ಎಸ್ಟಿ ಸಮುದಾಯದ ಹಣ ದುರ್ಬಳಕೆ ಆರೋಪ|ಶಾರದಾ ಪೂರ್ಯಾನಾಯಕ್ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ|ಮೀಸಲಿಟ್ಟ ಹಣ ಲೂಟಿ-ಕೆ.ಬಿ.ಪ್ರಸನ್ನಕುಮಾರ್
ಜೆಡಿಎಸ್ ಗ್ರಾಮಾಂತರ ಶಾಸಕಿ ಶಾರಾದಾಪೂರ್ಯಾನಾಯಕ್ ನೇತೃತ್ವದಲ್ಲಿ ನೂರಾರು ಎಸ್ಸಿ, ಎಸ್ಟಿ ಸಮುದಾಯದ ಮುಖಂಡರು, ಕಾರ್ಯಕರ್ತರು ನೆಹರೂ ರಸ್ತೆಯ ಜೆಡಿಎಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಎಸ್ಟಿ ಘಟಕದ ವತಿಯಿಂದ ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಯಿತು.
ಜೆಡಿಎಸ್ ಗ್ರಾಮಾಂತರ ಶಾಸಕಿ ಶಾರಾದಾ ಪೂರ್ಯಾನಾಯಕ್ ನೇತೃತ್ವದಲ್ಲಿ ನೂರಾರು ಎಸ್ಟಿ ಸಮುದಾಯದ ಮುಖಂಡರು, ಕಾರ್ಯಕರ್ತರು ನೆಹರೂ ರಸ್ತೆಯ ಜೆಡಿಎಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಎಸ್ಟಿ ಸಮುದಾಯದ ಹಣವನ್ನು ಸರ್ಕಾರ ಬೇರೆ ಉದ್ದೇಶಕ್ಕೆ ಬಳಸಬಾರದು, ಎಸ್ಟಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ವಿ ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು.
ಶಾಸಕಿ ಶಾರಾದಾ ಪೂರ್ಯಾನಾಯಕ್ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ಹಗರಣ ಜಗಜ್ಜಾಹೀರಾಗಿದೆ. ಈಗಾಗಲೇ ಸಿಬಿಐ ತನಿಖೆ ನಡೆಯುತ್ತಿದೆ. ಅದರೆ ಲೂಟಿಯಾದ ಹಣ ವಾಪಾಸ್ಸಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಜಿಲ್ಲೆಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕುರಿತು ಸಮರ್ಪಕವಾಗಿ ನ್ಯಾಯ ಸಿಕ್ಕಿಲ್ಲ. ಎಸ್ಟಿ ಸಮಾಜದ ಸಮುದಾಯ ಭವನಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಕೆಬಿ ಪ್ರಸನ್ನಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಎಸ್ಸಿ ಎಸ್ಟಿ ಯೋಜನೆಗಳಿಗೆ ಮೀಸಲಿಟ್ಟ ಹಣ ಲೂಟಿಯಾಗಿದೆ ಎಂದು ಆರೋಪಿಸಿದರು.
ಎಸ್ಟಿ ಸಮುದಾಯಗಳ ಹಾಸ್ಟೆಲ್, ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ, ಶಿಕ್ಷಣ, ಸಮುದಾಯ ಭವನಗಳಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಎಂದರು.
ಈ ಅನ್ಯಾಯ ಖಂಡಿಸಿ ಎಸ್ಟಿ ಸಮುದಾಯ ಬೀದಿಗಿಳಿಯಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು!
* ವಾಲ್ಮೀಕಿ ನಿಗಮಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನ ನೇಮಿಸಿ ಹೆಚ್ಚಿನ ಅನುದಾನ ಒದಗಿಸಬೇಕು.
*ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕು
*ಉಚಿತ ಲ್ಯಾಪ್ಟಾಪ್ ಯೋಜನೆ ಮುಂದುವರಿಸಬೇಕು
* ಎಸ್ಟಿ ಹಾಸ್ಟೆಲ್ ಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್ಟಿ ಘಟಕದ ಅಧ್ಯಕ್ಷ ಹನುಮಂತಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಶಾರದಾ ಅಪ್ಪಾಜಿ ಜೆಡಿಎಸ್ ಮುಖಂಡರಾದ ದಾದಾಪೀರ್ ಕಾಂತರಾಜ್ ಮಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







