ಆಯನೂರು ಸಮುದಾಯ ಆರೋಗ್ಯ ಕೇಂದ್ರ ಮುಚ್ಚುವ ಆತಂಕ|ತಜ್ಞ ವೈದ್ಯರ ವರ್ಗಾವಣೆ ವಿರೋಧಿಸಿ ಬೀದಿಗಿಳಿದ ಗ್ರಾಮಸ್ಥರು
ರೈತರು, ಕೂಲಿಕಾರ್ಮಿಕರು ಬಡವರಿಗೆ ವರದಾನವಾಗಿರುವ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಅತ್ಯುತ್ತಮ ಮೂಲಸೌಕರ್ಯ ಹೊಂದಿದ ಆಯನೂರು ಸಮುದಾಯ ಆರೋಗ್ಯ ಕೇಂದ್ರವು ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿಗೆ ಭಾಜನವಾದ ಆಯನೂರು ಸಮುದಾಯ ಆರೋಗ್ಯ ಕೇಂದ್ರವು ಈಗ ಮುಚ್ಚುವ ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಬುಧವಾರದಂದು ಬೀದಿಗಳಿದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು , ಈ ಮೊದಲಿನಂತೇ ಮೂಲಸೌಲಭ್ಯ ನೀಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸಾವಿರಾರು ಸಂಖ್ಯೆಯ ಆಯನೂರು ಭಾಗದ ಗ್ರಾಮಸ್ಥರು ಇಲ್ಲಿಯ ರಂಗನಾಥಸ್ವಾಮಿ ದೇವಸ್ಥಾನದಿಂದ ಆಯನೂರು ಸಮುದಾಯ ಕೇಂದ್ರದವರೆಗೆ ಬೃಹತ್ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಂಗಾನಾಯ್ಕ ನೇತೃತ್ವದಲ್ಲಿ ಹಲವು ಸಂಘಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಟನೆ ಹಾಗೂ ಆಯನೂರು ಗ್ರಾಮಸ್ಥರು ಭಾಗವಹಿಸಿದ್ದರು.

ಸುತ್ತಮುತ್ತಲ 100 ಕ್ಕೂ ಹೆಚ್ಚು ಹಳ್ಳಿಯ ಗ್ರಾಮಸ್ಥರು ವೈದ್ಯಕೀಯ ಚಿಕಿತ್ಸೆಗಾಗಿ ಆಯನೂರು ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ.
ನೂರಾರು ಗ್ರಾಮ ಹತ್ತಾರು ತಾಲ್ಲೂಕು ಕೇಂದ್ರಗಳನ್ನ ಸಂಪರ್ಕಿಸುವ ಕೇಂದ್ರ ಸ್ಥಾನವಾಗಿದೆ. ಇಲ್ಲಿದ್ದ ತಜ್ಞ ವೈದ್ಯರನ್ನು ವರ್ಗಾವಣೆಗೊಳಿಸಿರುವುದರಿಂದ ತುರ್ತು ಚಿಕಿತ್ಸೆ ದೊರಕದೇ ಸಾವಿರಾರು ರೋಗಿಗಳು 40 ಕಿಲೋಮೀಟರ್ ದೂರದ ಜಿಲ್ಲಾಸ್ಪತ್ರೆಗೆ ಹೋಗಬೇಕಾಗಿದೆ.

ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ರೈತರು, ಕೂಲಿಕಾರ್ಮಿಕರು ಬಡವರಿಗೆ ವರದಾನವಾಗಿರುವ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಅತ್ಯುತ್ತಮ ಮೂಲಸೌಕರ್ಯ ಹೊಂದಿದ ಆಯನೂರು ಸಮುದಾಯ ಆರೋಗ್ಯ ಕೇಂದ್ರವು ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ 20 ರಿಂದ 30 ಸಾವಿರ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿದ ಕೀರ್ತಿ ಹೊಂದಿದ ಆಯನೂರು ಆಸ್ಪತ್ರೆ ಮುಚ್ಚುವ ಹುನ್ನಾರ ಸರ್ಕಾರದ್ದು ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
35 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಗೆ ಅನಾರೋಗ್ಯ!
35 ಹಾಸಿಗೆಗೆ ಮೇಲ್ದರ್ಜೆಗೇರಿಸಿದ ಸುಸಜ್ಜಿತ ಕಟ್ಟಡ ಮೂಲಭೂತ ಸೌಕರ್ಯ ಹೊಂದಿದ್ದರೂ ತಜ್ಞ ವೈದ್ಯರ ವರ್ಗಾವಣೆಯಿಂದಾಗಿ ಚಿಕಿತ್ಸೆಗೆ ಪರದಾಟ ತಪ್ಪಿಲ್ಲ.
ತಜ್ಞ ವೈದ್ಯರ ಕೊರತೆಯಿಂದಾಗಿ ಸೌಕರ್ಯಗಳಿದ್ದರೂ ಹೆರಿಗೆ ಪ್ರಮಾಣ ಇಳಿಮುಖವಾದ ಕಾರಣಕೊಟ್ಟು ಅವೈಜ್ಞಾನಿಕವಾಗಿ ತಜ್ಞ ವೈದ್ಯರ ವರ್ಗಾವಣೆ ಮಾಡಿ ವೈದ್ಯಕೀಯ ಸೇವೆ ಸಿಗದೇ ಗ್ರಾಮೀಣ ಜನರ ಆರೋಗ್ಯಕ್ಕೆ ಖಾತ್ರಿ ಇಲ್ಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳಿಗೆ ತುರ್ತು ಚಿಕಿತ್ಸೆ ಲಭ್ಯವಾಗದೇ ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬರುವುದು ವೆಚ್ಚದಾಯಕವಾಗಿದ್ದು ಸಾವಿರಾರು ರೋಗಿಗಳಿಗೆ ತೊಂದರೆಯಾಗಿದೆ. ಕೂಡಲೇ ವೈದ್ಯರ ವರ್ಗಾವಣೆ ರದ್ದು ಗೊಳಿಸಲು ಆಗ್ರಹಿಸಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.







