯಪ್ಪ ಇತರೆ ಅಧಿಕಾರಿಗಳು, ಹಾಜರಿದ್ದರು.
ಅಭಿಷೇಕ್ ಹೆಚ್. ಎಂ.ಗೆ 10 ಚಿನ್ನದ ಪದಕ
ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರು ಅತಿ ಹೆಚ್ಚು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಅಭಿಷೇಕ್ ಹೆಚ್. ಎಂ. (ಎಂ.ಎ. ಕನ್ನಡ): ಒಟ್ಟು 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆಯುವ ಮೂಲಕ ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಕ್ಷಾ (ಎಂ.ಎಸ್ಸಿ. ಪರಿಸರ ವಿಜ್ಞಾನ) ಅವರಿಗೆ 7 ಚಿನ್ನದ ಪದಕ, ಸೃಷ್ಠಿ ಆರ್. (ಎಂ.ಎಸ್ಸಿ. ಜೈವಿಕ ತಂತ್ರಜ್ಞಾನ) 6 ಚಿನ್ನದ ಪದಕ, ಸಹನಾ ಗಣೇಶ್ ಶೇಟ್ (ಎಂ.ಬಿ.ಎ) 5 ಚಿನ್ನದ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದು, ಸಜನ ಎಸ್. (ಎಂ.ಎ. ಸಮಾಜಶಾಸ್ತ್ರ) 5 ಚಿನ್ನದ ಪದಕ, ಇನ್ನು ಗಣಿತಶಾಸ್ತ್ರ ವಿಭಾಗದ ಅಭಿಲಾಷ್ ಎಲ್. ಅವರು 4 ಚಿನ್ನದ ಪದಕ ಮತ್ತು 2 ನಗದು ಬಹುಮಾನಗಳನ್ನು ಪಡೆದರೆ, ಇತರ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಲಾ 3 ರಿಂದ 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಘಟಿಕೋತ್ಸವದಲ್ಲಿ ಒಟ್ಟು 16,955 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಇದರಲ್ಲಿ 7,015 ಪುರುಷರು ಹಾಗೂ 9,940 ಮಹಿಳೆಯರು ಸೇರಿದ್ದಾರೆ.
ಒಟ್ಟು 155 ಚಿನ್ನದ ಪದಕಗಳನ್ನು ಹಂಚಲಾಗಿದ್ದು, ಅದರಲ್ಲಿ 68 ವಿದ್ಯಾರ್ಥಿನಿಯರು ಹಾಗೂ 11 ವಿದ್ಯಾರ್ಥಿಗಳು ಪದಕಗಳನ್ನು ಹಂಚಿಕೊಂಡಿದ್ದಾರೆ.
ಪಿ.ಹೆಚ್ಡಿಗೆ ಒಟ್ಟು 163 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಇದರಲ್ಲಿ 106 ಪುರುಷರು ಹಾಗೂ 57 ಮಹಿಳೆಯರಿದ್ದಾರೆ.
ವಿಜ್ಞಾನ ನಿಕಾಯದಲ್ಲಿ 84 ಅಭ್ಯರ್ಥಿಗಳು (ಅತಿ ಹೆಚ್ಚು). ಕಲಾ ನಿಕಾಯದಲ್ಲಿ 63 ಅಭ್ಯರ್ಥಿಗಳು ಶಿಕ್ಷಣ ನಿಕಾಯ 09 ಅಭ್ಯರ್ಥಿಗಳು ವಾಣಿಜ್ಯ ನಿಕಾಯ 06 ಅಭ್ಯರ್ಥಿಗಳು ಕಾನೂನು ನಿಕಾಯ 01 ಅಭ್ಯರ್ಥಿ ಇದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








