CrimeDistrictKarnatakaShivamogga

ಮಾರಕಾಸ್ತ್ರ ಸಮೇತ ದರೋಡೆಗೆ ನಿಂತಿದ್ದ ಆರೋಪಿಗಳು|ಪೊಲೀಸರ ದಾಳಿಯಿಂದ ತಪ್ಪಿದ್ದ ಭಾರಿ ಅನಾಹುತ|ಐವರು ಅಪರಾಧಿಗಳಿಗೆ 10 ವರ್ಷ ಕಠಿಣ ಶಿಕ್ಷೆ!

ಮರದ ದೊಣ್ಣೆ, ಚಾಕು, ಖಾರದ ಪುಡಿ ಮತ್ತು ಸ್ಟೀಲ್ ರಾಡುಗಳನ್ನು ಹಿಡಿದುಕೊಂಡು ಆರೋಪಿಗಳು ಸಂಚು ನಡೆಸಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು ಒಬ್ಬ ಆರೋಪಿ ಹೊರತಾಗಿ ಉಳಿದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಶಿವಮೊಗ್ಗ: ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ಅಡ್ಡಹಾಕಿ ಮಾರಕಾಸ್ತ್ರ ಸಮೇತ ದರೋಡೆಗೆ ಹೊಂಚು ಹಾಕಿದ್ದ ಆರೋಪಿತರ ಮೇಲಿನ ಆರೋಪ ಧೃಢಪಟ್ಟ ಹಿನ್ನೆಲೆಯಲ್ಲಿ ಐದು ಜನರಿಗೆ ಹತ್ತು ವರುಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಈ ಕುರಿತು ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಶನಿವಾರದಂದು (03-01-2026) ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಅಂದು 01-02-2019 ರಂದು ಭದ್ರಾವತಿ ತಾಲೂಕಿನ ಗೋಂದಿ ಕೈಮರದ ಬಳಿ ನಡೆಯಲಿದ್ದ ಭಾರಿ ದರೋಡೆ ಯತ್ನವನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ರಾತ್ರಿ ವೇಳೆ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ಅಡ್ಡ ಹಾಕಿ ದರೋಡೆ ನಡೆಸಲು ಮರದ ದೊಣ್ಣೆ, ಚಾಕು, ಖಾರದ ಪುಡಿ ಮತ್ತು ಸ್ಟೀಲ್ ರಾಡುಗಳನ್ನು ಹಿಡಿದುಕೊಂಡು ಆರೋಪಿಗಳು ಸಂಚು ನಡೆಸಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು ಒಬ್ಬ ಆರೋಪಿ ಹೊರತಾಗಿ ಉಳಿದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಪೊಲೀಸ್‌ ವಿಚಾರಣೆ ವೇಳೆ ಭಾರಿ ದೊಡ್ಡ ದರೋಡೆಗೆ ಆರೋಪಿಗಳು ಸಂಚು ಹೂಡಿ ಕುಳಿತಿದ್ದು ಬೆಳಕಿಗೆ ಬಂದಿತ್ತು.

ಬಳಿಕ ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 31/2019 ಕಲಂ 399, 402 ಐಪಿಸಿ ಕಾಯಿದೆ ಅನ್ವಯ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಆಗಿನ ತನಿಖಾಧಿಕಾರಿ ಭದ್ರಾವತಿ ಗ್ರಾಮಾಂತರ ಎಎಸ್ಐ ಹುಚ್ಚಪ್ಪ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ಚಾರ್ಜಶೀಟ್ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.

ಭಾರಿ ದರೋಡೆ ನಡೆಸಲು ಸಜ್ಜಾಗಿ ಪೊಲೀಸರಿಂದ ಬಂಧಿತರಾಗಿದ್ದ ಆರೋಪಿತರಲ್ಲಿ ಎ1) ಇಮ್ರಾನ್ ಷರೀಫ್, 33 ವರ್ಷ, ವಾಸ 1 ನೇ ತಿರುವು ಟಿಪ್ಪು ನಗರ ಶಿವಮೊಗ್ಗ. ಎ2) ಅಬೀದ್ ಖಾನ್, 35 ವರ್ಷ, ವಾಸ ಕಡೇಕಲ್, ಶಿವಮೊಗ್ಗ. ಎ3) ಮುಜಾಹಿದ್, 40 ವರ್ಷ, ವಾಸ ಕಡೇಕಲ್ಲು ಶಿವಮೊಗ್ಗ. ಎ4) ಹನೀಫುಲ್ಲಾ ಖಾನ್, 22 ವರ್ಷ, ವಾಸ 2 ನೇ ತಿರುವು, ಟಿಪ್ಪು ನಗರ ಶಿವಮೊಗ್ಗ. ಎ5) ನಸ್ರುಲ್ಲಾ, 29 ವರ್ಷ , ವಾಸ ಕಡೇಕಲ್ಲು ಶಿವಮೊಗ್ಗ ಇವರುಗಳಿಗೆ ಕಲಂ 399 ಐಪಿಸಿ ಕಾಯಿದೆ ಪ್ರಕಾರ 10 ವರ್ಷ ಕಠಿಣ ಸಜೆ ಮತ್ತು ತಲಾ 50,000 ರೂ ದಂಡ ತಪ್ಪಿದ್ದಲ್ಲಿ 5 ತಿಂಗಳು ಸಾದಾ ಸೆರೆವಾಸ, ಕಲಂ 402 ಐಪಿಸಿ ಕಾಯಿದೆಗೆ 7 ವರ್ಷ ಕಠಿಣ ಸಜೆ ಮತ್ತು ತಲಾ 30,000/- ರೂ ದಂಡವನ್ನು ಪಾವತಿಸಬೇಕು.

ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸಜೆಯನ್ನು ಅನುಭವಿಸತಕ್ಕದ್ದು ಎಂದು ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ತಿಳಿಸಿರುತ್ತದೆ.

Follow Us

Leave a Reply

Your email address will not be published. Required fields are marked *

Back to top button