ವೃದ್ದೆಯ ಸಂಕಷ್ಟಕ್ಕೆ ಮಿಡಿದ ಆಗುಂಬೆ ಪೊಲೀಸ್|ಹೊಸಮನೆ ನಿರ್ಮಿಸಿಕೊಟ್ಟ ಸೂಪರ್ COPS|ಲಯನ್ಸ್ ಕುಟೀರ ಹಸ್ತಾಂತರಿಸಿದ-ಎಸ್ಪಿ ನಿಖಿಲ್
ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ಮುಂದಾಳತ್ವ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಆಗುಂಬೆ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವೃದ್ಧೆಗೆ ಹೊಸ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುಂದಾದರು.

ಶಿವಮೊಗ್ಗ: ಪೊಲೀಸರಂದ್ರೆ ಕೇವಲ ಭಯವಲ್ಲ ಅಭಯ.. ಕಳಕಳಿ ಎಂಬುದನ್ನ ಸಾಬೀತುಪಡಿಸುವಂತ ಘಟನೆ ತೀರ್ಥಹಳ್ಳಿಯ ಆಗುಂಬೆಯಲ್ಲಿ ನಡೆದಿದೆ.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೃದ್ಧ ಮಹಿಳೆಯೊಬ್ಬರಿಗೆ ಹೊಸ ಸೂರು ನಿರ್ಮಿಸಿಕೊಡುವ ಮೂಲಕ ಆಗುಂಬೆ ಪೊಲೀಸ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಕಳಕಳಿ ಮೆರೆದಿದೆ.

ಮೂಲ ಸೌಲಭ್ಯಗಳಿಂದ ವಂಚಿತರಾಗಿ ಆಗುಂಬೆಯಲ್ಲಿ ವೃದ್ದೆಯೊಬ್ಬರು ಪ್ಲಾಸ್ಟಿಕ್ ಹೊದಿಕೆಯ ಮುರುಕಲು ಮನೆಯಲ್ಲಿ ಜೀವನ ನಡೆಸುತ್ತಿರುವುದನ್ನು ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮದ ವೇಳೆ ಗಮನಿಸಿದ್ದರು.
ವೃದ್ದೆ ಮನೆ ಬಳಿ ಆನೆ ಸಂಚಾರ|
ಸುರಕ್ಷತೆ ಒತ್ತು ನೀಡಿ ಸೂರು ನಿರ್ಮಾಣ|
ಆಗುಂಬೆ ವ್ಯಾಪ್ತಿಯಲ್ಲಿ ಸಂಚರಿಸಿದ್ದ ಒಂಟಿ ಸಲಗವು ವೃದ್ಧೆಯ ಮನೆಯ ಸಮೀಪವೇ ಹಾದು ಹೋಗಿದ್ದು ಆತಂಕ ಸೃಷ್ಠಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಸುರಕ್ಷತೆಯ ದೃಷ್ಟಿಯಿಂದಲೂ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು.

ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ಮುಂದಾಳತ್ವ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಆಗುಂಬೆ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವೃದ್ಧೆಗೆ ಹೊಸ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುಂದಾದರು.

ನಿರ್ಮಾಣಗೊಂಡ ಮನೆಗೆ ಲಯನ್ಸ್ ಕುಟೀರ ಎಂದು ನಾಮಕರಣ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಅವರು ವೃದ್ಧ ಮಹಿಳೆಗೆ ಭಾನುವಾರ ಮನೆ ಹಸ್ತಾಂತರಿಸಿದರು.

ಪೊಲೀಸರೇ ಸೂರು ನಿರ್ಮಿಸಿದ ಮಾನವೀಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







