DistrictKarnatakaShivamoggaSpecial Stories

ಕಸದ ವಾಹನದ ಹಾಡಿಗೆ ಖೈದಿಗಳ ಧ್ವನಿ|ಕಸ ವಿಲೇವಾರಿ ಜಾಗೃತಿಗೆ ವಿನೂತನ ಪ್ರಯತ್ನ|ಖೈದಿಗಳೇ ರಚಿಸಿದ ಹಾಡು ಈಗ ಫುಲ್‌ ಫೇಮಸ್‌|

ರಾಜ್ಯದಲ್ಲಿ ಮೊದಲ ಬಾರಿಗೆ ಖೈದಿಗಳಿಂದಲೇ ಸ್ವಚ್ಚತಾ ಗೀತೆಗಳನ್ನ ಸಂಯೋಜಿಸಿ, ಹಾಡಿಸುವ ವಿನೂತನ ಪ್ರಯೋಗಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹ ಆಡಳಿತ ಸುಧಾರಣಾ ಇಲಾಖೆ ಮುಂದಾಗಿದೆ.

ಶಿವಮೊಗ್ಗ: ಬೆಳಾಗಾದ್ರೆ ಸಾಕು ಪಾಲಿಕೆಯ ಕಸದ ಗಾಡಿ ನಮ್ಮ ಮನೆ ಹತ್ರ ಬರ್ತಿದೆ ಅಂತ ಗೊತ್ತಾಗೋದು.. ಸ್ವಚ್ಚತಾ ವಾಹನದಿಂದ ಮೊಳಗುವ ಹಾಡು ಕೇಳಿ..ಇನ್ಮುಂದೆ ಶಿವಮೊಗ್ಗದ ನಾಗರೀಕರು ಕೇಳಿಸುಕೊಳ್ಳುವ ಆ ಹಾಡುಗಳು ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿರುವ ಜೈಲಿನ ಖೈದಿಗಳೇ ರಚಿಸಿ..ಹಾಡಿದ್ದಾರೆ.

ಖೈದಿಗಳಂದ್ರೆ ಕ್ರಿಮಿನಲ್ಗಳು ಎಂದಷ್ಟೇ ಪರಿಗಣಿಸುವ ಸಮಾಜಕ್ಕೆ ಮನಪರಿವರ್ತನೆ, ಸುಧಾರಣಾಹಂತದಲ್ಲಿರುವ ಖೈದಿಗಳಲ್ಲಿ ಸುಪ್ತವಾಗಿರುವ ಕಲಾಪ್ರತಿಭೆ ಅನಾವರಣಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರ ಪಿ ರಂಗನಾಥ್ ಹೊಸ ಮುನ್ನುಡಿ ಬರೆದಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಖೈದಿಗಳಿಂದಲೇ ಸ್ವಚ್ಚತಾ ಗೀತೆಗಳನ್ನ ಸಂಯೋಜಿಸಿ, ಹಾಡಿಸುವ ವಿನೂತನ ಪ್ರಯೋಗಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹ ಆಡಳಿತ ಸುಧಾರಣಾ ಇಲಾಖೆ ಮುಂದಾಗಿದೆ.

ಪ್ರತಿನಿತ್ಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆಗೆ ಬರುವ ಕಸ ವಿಲೇವಾರಿ ವಾಹನದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಗೀತೆಗಳು ಭಿತ್ತರವಾಗುತ್ತವೆ.

ಜೂನ್ 11 ರಿಂದ ನೀವು ಹೊಸ ಬಗೆಯ ಜಾಗೃತಿ ಗೀತೆಗಳನ್ನ ಕೇಳಿರಬಹುದು.

ಇಂತಹ ಜಾಗೃತಿ ಗೀತೆಗಳನ್ನ ಶಿವಮೊಗ್ಗ ಕೇಂದ್ರ ಕಾರಾಗೃಹಲ್ಲಿ ಸಜಾ ಬಂಧಿಯಾಗಿರುವ ಚಂದ್ರಹೆಮ್ಮಾಡಿ ಸೇರಿ 6 ಮಂದಿ ಖೈದಿಗಳ ತಂಡ ವಿಶಿಷ್ಟ ಸ್ವಚ್ಚತಾ ಗೀತೆಗಳ ಸಾಹಿತ್ಯ ರಚನೆ, ಸಂಗೀತ ಸಂಯೋಜನೆ ಮಾಡಿದ ಗಾನಸುಧೆ ನಗರದೆಲ್ಲೆಡೆ ಸಂಚರಿಸುವ ಕಸದ ಗಾಡಿಗಳಲ್ಲಿ ಭಿತ್ತರವಾಗುತ್ತಿರೋದು ವಿಶೇಷ ..

ಚಂದ್ರಹೆಮ್ಮಾಡಿ, ದಾದಾಪೀರ್,ತಿಮ್ಮಪ್ಪ , ತಿಪ್ಪೇಸ್ವಾಮಿ, ಆನಂದ್, ಅನಿಲ್ ಕುಮಾರ್, 6 ಮಂದಿ ಜೈಲು ಹಕ್ಕಿಗಳಿಂದ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅದ್ಬುತವಾದ ಸ್ವಚ್ಚತಾ ಗೀತೆಗಳ ಧ್ವನಿಮುದ್ರಿಕೆ ಹೊರಬಂದಿದೆ.

ತಿಮ್ಮಪ್ಪ ಅವರಿಂದ ಕಸದ ಗಾಡಿ ಬಂತು ನೋಡಿ, ತಿಪ್ಪೇಸ್ವಾಮಿಯವರಿಂದ ಬನ್ನೀರಕ್ಕಾ ಬನ್ನೀರಣ್ಣಾ, ಆನಂದ್ ಅವರಿಂದ ಹಸಿಯಾಗಲೀ ಒಣ ಕಸವಾಗಲೀ,ಅನಿಲ್ ಕುಮಾರ್ ಅವರು ಕೇಳೋತಮ್ಮ ಕೇಳೋ ಅಣ್ಣ ಹಾಡುಗಳ ಮೂಲಕ ಸಾರ್ವಜನಿಕರಿಗೆ ಸಮರ್ಪಕವಾಗಿ ಕಸ ವಿಲೇವಾರಿ ಕುರಿತು ಅರಿವು ಮೂಡಿಸುವ ಕೆಲಸಕ್ಕೆ ಮಹಾನಗರಪಾಲಿಕೆ ಮುಂದಾಗಿದೆ.

ಇನ್ನೂ ಖೈದಿಗಳ ಗಾನಸುಧೆ ಕೇಳುಗರನ್ನ ಬೆರಗಾಗಿಸುವಂತಿದೆ. ಪ್ರಸಿದ್ದ ಸಂಗೀತಗಾರರಂತೆ, ಸಾಹಿತ್ಯ ರಚಿಸಿ ಹಾಡಿರುವುದು ಸಾರ್ವಜನಿಕರನ್ನ ಮನ ಮುಟ್ಟುವಂತಿದೆ.

ಇನ್ನು ಜಾಗೃತಿ ಗೀತೆಗಳ ಮೂಲಕ ಹಸಿ ಕಸ, ಒಣ ಕಸದ ಬೇರ್ಪಡಿಸುವಿಕೆ, ಕಸದಿಂದ ರಸ ಎಂಬಂತೆ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಬಯೋಗ್ಯಾಸ್ ಉತ್ಪಾದನೆ ಮೂಲಕ ಉದ್ಯೋಗ, ಆದಾಯಗಳಿಕೆ, ಸ್ವಚ್ಚ ಮತ್ತು ಸ್ವಸ್ಥ ಸಮಾಜ ನಿರ್ಮಾಣದ ಪರಿಕಲ್ಪನೆಯ ಸಂದೇಶಗಳನ್ನ ಸಾರಲಾಗಿದೆ.

ಒಟ್ಟಾರೆ ಜೈಲುಹಕ್ಕಿಗಳಿಂದಲೇ ಹಾಡಿಸಿ ಧ್ವನಿಮುದ್ರಿಕೆ ತಯಾರಿಸಿ ಅವರೊಳಗೆ ಅಡಗಿರುವ ಸುಪ್ತಕಲೆಗೆ ಬೆಲೆ ಸಿಗುವಂತೆ ಮಾಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ.

ಸ್ವಚ್ಚತಾವಾಹನಗಳಲ್ಲಿ ಭಿತ್ತರವಾಗುತ್ತಿರುವ ಜೈಲುಹಕ್ಕಿಗಳ ಹಾಡಿಗೆ ಸಾರ್ವಜನಿಕರಿಂದ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Follow Us

Leave a Reply

Your email address will not be published. Required fields are marked *

Back to top button