Shivmogga:ಮಚ್ಚು ಕೊಟ್ಟಾಕೆಗೆ 3 ವರುಷ ಜೈಲು|ಕೈದಿಗೆ ಗಾಂಜಾ ಕೊಟ್ಟವರು ಅಂದರ್|ತಾಳಿ ಸರಗಳ್ಳನನ್ನು 24 ಗಂಟೆಯಲ್ಲಿ ಹೆಡೆಮುರಿ ಕಟ್ಟಿದ ಪೊಲೀಸರು|
ಆರೋಪಿ ಶೀಲಾ ಎಂಬಾಕೆ ಮನೆಯಿಂದ ಮಚ್ಚನ್ನು ತಂದುಕೊಟ್ಟಿದ್ದು, ನಾಗರಾಜ್ ಆ ಮಚ್ಚಿನಿಂದ ಬಸವರಾಜ್ ಅವರ ತಲೆ ಮತ್ತು ಮುಖಕ್ಕೆ ಬಲವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಭದ್ರಾವತಿ: ತಾಲೂಕಿನ ಹಿರಿಯೂರಿನಲ್ಲಿ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಮರಕ್ಕೆ ಕಟ್ಟಿ ಥಳಿಸಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದ ಒಬ್ಬ ಮಹಿಳೆ ಮತ್ತು ಪುರುಷ ಇಬ್ಬರು ಆರೋಪಿಗಳಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷಗಳ ಶಿಕ್ಷೆ ಮತ್ತು ತಲಾ 40 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
48 ವರ್ಷದ ನಾಗರಾಜ್ ಹಾಗೂ 32 ವರ್ಷದ ಶೀಲಾ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
2021ರಲ್ಲಿ ನಡೆದಿದ್ದ ಹಲ್ಲೆ ಮತ್ತು ಕೊಲೆಯತ್ನ|
ದೂರುದಾರರಾದ ಬಸವರಾಜ್ ಅವರು 30/112021 ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ, ಆರೋಪಿಗಳು ಭತ್ತದ ಕೊಯ್ಲು ಮಾಡುತ್ತಿದ್ದರು.
ಈ ವೇಳೆ ಹಳೆಯ ಜಮೀನು ವ್ಯಾಜ್ಯದ ಹಿನ್ನಲೆ ಆರೋಪಿ ನಾಗರಾಜ್ ಮತ್ತು ಚಿದಾನಂದ ಎಂಬುವವರು ಬಸವರಾಜ್ ಅವರ ಮೇಲೆ ದೊಣ್ಣೆಯಿಂದ ಥಳಿಸಿ ಅಲ್ಲಿದ್ದ ಅಡಿಕೆ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದರು.
ಈ ವೇಳೆ ಆರೋಪಿ ಶೀಲಾ ಎಂಬಾಕೆ ಮನೆಯಿಂದ ಮಚ್ಚನ್ನು ತಂದುಕೊಟ್ಟಿದ್ದು, ನಾಗರಾಜ್ ಆ ಮಚ್ಚಿನಿಂದ ಬಸವರಾಜ್ ಅವರ ತಲೆ ಮತ್ತು ಮುಖಕ್ಕೆ ಬಲವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತು ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ 307 (ಕೊಲೆ ಯತ್ನ) ಸೇರಿದಂತೆ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು.
ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶಿಲ್ಪಾ ನಾಯನೇಗಲಿ, ತನಿಖೆ ಪೂರೈಸಿ, ಆರೋಪಿತರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಕೈದಿಗೆ ಗಾಂಜಾ ಕೊಡಲು ಬಂದವರು ಅಂದರ್!
ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕೈದಿ ಭೇಟಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಗಾಂಜಾ ಕೊಡಲು ಯತ್ನಿಸಿದ ವೇಳೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಕಳೆದ ಶನಿವಾರದಂದು ಸಂಜೆ ವೇಳೆಗೆ ಸೈಯ್ಯದ್ ವಸೀಮ್ ಬಿನ್ ಸೈಯ್ಯದ್ ನೂರುಲ್ಲಾ ಎಂಬ ಕೈದಿಗೆ ಮೊಹ್ಮದ್ ಅಕ್ಬರ್ ತಂದೆ ನೂರುಲ್ಲಾ, ಅಜ್ಗರ್ ಅಲಿ ತಂದೆ ಮೊಹ್ಮದ್ ಮನ್ಸೂರ ಎಂಬುವವರು ನೀಡಲು ತಂದಿದ್ದ ಹಣ್ಣು ಮತ್ತು ಬಟ್ಟೆಗಳನ್ನು ತಪಾಸಣೆ ಮಾಡುವಾಗ ಪ್ಯಾಂಟುಗಳ ಸೊಂಟದ ಪಟ್ಟಿಗಳಲ್ಲಿ 6 ಗ್ರಾಂ ಗಾಂಜಾ ಪತ್ತೆಯಾಗಿದೆ.
ಸೂಗಾನೆ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ರಂಗನಾಥ.ಪಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಗಾಂಜಾ, ಎರಡು ಪ್ಯಾಂಟ್, ಹೀರೋ ಕಂಪನಿಯ ದ್ವಿ-ಚಕ್ರ ವಾಹನ, ಎರಡು ಮೊಬೈಲ್ಗಳು, ಹಾಗೂ 400/-ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 06/2026 ಕಲಂ 20(b)(ii)(A) NDPS ಕಾಯ್ದೆ & ಕಲಂ 42 ಕರ್ನಾಟಕ ಪ್ರಿಸನ್ (ಅಮೆಂಡ್ ಮೆಂಟ್) ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ.
ತಾಳಿ ಸರ ಕದ್ದು ಪರಾರಿಯಾದವ ಹರಿಹರದಲ್ಲಿ ಸೆರೆ!
ಭದ್ರಾವತಿ: ಚಾಕು ತೋರಿಸಿ ಮಹಿಳೆಯ ತಾಳಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ದುಷ್ಕರ್ಮಿಯೋರ್ವನನ್ನು ಕೇವಲ 24 ಗಂಟೆಯಲ್ಲಿಯೇ ಹೆಡೆಮುರಿ ಕಟ್ಟುವಲ್ಲಿ ನ್ಯೂ ಟೌನ್ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಸೋಮವಾರದಂದು ಬೆಳಿಗ್ಗೆ ಜೇಡಿಕಟ್ಟೆಯಲ್ಲಿರುವ ಮನೆಯ ಬಾಗಿಲನ್ನು ತೊಳೆಯಲು ಮನೆಯ ಪಕ್ಕದಲ್ಲಿರುವ ಡ್ರಮ್ ನಿಂದ ನೀರನ್ನು ತೆಗೆದುಕೊಳ್ಳಲು ಹೋದಾಗ ಯಾರೋ ಒಬ್ಬ ಅಸಾಮಿಯು ತನ್ನ ಕೈಯಲ್ಲಿ ಚಾಕುವನ್ನು ಹಿಡಿದುಕೊಂಡಿದ್ದನು.
ಬಳಿಕ ನಿನ್ನ ತಾಳಿಸರ ಕೊಡು ಇಲ್ಲದಿದ್ದರೆ ನಿನ್ನನ್ನು ಚಾಕು ಹಾಕಿ ಸಾಯಿಸುತ್ತೇನೆ ಅಂತಾ ಹೇಳಿ 50,000/-ರೂ ಬೆಲೆಯ ಬಂಗಾರದ ಎರಡು ತಾಳಿ ಮತ್ತು ಒಂದು ಲಕ್ಷ್ಮಿ ತಾಳಿ ಇರುವ ಮತ್ತು ಬಂಗಾರದ 04 ಗುಂಡುಗಳಿರುವ ಕರಿಮಣಿ ಸರವನ್ನು ಅವರಿಂದ ಬಲವಂತವಾಗಿ ಬಿಚ್ಚಿಸಿಕೊಂಡು ಹೋಗಿದ್ದಾರೆ ಎಂದು ಶ್ರೀಮತಿ ಭಾಗ್ಯ ಎಂಬುವವರು ದೂರನ್ನು ದಾಖಲಿಸಿದ್ದರು.
ಅದರಂತೇ ಗುನ್ನೆ ಸಂಖ್ಯೆ 02/2026 ಕಲಂ 308(2) BNS ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಯಿತು.
ಬಳಿಕ ಪ್ರಕರಣದ ತನಿಖೆಯ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ ನಿಖಿಲ್ ಬಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ, ರಮೇಶ್ ಮಾರ್ಗದರ್ಶನದಲ್ಲಿ ಭದ್ರಾವತಿ ಉಪವಿಭಾಗದ ಡಿ.ವೈ.ಎಸ್.ಪಿ ಪ್ರಕಾಶ್ ರಾಥೋಡ್ , ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀಮತಿ ನಾಗಮ್ಮ.ಕೆ ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ, ಟಿ. ರಮೇಶ್ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಶ್ರೀಮತಿ ಕವಿತಾ ಪಿ.ಎಸ್.ಐ, ಟಿ.ಪಿ.ಮಂಜಪ್ಪ ಎ.ಎಸ್.ಐ, ಆದರ್ಶ ಹೆಚ್ ಸಿ, ರವಿಕಿರಣ್, ಬಿ.ಪಿ, ಪ್ರಸನ್ನ , ಪ್ರಕಾಶ.ಜಿ.ಕೆ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಹರಿಹರದಲ್ಲಿ ಸಿಕ್ಕಿಬಿದ್ದ ತಾಳಿ ಚೋರ!

ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದ ಪೊಲೀಸರಿಗೆ ಹರಿಹರ ತಾಲೂಕಿನ ಕಡರನಾಯಕನಹಳ್ಳಿ ಪೋಸ್ಟ ಹೊಸಪಾಳ್ಯ ಗ್ರಾಮದಲ್ಲಿ ಅಡಗಿರುವುದು ಮಾಹಿತಿ ಸಿಕ್ಕ ಕೂಡಲೇ ಅಲ್ಲಿಗೆ ತೆರಳಿ ಆರೋಪಿ ಪ್ರತಾಪ್.ಬಿ ಎಂಬುವನನ್ನು ಬಂಧಿಸಲಾಗಿದೆ.
ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಒಂದು ಸಣ್ಣ ಚಾಕು. 75000/- ರೂ ಬೆಲೆಯ ಹೀರೋ ಸ್ಪೆಲೆಂಡರ್ ಪ್ಲಸ್ ಬೈಕ್ ಹಾಗು 75000/- ರೂ ಬೆಲೆಯ ಬಂಗಾರದ ಎರಡು ತಾಳಿ ಮತ್ತು ಒಂದು ಲಕ್ಷ್ಮಿ ತಾಳಿ ಇರುವ ಮತ್ತು ಬಂಗಾರದ 04 ಗುಂಡುಗಳಿರುವ ಕರಿಮಣಿ ಮಾಂಗಲ್ಯಸರ ಸೇರಿ ಒಟ್ಟು ಅಂದಾಜು ಮೌಲ್ಯ 1,50,000/- ರೂ ಗಳ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಭದ್ರಾವತಿ ಟೌನ ಪೊಲೀಸ್ ಠಾಣೆ ಪೊಲೀಸರಿಗೆ ಎಸ್.ಪಿ ಬಿ ನಿಖೀಲ್ ಅಭಿನಂದಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







