ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ|ಸರ್ಕಾರಿ ಶಾಲಾ ವಿದ್ಯಾರ್ಥಿನಿ ಸೇರಿದಂತೆ ಏಳು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್!ಶೇ.14.06% ಫಲಿತಾಂಶದಲ್ಲಿ ಹೆಚ್ಚಳ
ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 6 ವಿಷಯಗಳಲ್ಲಿ ಪೂರ್ಣಾಂಕ ಪಡೆದು ರಾಜ್ಯಕ್ಕೆ ಮಾದರಿ ವಿದ್ಯಾರ್ಥಿಗಳಾಗಿದ್ದಾರೆ.

ಬೆಂಗಳೂರು: ಬಹು ನಿರೀಕ್ಷಿತ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 94.1 % ರಷ್ಟು ಫಲಿತಾಂಶ ದಾಖಲಾಗಿದ್ದು ಕಳೆದ ವರ್ಷಕ್ಕಿಂತ 14.06% ಹೆಚ್ಚಳವಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ ಸಚಿವರು, ಕಳೆದ ವರ್ಷಕ್ಕಿಂತ ಫಲಿತಾಂಶದಲ್ಲಿ ಹೆಚ್ಚಳವಾಗಲು ಶಿಕ್ಷಕರ ಪರಿಶ್ರಮವೇ ಕಾರಣವೆಂದು ಶ್ಲಾಘಿಸಿದ್ದಾರೆ.
7 ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ!
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 7 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನಗಳಿಸಿರುವುದು ವಿಶೇಷ.

ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 6 ವಿಷಯಗಳಲ್ಲಿ ಪೂರ್ಣಾಂಕ ಪಡೆದು ರಾಜ್ಯಕ್ಕೆ ಮಾದರಿ ವಿದ್ಯಾರ್ಥಿಗಳಾಗಿದ್ದಾರೆ.

ಇನ್ನು ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ರಾಜ್ಯಮಟ್ಟದಲ್ಲಿ ನಡೆಸಿದ 3 ಪೂರ್ವಸಿದ್ದತಾ ಪರೀಕ್ಷೆಗಳು , ವೇಕ್ ಅಪ್ ಕಾಲ್, ಪ್ರಗತಿ ಪರಿಶೀಲನಾ ಸಭೆಗಳು, ಪಠ್ಯ ಆಧರಿತ ಮೌಲ್ಯಮಾಪನ(LBA) ಮಾದರಿ ಪ್ರಶ್ನೆಪತ್ರಿಕೆ, ಪೂರ್ವಯೋಜಿತ ಪರೀಕ್ಷಾ ವೇಳಾಪಟ್ಟಿ ಪ್ರಕಟಣೆ ಸೇರಿದಂತೆ ಸಾಕಷ್ಟು ಸುಧಾರಣಾ ಕ್ರಮ ಅನುಸರಿಸಿದ ಹಿನ್ನಲೆ ಫಲಿತಾಂಶ ಅತ್ಯುತ್ತಮವಾಗಿ ದಾಖಲಾಗಲು ಕಾರಣ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಬಾರಿ ಫಲಿತಾಂಶದಲ್ಲಿ ಏರಿಕೆ ಕಂಡಿದೆಯಾದರೂ, ಕಳೆದ ವರ್ಷ 625 ಅಂಕವನ್ನು 22 ವಿದ್ಯಾರ್ಥಿಗಳು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದರು ಈ ಬಾರಿ ಆ ಸಂಖ್ಯೆ 7ಕ್ಕೆ ಬಂದು ನಿಂತಿದೆ.
624 ಅಂಕವನ್ನು 65 ವಿದ್ಯಾರ್ಥಿಗಳು ಕಳೆದ ವರ್ಷ ತೆಗೆದುಕೊಂಡಿದ್ದರು. ಈ ಬಾರಿ 21 ಕ್ಕೆ ಕುಸಿದಿದೆ 620 ಅಂಕವನ್ನು 327 ವಿದ್ಯಾರ್ಥಿಗಳು ಕಳೆದ ವರ್ಷ ಪಡೆದಿದ್ದರು.
ಈ ಬಾರಿ 150 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಹಿಂದಿನ ವರ್ಷಕ್ಕಿಂತ ಅಂಕಿಅಂಶಗಳಲ್ಲಿ ಸಂಖ್ಯೆ ಕಡಿತಗೊಳ್ಳುತ್ತಿರುವುದು ಗಮನಾರ್ಹ ಸಂಗತಿ ಇದಕ್ಕೆ ಕಾರಣವನ್ನ ಶಿಕ್ಷಣ ಇಲಾಖೆ ಗುರುತಿಸಬೇಕಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲು!

ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ..ಗುಣಮಟ್ಟದ ಶಿಕ್ಷಣ ಸಿಗಲ್ಲ ಎಂದು ಸರ್ಕಾರಿ ನೌಕರರು ಖಾಸಗಿ ಶಾಲೆ ಮೊರೆಹೋಗುವುದು ಸಹಜ.
ಆದರೆ, ಅದಕ್ಕೆ ಅಪವಾದವೆಂಬಂತೆ ಸರ್ಕಾರಿ ಶಾಲೆ ಶಿಕ್ಷಕ ತಮ್ಮ ಪ್ರತಿಭಾನ್ವಿತ ಮಗಳನ್ನ ಸರ್ಕಾರಿ ಶಾಲೆಗೆ ಸೇರಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಸರ್ಕಾರೀ ಶಾಲೆ ಖಾಸಗೀ ಶಾಲೆಗೆ ಕಮ್ಮಿಯಿಲ್ಲ ಎಂದು ಸಾಬೀತು ಪಡಿಸಿದ್ದಾರೆ.
ಬೆಳಗಾವಿಯ ಕಾಟಗೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದರ್ ಪಾಟೀಲ್ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರೋದು ಸರ್ಕಾರಿ ಶಾಲೆಗಳಿಗೆ ಸ್ಪೂರ್ತಿ ಮತ್ತು ಮಾದರಿಯಾಗಿದ್ದಾರೆ.

ಪ್ರಾರ್ಥನಾ ತಂದೆ ನಾಗೇಶ್ ಪಾಟೀಲ್ ಸರ್ಕಾರಿ ಪ್ರೌಡಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದು, ಪುತ್ರಿಯ ಸರ್ಕಾರಿ ಶಾಲೆಯಲ್ಲೇ ಸಾಧನೆ ಮಾಡಲು ಉತ್ತೇಜಿಸಿದ್ದರು.
ಇದೀಗ ಜಿಲ್ಲೆ ರಾಜ್ಯಕ್ಕೆ ಪ್ರಾರ್ಥನಾ ಹೆಮ್ಮೆಯ ಮಗಳಾಗಿದ್ದು ಅಭಿನಂದನೆಯ ಮಹಾಪೂರವೇ ಹರಿದಿದೆ ಎಂದು ನ್ಯೂ ಇಂಡಿಯಾ ಕನ್ನಡಕ್ಕೆ ನಾಗೇಶ್ ಪಾಟೀಲ್ ತಿಳಿಸಿದರು.
ಇನ್ನು ಒಟ್ಟಾರೇ ಫಲಿತಾಂಶದ ಉತ್ತಮ ಸ್ಥಾನವನ್ನು ಪಡೆದಿರುವ ಪಟ್ಟಿಯನ್ನು ಅವಲೋಕಿಸಿದಾಗ,
625/624 ಅಂಕವನ್ನು 21 ವಿದ್ಯಾರ್ಥಿಗಳು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
625/623. ಅಂಕವನ್ನು 28 ವಿದ್ಯಾರ್ಥಿಗಳು ಹಂಚಿಕೊಂಡಿದ್ದು ತೃತೀಯ ಸ್ಥಾನ ಗಳಿಸಿದ್ದಾರೆ.
624/622 ಅಂಕವನ್ನು 74 ವಿದ್ಯಾರ್ಥಿಗಳು ಪಡೆದುಕೊಂಡು ನಾಲ್ಕನೇ ಸ್ಥಾನಗಳಿಸಿದರೆ,
624/621 ಅಂಕವನ್ನು 98ವಿದ್ಯಾರ್ಥಿಗಳು ಪಡೆದು 5ನೇ ಸ್ಥಾನ ಗಳಿಸಿದ್ದಾರೆ.
624/620 ಅಂಕವನ್ನು 150ವಿದ್ಯಾರ್ಥಿಗಳು ಪಡೆದು ರಾಜ್ಯಕ್ಕೆ 6 ನೇ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಫಲಿತಾಂಶದಲ್ಲಿ ಪ್ರಗತಿ!
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಕಲ್ಬುರ್ಗಿ ಜಿಲ್ಲೆ ಕೊನೆ ಸ್ಥಾನ ಪಡೆದುಕೊಂಡಿದೆ.

ಶಿವಮೊಗ್ಗ ಜಿಲ್ಲೆ 9ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷ 88.66% ಫಲಿತಾಂಶ ಪಡೆದಿತ್ತು ಈಬಾರಿ 96.56% ಫಲಿತಾಂಶ ಹೆಚ್ಚಳವಾಗಿದೆ.
ಶಿವಮೊಗ್ಗದಲ್ಲಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಕೃತಿ ಎಂಬ ವಿದ್ಯಾರ್ಥಿನಿ 623 ಅಂಕಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಟಾಪರ್ ಆಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತೃತೀಯ ಭಾಷೆಯಲ್ಲಿ ಔಟ್ ಆಫ್ ಔಟ್!
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ತೃತೀಯಭಾಷೆ ಗ್ರೇಡಿಂಗ್ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಅದ್ರಲ್ಲೂ ಹಿಂದಿ ಹೇರಿಕೆ ಹೊರೆ ಎಂಬುದಕ್ಕೆ ವಿಷಯವಾರು ಹಾಗೂ ಭಾಷಾವರು ಅಂಕಿ ಅಂಶಗಳನ್ನ ಗಮನಿಸಿದರೆ ತೃತೀಯ ಭಾಷೆ ಹಿಂದಿಯಲ್ಲಿ ಈ ಬಾರಿ 31,255 ವಿದ್ಯಾರ್ಥಿಗಳು 100ಔಟ್ ಆಫ್ 100 ಅಂಕಪಡೆದಿದ್ದಾರೆ.

ಕಳೆದ ವರ್ಷ ತೃತೀಯ ಭಾಷೆ ಹಿಂದಿ ವಿಷಯದಲ್ಲಿ 15,859ಮಂದಿ ನೂರಕ್ಕೆ ನೂರು ಪಡೆದಿದ್ದರು. ಈ ವರ್ಷ ಅತ್ಯಧಿಕ ಅಂಕಗಳಿಕೆ ಪ್ರಮಾಣ ಹೆಚ್ಚಾಗಿದೆ.
ಅದೇ ರೀತಿ ತೃತೀಯ ಭಾಷೆಯಲ್ಲಿ ಕಳೆದ ವರ್ಷ ಪಾಸಿಂಗ್ ಪ್ರಮಾಣ 88.13 %ಇತ್ತು. ಪ್ರಸಕ್ತ ಸಾಲಿನಲ್ಲಿ 98.13% ಉತ್ತೀರ್ಣರಾಗಿದ್ದಾರೆ.
ಅದರಲ್ಲಿ ತೃತೀಯ ಭಾಷೆ ಕನ್ನಡದಲ್ಲಿ 404, ಸಂಸ್ಕೃತ 1050, ತುಳು 499, ಉರ್ದು 190,,ಇಂಗ್ಲೀಷ್ನಲ್ಲಿ 280 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿಕೊಂಡಿದ್ದಾರೆ.
ಬಾಲಕಿಯರದ್ದೇ ಮೇಲುಗೈ!
ಇನ್ನೂ ಈ ಬಾರಿಯು ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 96.18% ತೇರ್ಗಡೆಯಾಗುವ ಮೂಲಕ ಬಾಲಕರಿಗಿಂತ ಮುಂದೆ ಇದ್ದಾರೆ.

93.0% ನಗರ ವಿದ್ಯಾರ್ಥಿಗಳು ಪಾಸಾಗಿದ್ದರೆ. ಗ್ರಾಮೀಣ ಭಾಗದಲ್ಲಿ 94.80 % ವಿದ್ಯಾರ್ಥಿಗಳು ಪಾಸಾಗಿ ಮೇಲುಗೈ ಸಾಧಿಸಿದ್ದಾರೆ.
ಇನ್ನು ರಾಜ್ಯದಲ್ಲಿ 6172 ಶಾಲೆಗಳು 100% ಫಲಿತಾಂಶ ಪಡೆದರೆ 27 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







