DistrictShivamogga

ಅರಸರ ಕಾಲದ ನಾಣ್ಯ ಹಾಗೂ ನೋಟುಗಳ ಪ್ರದರ್ಶನ|ಸಂಗ್ರಹದ ಹವ್ಯಾಸವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು-ಸಂಸದ ಬಿ.ವೈ.ರಾಘವೇಂದ್ರ

ಸಂಗ್ರಹಕಾರರ ಶ್ರಮ ಈ ಪ್ರದರ್ಶನದಲ್ಲಿ ಕಂಡು ಬರುತ್ತದೆ. ಈ ರೀತಿ ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ಕರೆ ನೀಡಿದರು.

ಶಿವಮೊಗ್ಗ : ಅರಸರ ಕಾಲದ ವೈವಿಧ್ಯಮಯ ನಾಣ್ಯ ಹಾಗೂ ನೋಟುಗಳು ನಮ್ಮ ಇತಿಹಾಸದ ಹೆಜ್ಜೆಗಳನ್ನು ತಿಳಿಸುತ್ತದೆ ಅಲ್ಲದೇ ಆಯಾ ಕಾಲದ ಅರಸರ ಆರ್ಥಿಕ, ಧಾರ್ಮಿಕ ಸ್ಥಿತಿಗತಿಗಳನ್ನು ಅನಾವರಣ ಮಾಡುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ವತಿಯಿಂದ ಶುಕ್ರವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ನಾಣ್ಯ- ನೋಟುಗಳು, ಅಂಚೆ ಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯನಗರ ಅರಸರ ಕಾಲದ ಬಂಗಾರದ ನಾಣ್ಯ, ಮಲೆನಾಡಿನ ಕೆಳದಿ ಅರಸರ ನಾಣ್ಯಗಳು ಎಲ್ಲರನ್ನು ಆಕರ್ಷಿಸುತ್ತಿದೆ ಎಂದ ಅವರು, ಈ ಪ್ರದರ್ಶನ ವೀಕ್ಷಿಸಲು ಅರ್ಧ ದಿನವಾದರೂ ಬೇಕು. ಅಷ್ಟೊಂದು ನಾಣ್ಯ ನೋಟುಗಳ ಸಂಗ್ರಹ ಇಲ್ಲಿದೆ ಎಂದು ನುಡಿದರು.

ಸಂಗ್ರಹಕಾರರ ಶ್ರಮ ಈ ಪ್ರದರ್ಶನದಲ್ಲಿ ಕಂಡು ಬರುತ್ತದೆ. ಈ ರೀತಿ ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಇಂದಿನ ಮಕ್ಕಳಲ್ಲಿ ಹಳೆಯ ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು. ಇಂತಹ ಪ್ರದರ್ಶನವು ನಮ್ಮ ಗತಕಾಲದ ಇತಿಹಾಸ, ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ನಮ್ಮಚರಿತ್ರೆಯ ಮೆಲಕು ಹಾಕಲು ಸಾಧ್ಯವಾಗುತ್ತದೆ ಎಂದರು.

ಇತ್ತೀಚೆಗೆ ಲಕ್ಕುಂಡಿಯ ಮನೆಯ ಅಡಿಪಾಯದಲ್ಲಿ ಬಂಗಾರದ ಆಭರಣ, ನಾಣ್ಯಗಳು ಸಿಕ್ಕಿವೆ. ಇದರಿಂದ ನಮ್ಮಲ್ಲಿದ್ದ ಬಂಗಾರದ ವೈಭವ ತಿಳಿದು ಬರುತ್ತದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಭಾರತವನ್ನು ಅನೇಕ ಅರಸರು, ವಿದೇಶಿ ಅಕ್ರಮಣಕಾರರು ಆಳಿದ್ದಾರೆ. ಅವರ ಕಾಲದ ಆಡಳಿತವನ್ನು ತಿಳಿಯಲು ಆಗಿನ ನಾಣ್ಯ ಮತ್ತು ನೋಟುಗಳು ಸಹಕಾರಿ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ದೇವದಾಸ್ ಎನ್ ನಾಯಕ್ ವಹಿಸಿದ್ದರು. ಕಾರ್ಯದರ್ಶಿ ಎಸ್. ಚಂದ್ರಕಾಂತ್, ಜಂಟಿ ಕಾರ್ಯದರ್ಶಿ ಎಲ್., ಸುಬ್ರಹ್ಮಣ್ಯ, ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್ ಹಾಗೂ ಮಾಜಿ ಸೂಡ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮತ್ತಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button