ವಿಜಯನಗರ ಕಾಲದ ಗರುಡ ಶಿಲ್ಪ ಮಾಸ್ತಿಕಲ್ಲು ಪತ್ತೆ|ರಿಪ್ಪನಪೇಟೆಯ ಹರತಾಳು ಗ್ರಾಮದಲ್ಲಿ ಸಿಕ್ಕ ಮಾಸ್ತಿಕಲ್ಲು|ಶಾಸನದಲ್ಲಿದೆ ಮೂವರು ಪತ್ನಿಯರ ಸಹಗಮನದ ಮಾಹಿತಿ|
ಪತ್ತೆಯಾಗಿರುವ ಮಾಸ್ತಿಕಲ್ಲಿನಲ್ಲಿ ಬರೆದಿರುವ ಶಾಸನದ ವಿವರದಂತೆ, ಬೊಮ್ಮದೇವಗೌಡ ಎಂಬವರು ಮರಣ ಹೊಂದಿದ ನಂತರ, ಅವರ ಪತ್ನಿಯರಾದ ಗುರಾಕಾಯಿ, ಬೊಮ್ಮಾಯಿ ಮತ್ತು ಲಿಂಗಾಯಿ ಸಹಗಮನ ಮಾಡಿ ಮೃತರಾದ ಬಗ್ಗೆ ಉಲ್ಲೇಖಿಸಲಾಗಿದೆ.

ಶಿವಮೊಗ್ಗ: ವಿಜಯನಗರ ಕಾಲಘಟ್ಟಕ್ಕೆ ಸೇರಿದ ಅಪರೂಪದ ಗರುಡ ಶಿಲ್ಪ ಹೊಂದಿರುವ ಮಾಸ್ತಿಕಲ್ಲೊಂದು ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹರತಾಳು ಗ್ರಾಮದ ಶಶಿಧರ ಭಟ್ಟರ ತೋಟದಲ್ಲಿ ಪತ್ತೆಯಾಗಿದೆ. ಈ ಶಾಸನದ ಸಂಶೋಧನೆಯನ್ನು ಆದಿತ್ಯ ನಂಜವಳ್ಳಿ ಹಾಗೂ ಗಣೇಶ್ ಕೆ.ಎನ್. (ಕೋಣಂದೂರು) ಅವರು ನಡೆಸಿರುವ ಕುರಿತು ವರದಿಯಾಗಿದೆ.
ವಿಜಯನಗರ ಕಾಲಘಟ್ಟಕ್ಕೆ ಸೇರಿದ ಈ ಶಾಸನವು ಇತಿಹಾಸ ಹಾಗೂ ಪುರಾತತ್ವದ ದೃಷ್ಟಿಯಿಂದ ಮಹತ್ವ ಪಡೆದಿದೆ. ಮಾಸ್ತಿಕಲ್ಲು ಸುಮಾರು 32 ಇಂಚು ಉದ್ದ ಹಾಗೂ 15ವರೆ ಇಂಚು ಅಗಲ ಹೊಂದಿದ್ದು, ಮೇಲ್ಭಾಗದಲ್ಲಿ ಪೂರ್ಣ ಕುಂಭ ಶಿಲ್ಪವಿದೆ. ಮೊದಲ ಪಟ್ಟಿಕೆಯಲ್ಲಿ ಗರುಡ ಶಿಲ್ಪ ಕೆತ್ತಲಾಗಿದ್ದು, ಎರಡನೇ ಪಟ್ಟಿಯಲ್ಲಿ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರ ಚಿತ್ರಣ ಇದೆ.

ಒಂದು ಚಿತ್ರದಲ್ಲಿ ಎತ್ತಿದ ತೋಳು, ಕೈಪಟ್ಟಿ, ಎರಡು ಬಳೆ ಹಾಗೂ ಬೆರಳ ಮಧ್ಯೆ ನಿಂಬೆಹಣ್ಣು ಹಿಡಿದಿರುವ ಶಿಲ್ಪ ಕಾಣಸಿಗುತ್ತದೆ. ಇದಕ್ಕೆ ಕೆಳಭಾಗದಲ್ಲಿ 7 ಸಾಲಿನ ಶಾಸನವಿದ್ದು, ಅಂತಿಮ ಪಟ್ಟಿಕೆಯಲ್ಲಿ ಪಲ್ಲಕ್ಕಿಯೊಂದಿಗೆ ಸಾಗುತ್ತಿರುವ ಇಬ್ಬರು ಪುರುಷರ ಶಿಲ್ಪವಿದೆ.
ಸತಿಗಮನ ಮಾಡಿಕೊಂಡಿದ್ದ ವಿವರವುಳ್ಳ ಮಾಸ್ತಿಕಲ್ಲು|
ಈಗ ಪತ್ತೆಯಾಗಿರುವ ಮಾಸ್ತಿಕಲ್ಲಿನಲ್ಲಿ ಬರೆದಿರುವ ಶಾಸನದ ವಿವರದಂತೆ, ಬೊಮ್ಮದೇವಗೌಡ ಎಂಬವರು ಮರಣ ಹೊಂದಿದ ನಂತರ, ಅವರ ಪತ್ನಿಯರಾದ ಗುರಾಕಾಯಿ, ಬೊಮ್ಮಾಯಿ ಮತ್ತು ಲಿಂಗಾಯಿ ಸಹಗಮನ ಮಾಡಿ ಮೃತರಾದ ಬಗ್ಗೆ ಉಲ್ಲೇಖಿಸಲಾಗಿದೆ.
ಮಾಸ್ತಿಕಲ್ಲಿನಲ್ಲಿರುವ ಗರುಡ ಶಿಲ್ಪ|
ವೈಷ್ಣವ ಧರ್ಮಕ್ಕೆ ಸೇರಿದ ವ್ಯಕ್ತಿ|
ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕರಾದ ಡಾ. ಶೆಜೇಶ್ವರ ಅವರ ಪ್ರಕಾರ, ಮಾಸ್ತಿಕಲ್ಲಿನಲ್ಲಿರುವ ಗರುಡ ಶಿಲ್ಪವು ವೈಷ್ಣವ ಧರ್ಮಕ್ಕೆ ಸೇರಿದ ವ್ಯಕ್ತಿಯ ಮರಣವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಇದು ಅತ್ಯಂತ ಅಪರೂಪದ ಮಾಸ್ತಿಕಲ್ಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಶಾಸನ ಸಂಶೋಧಕರಾದ ರಮೇಶ್ ಬಿ. ಹಿರೇಜಂಬೂರು ಅವರು, ಮಾಸ್ತಿಕಲ್ಲಿನಲ್ಲಿ ಗರುಡ ಶಿಲ್ಪ ಇರುವ ಉದಾಹರಣೆಗಳು ತೀರಾ ವಿರಳವಾಗಿದ್ದು, ಈ ಭಾಗದಲ್ಲಿ ಕಂಡುಬಂದ ಮೊದಲ ಶಾಸನವಾಗಿರಬಹುದು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಮಾರು 25,000ಕ್ಕೂ ಹೆಚ್ಚು ಶಾಸನಗಳು ಕಂಡುಬಂದಿದ್ದರೂ, ಅಪರೂಪದ ಶಿಲ್ಪಗಳನ್ನು ಒಳಗೊಂಡ ಶಾಸನಗಳು ಹೊಸನಗರ ತಾಲೂಕಿನಲ್ಲಿ ಹೆಚ್ಚಾಗಿ ಪತ್ತೆಯಾಗಿವೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







