ChikkamagaluruDistrictKarnataka

ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಆರ್‌ಟಿಐ ಪ್ರಮುಖ ಸಾಧನ|ಮಾಹಿತಿ ನೀಡಲು ವಿಳಂಬ ಮಾಡಿದರೇ ಶಿಸ್ತು ಕ್ರಮ-ಡಾ.ಮಹೇಶ್ ವಾಳ್ವೇಕರ

ಮಾಹಿತಿ ಆಯೋಗ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶ, ತೀರ್ಪುಗಳನ್ನು ಅಧಿಕಾರಿಗಳು, ನೌಕರರು ತಿಳಿದುಕೊಂಡಲ್ಲಿ ಮಾಹಿತಿ, ದಾಖಲೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಮಹೇಶ್ ವಾಳ್ವೇಕರ ಹೇಳಿದರು.

ಚಿಕ್ಕಮಗಳೂರು: ಆರ್‌ಟಿಐ ಎಂಬ ಪದ ಜನಪ್ರಿಯತೆ ಗಳಿಸಿದ್ದರೂ ಆರ್‌ಟಿಐ ಕಾಯ್ದೆ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ಡಾ.ಮಹೇಶ್ ವಾಳ್ವೇಕರ ಅಭಿಪ್ರಾಯಪಟ್ಟಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಮೂಲಭೂತ ಹಕ್ಕಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಪಿ.ಡಿ.ಒ.ಗಳಿಗೆ ಶನಿವಾರದಂದು ಏರ್ಪಡಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ 2005 ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಹಿತಿ ಹಕ್ಕು ಕಾಯ್ದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಮೂಲಭೂತ ಹಕ್ಕಾಗಿದೆ.

ಕೇಂದ್ರ ಸರ್ಕಾರ 2005 ರ ಅಕ್ಟೋಬರ್ 12ರಂದು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯ್ದೆಯ ಉದ್ದೇಶ ಎಂದು ಡಾ.ಮಹೇಶ್ ವಾಳ್ವೇಕರ ಹೇಳಿದರು.

ಮಾಹಿತಿ ಆಯೋಗ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶ, ತೀರ್ಪುಗಳನ್ನು ಅಧಿಕಾರಿಗಳು, ನೌಕರರು ತಿಳಿದುಕೊಂಡಲ್ಲಿ ಮಾಹಿತಿ, ದಾಖಲೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಮಹೇಶ್ ವಾಳ್ವೇಕರ ಹೇಳಿದರು.

ಮಾಹಿತಿ ಕೋರಿದ ಅರ್ಜಿದಾರರಿಗೆ ವಿಳಂಬ ಮಾಡದೆ ನಿಗದಿತ ಸಮಯದೊಳಗೆ ಮಾಹಿತಿ ನೀಡಬೇಕು ಅಥವಾ ಸೂಕ್ತ ಹಿಂಬರಹ ನೀಡಬೇಕು ಎಂದು ತಿಳಿಸಿದರು.

ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿದಾರರಿಗೆ 30 ದಿನಗಳೊಳಗೆ ಮಾಹಿತಿ ನೀಡಬೇಕು ಎಂಬ ಕಾನೂನು ಇದೆ. ಅದರನ್ವಯ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಸ್ವೀಕರಿಸಿದ ಅರ್ಜಿಯು ಇಲಾಖೆಯ ವ್ಯಾಪ್ತಿಗೆ ಒಳಪಡದಿದ್ದರೆ ಸಂಬಂಧಪಟ್ಟವರಿಗೆ 5 ದಿನದೊಳಗೆ ವರ್ಗಾಯಿಸಬೇಕು ಎಂದು ಹೇಳಿದ ಅವರು, ಈ ಯಾವ ಪ್ರಕ್ರಿಯೆಯನ್ವು ಅನುಸರಿಸದೇ ವಿಳಂಬ, ನಿರ್ಲಕ್ಷ್ಯ ಮಾಡಿದ ಪಕ್ಷದಲ್ಲಿ ದಂಡನೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಮಹೇಶ್ ವಾಳ್ವೇಕರ ಎಚ್ಚರಿಕೆ ನೀಡಿದರು.

ಜನರ ಕೆಲಸಗಳು ಮುಕ್ತ ಹಾಗೂ ತ್ವರಿತವಾಗಿ ಆಗಲೆಂದು ಸಕಾಲ, ಮಾಹಿತಿ ಹಕ್ಕು ಕಾಯ್ದೆ, ಲೋಕಾಯುಕ್ತದಂತಹ ವ್ಯವಸ್ಥೆಗಳು ಸಕ್ರಿಯವಾಗಿದೆ ಎಂದರು.

ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು. ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಸಾರ್ವಜನಿಕ ದೂರುಗಳಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಡಾ.ಮಹೇಶ್ ವಾಳ್ವೇಕರ ಕಿವಿಮಾತು ಹೇಳಿದರು.

ಕಡತಗಳ ನಿರ್ವಹಣೆಯನ್ನು ವಿಷಯ ನಿರ್ವಾಹಕರು ಸಮರ್ಪಕವಾಗಿ ಮಾಡಬೇಕು. ವಿಳಂಬ ಧೋರಣೆ ಅನುಸರಿಸಬಾರದು ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಮಹೇಶ್ ವಾಳ್ವೇಕರ ಸೂಚ್ಯವಾಗಿ ತಿಳಿಸಿದರು.

ಸರ್ಕಾರದಿಂದ ಮಾಹಿತಿ ಹಾಗೂ ಕಾಮಗಾರಿ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದು ಎಂದು ತಿಳಿಸಿದ ಅವರು, ಸರ್ಕಾರ ಹೊರಡಿಸಿದ ಆದೇಶಗಳ ನಕಲನ್ನು ಕೇಳಿ ಪಡೆಯಲು ಅವಕಾಶವಿದೆ ಎಂದರು.

ಸರ್ಕಾರಿ ದಾಖಲೆ ಹಾಗೂ ಕಡತಗಳ ಪರಿಶೀಲನೆಗೂ ಅವಕಾಶವಿದ್ದು, ಸರ್ಕಾರದ ಯಾವುದೇ ಕಾರ್ಯವಾದರೂ ಆರ್‌ಟಿಐ ವ್ಯಾಪ್ತಿಗೆ ಒಳಪಡುತ್ತದೆ.

ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಅಧಿಕಾರ ನೀಡುವ, ಪಾರದರ್ಶಕ ಆಡಳಿತವನ್ನು ಉತ್ತೇಜಿಸುವ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವ ಒಂದು ಪ್ರಮುಖ ಸಾಧನ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಮಹೇಶ್ ವಾಳ್ವೇಕರ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಹರೀಶ್‌ಕುಮಾರ್ ಹಾಗೂ ಬದ್ರುದ್ದೀನ್ ಕೆ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Follow Us

Leave a Reply

Your email address will not be published. Required fields are marked *

Back to top button