
ಬೆಂಗಳೂರು: ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗಳಿಗೆ ಗ್ರೇಡ್ ನೀಡುವ ಮೂಲಕ ಹೈಕೋರ್ಟ್‌ನಿಂದ ಮಂಗಳವಾರ ಎರಡನೇ ಬಾರಿ ಮುಖಭಂಗ ಅನುಭವಿಸಿದ್ದ ರಾಜ್ಯ ಸರ್ಕಾರವು, ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗುರುವಾರದಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲು ನಿರ್ಧರಿಸಿದೆ.

ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಸುದೀರ್ಘ ಸಭೆ ನಡೆಸಿದ ಬಳೀಕ, ಸಚಿವ ಮಧು ಬಂಗಾರಪ್ಪ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಮಾಡುವದಾಗಿ ಘೋಷಿಸಿದರು.
ಗ್ರೇಡ್ ಇಲ್ಲ.. ಅಂಕಗಳೇ ಫೈನಲ್!
ಹೈಕೋರ್ಟ ಎಕಸದಸ್ಯ ಪೀಠದ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ತೃತೀಯ ಭಾಷೆಗಳಿಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಲು ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು. ಈಗಾಗಲೇ ಎಲ್ಲ ವಿಷಯಗಳಿಗೆ ಅಂಕಗಳನ್ನೆ ನೀಡಿ ಮೌಲ್ಯಮಾಪನ ಮಾಡಲಾಗಿದೆ ಎಂದು ಹೇಳಿದರು.
ತೃತೀಯ ಭಾಷೆಯ ಅಂಕಗಳ ಸುಧಾರಣೆಗೆ ಎರಡನೇ ಬಾರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಅವಕಾಶ ನೀಡಲು ಚರ್ಚೆ ನಡೆಯುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಅಡ್ವೋಕೇಟ್ ಜನರಲ್ ಶಶೀಕಿರಣ ಅವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ಮೂಡಿದ ಮಂದಹಾಸ!
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರು ಆದಾಗಿನಿಂದ ಗ್ರೇಡ್ ವಿವಾದದಿಂದ ಕಂಗೆಟ್ಟಿದ್ದ ವಿದ್ಯಾರ್ಥಿಗಳಲ್ಲಿ ಗುರುವಾರದಂದು ಬರಲಿರುವ ಫಲಿತಾಂಶ ಸಾಕಷ್ಟು ಕುತೂಹಲವಂತೂ ಮೂಡಿಸಿದೆ.

ಮಂಗಳವಾರವಷ್ಟೇ ಹೈಕೋರ್ಟ್‌ನ ನ್ಯಾ.ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ಅಂಕಗಳನ್ನು ನೀಡಲು ಆದೇಶ ನೀಡಿದ್ದರಿಂದ ಸಹಜವಾಗಿ ತೃತೀಯ ಭಾಷೆಗಳ ಮೌಲ್ಯಮಾಪನ ನಡೆದು ಫಲಿತಾಂಶ ತಡವಾಗಿ ಪ್ರಕಟವಾಗಬಹುದು ಎಂಬ ನೀರಿಕ್ಷೆ ಇತ್ತು.
ಆದರೆ ರಾಜ್ಯ ಸರ್ಕಾರವು ದಿಢೀರ ಎಂದು ಫಲಿತಾಂಶ ಘೋಷಣೆ ಮಾಡಿರುವುದು ಹಾಗೂ ತೃತೀಯ ಭಾಷೆಗಳಿಗೆ ಅಂಕಗಳನ್ನೆ ನೀಡುವದಾಗಿ ಸ್ವತಃ ಸಚಿವ ಮಧು ಬಂಗಾರಪ್ಪ ಹೇಳಿರುವುದು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಫಲಿತಾಂಶದ ಮುನ್ಸೂಚನೆ ಕೊಟ್ಟಿದ್ದ ಮಧು ಬಂಗಾರಪ್ಪ!

ಫಲಿತಾಂಶದ ವಿಚಾರವಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ದಿನ ಕಾಯಿಸದೇ ಶೀಘ್ರದಲ್ಲೇ ಪ್ರಕಟಿಸುವದಾಗಿ ಸಚಿವ ಮಧು ಬಂಗಾರಪ್ಪ, ಬುಧವಾರದಂದು ಬೆಳಗ್ಗೆಯಷ್ಟೇ ಶಿವಮೊಗ್ಗದಲ್ಲಿ ಹೇಳಿದ್ದರು.
ವಿದ್ಯಾರ್ಥಿಗಳಿಗೆ ಯಾವುದೇ ಟೆನ್ಶನ್ ಕೊಡುವುದಿಲ್ಲ ಎಂದಿದ್ದ ಮಧು ಬಂಗಾರಪ್ಪ, ಸಿಎಂ ಜೊತೆ ಮಾತನಾಡಿ ಆದಷ್ಟು ಶೀಘ್ರವಾಗಿ ಫಲಿತಾಂಶ ಪ್ರಕಟಿಸುವ ಭರವಸೆ ನೀಡಿದ್ದರು.
ರಿಸಲ್ಟ್ ನೋಡುವುದು ಹೇಗೆ..?
ಎಸ್‌ಎಸ್‌ಎಲ್‌ಸಿ ಬೋರ್ಡ್‌ನ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in. ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಇನ್ನು ಮೊದಲ ಬಾರಿಗೆ ಡಿಜಿ ಲಾಕರ್‌ನಲ್ಲಿಯು ಸಹ ಫಲಿತಾಂಶ ವೀಕ್ಷಿಸಬಹುದಾಗಿದೆ ಮತ್ತು ಅಂಕಪಟ್ಟಿಯನ್ನು ಡೌನಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ಸೌಮ್ಯ ರೆಡ್ಡಿ
ಎಜ್ಯುಕೇಶನ್ ಬ್ಯುರೋ
ನ್ಯೂಇಂಡಿಯಾ ಕನ್ನಡ







