DistrictKarnatakaShivamoggaSpecial Stories

ಆಕಸ್ಮಿಕ ವಾಯು ದಾಳಿ ಎದುರಿಸಲು ಶಿವಮೊಗ್ಗದಲ್ಲಿ ತಾಲೀಮು| ಜೂನ್‌ 5 ರಂದು ನೆಹರೂ ಕ್ರೀಡಾಂಗಣದಲ್ಲಿ ಅಣುಕು ಪ್ರದರ್ಶನ|ಸೈರನ್‌ ಶಬ್ದಕ್ಕೆ ಗಾಬರಿ ಬೇಡ-ಅಪರ ಜಿಲ್ಲಾಧಿಕಾರಿ ಅಭಿಷೇಕ್

ಇದು ಕೇವಲ ಮುನ್ನೆಚ್ಚರಿಕೆ ಮತ್ತು ತರಬೇತಿಯ ಪ್ರದರ್ಶನವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ತಿಳಿಸಿದರು.

ಶಿವಮೊಗ್ಗ: ಆಕಸ್ಮಾತ್ ನಾವು ಇರುವ ಸ್ಥಳದಲ್ಲಿ ವೈಮಾನಿಕ ದಾಳಿ ನಡೆದರೇ ಏನು ಮಾಡಬೇಕು? ಎಂಬ ಆತಂಕ ಮೂಡುವುದು ಸಹಜ. ಅಂತಹ ತುರ್ತು ಸಂದರ್ಭದಲ್ಲಿ ಯಾವ ರೀತಿ ಪಾರಾಗಬೇಕು ಎಂಬ ಮಾಹಿತಿ ಮೊದಲೇ ನಮ್ಮಲ್ಲಿ ಇದ್ದಲ್ಲಿ ಸರಳವಾಗಿ ನಾವು ಪಾರಾಗಬಹುದಲ್ಲವೇ?

ಹೌದು. ಇಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಶಿವಮೊಗ್ಗ ನಗರದಲ್ಲಿ ಜೂ.5 ರಂದು ನೆಹರೂ ಕ್ರೀಡಾಂಗಣದಲ್ಲಿ ವೈಮಾನಿಕ ದಾಳಿ ಅಣಕು ಪ್ರದರ್ಶನ ಆಯೋಜಿಸಲಾಗಿದೆ.

ಗುರುವಾರದಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಕಸ್ಮಿಕ ದಾಳಿ ನಡೆದರೇ ಏನು ಮಾಡಬೇಕು ಎಂಬುದರ ಕುರಿತು ಅಣಕು ಪ್ರದರ್ಶನದ ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.

ಸಭೆ ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಭಿಷೇಕ್ ಮಾಹಿತಿ ನೀಡಿದರು. ಕೇಂದ್ರ ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ 2026 ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಇದು ಕೇವಲ ಮುನ್ನೆಚ್ಚರಿಕೆ ಮತ್ತು ತರಬೇತಿಯ ಪ್ರದರ್ಶನವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ತಿಳಿಸಿದರು.

ಆಕಸ್ಮಿಕ ವಾಯುದಾಳಿ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರನ್ನು ಹೇಗೆ ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು.

ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಹೇಗೆ ಒದಗಿಸಬೇಕು ಮತ್ತು ವಿವಿಧ ಇಲಾಖೆಗಳು ಹೇಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದು ಈ ತಾಲೀಮಿನ ಮುಖ್ಯ ಉದ್ದೇಶವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ಹೇಳಿದರು.

ಈ ಅಣಕು ಪ್ರದರ್ಶನವು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕದಳ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ನಾಗರೀಕ ರಕ್ಷಣಾ ಸ್ವಯಂ ಸೇವಕರು, ಗೃಹರಕ್ಷಕರು, ಎನ್‌ಸಿಸಿ ಹಾಗೂ ಮಹಾನಗರಪಾಲಿಕೆ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಯಲಿದೆ ಎಂದು ತಿಳಿಸಿದರು.

ಈ ಅಣಕು ಪ್ರದರ್ಶನದ ವೇಳೆ ವೈಮಾನಿಕ ದಾಳಿಯ ಮುನ್ಸೂಚನೆ ನೀಡುವ 2 ನಿಮಿಷಗಳ ಸೈರನ್ ಮೊಳಗಿಸಲಾಗುತ್ತಿದ್ದು, ಸಾರ್ವಜನಿಕರು ಇದರಿಂದ ಗಾಬರಿಯಾಗಬಾರದೆಂದು ಎಂದು ಹೇಳಿದರು.

ಇದು ಕೇವಲ ತರಬೇತಿಯ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಮ್ಮಿಕೊಳ್ಳಲಾಗಿದೆ ಎಂದರು.

video courtesy : pro epic gamer

ತಾಲೀಮಿನ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳ ಸಂಚಾರ ಇರಲಿದ್ದು, ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುವುದು, ಹುಡುಕಾಟ ಮತ್ತು ರಕ್ಷಣೆ ಹಾಗೂ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಸಾಗಿಸುವ ಪ್ರದರ್ಶನವಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ಹೇಳಿದರು.

ಶಿವಮೊಗ್ಗದಲ್ಲಿ ನಡೆಯಲಿರುವ ಈ ಅಣುಕು ಪ್ರದರ್ಶನವು ಜೂ.5 ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಸಾರ್ವಜನಿಕರು ಸಹ ಆಗಮಿಸಿ ವೀಕ್ಷಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಹೆಚ್ಚುವರಿ ಎಸ್ಪಿ ಕಾರಿಯಪ್ಪ. ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ಸಂಬಂಧಿಸಿದವರು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಅಣಕು ಪ್ರದರ್ಶನ ವೇಳೆ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಈ ಅಣಕು ಪ್ರದರ್ಶನದ ಸಂದರ್ಭದಲ್ಲಿ ವೈಮಾನಿಕ ದಾಳಿ, ದಾಳಿಯಿಂದ ಹಾನಿಗೊಳಗಾದ ಗುಡಿಸಲು, ರಕ್ಷಣೆಗೆ ಅಗತ್ಯವಾದ ಅಗ್ನಿ ಶಾಮಕ ದಳ, ರಕ್ಷಣಾ ಪಡೆ, ಆಂಬುಲೆನ್ಸ್ , ಆಸ್ಪತ್ರೆ, ಕೇಂದ್ರ ಮಾಹಿತಿ ಕೇಂದ್ರ ಹೀಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಈ ಅಣಕು ಪ್ರದರ್ಶನದ ಸಂಪೂರ್ಣ ಚಿತ್ರಣವನ್ನು ಡ್ರೋನ್ ವಿಡಿಯೋಕರಣ ಮೂಲಕ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಡಿಹೆಚ್‌ಓ ಡಾ. ನಟರಾಜ್ ಕೆ.ಎಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಗೀತಾ, ಡಿಎಸ್‌ಪಿ ಡಿ.ಆರ್.ದಿಲೀಪ್‌ಕುಮಾರ್, ಅಗ್ನಿಶಾಮಕ ಇಲಾಖೆ, ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ, ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow Us

Leave a Reply

Your email address will not be published. Required fields are marked *

Back to top button