ಶಿವಮೊಗ್ಗ: ಭಾರಿ ಮಳೆಗೆ ಗ್ರಾಮಾಂತರ ಪ್ರದೇಶ ತತ್ತರ|ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ.ರಾಘವೇಂದ್ರ ದೌಡು|ಅನ್ನದಾತರೊಂದಿಗೆ ಮಾತುಕತೆ, ತುರ್ತು ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ
ಭಾರಿ ಮಳೆಯ ಅವಾಂತರಕ್ಕೆ ಸಿಲುಕಿ ಮೃತಪಟ್ಟ ರೈತನ ಮನೆಗೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಅನ್ನದಾತನ ಸಾವು ತಮಗೆ ಅತ್ಯಂತ ನೋವು ತಂದಿದೆ ಎಂದು ಹೇಳಿದರು.

ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆ, ಬಿರುಗಾಳಿಗೆ ಹಾನಿಯಾದ ಸಂತ್ರಸ್ತರಿಗೆ ತಕ್ಷಣ ತುರ್ತು ಪರಿಹಾರ ಒದಗಿಸಬೇಕು ಹಾಗೂ ರಸ್ತೆಗೆ ಬಿದ್ದ ವಿದ್ಯುತ್ ಕಂಬ ತೆರೆವುಗೊಳಿಸಿ ಕಡಿತಗೊಂಡ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವಂತೆ ಸಂಸದ ಬಿವೈರಾಘವೇಂದ್ರ ಆಗ್ರಹಿಸಿದ್ದಾರೆ.

ಈ ಕುರಿತು ಸೋಮವಾರದಂದು ಉಸ್ತುವಾರಿ ಜಿಲ್ಲಾಧಿಕಾರಿ ಹೇಮಂತ್ ಅವರನ್ನು ಭೇಟಿಯಾದ ಸಂಸದ ಬಿ.ವೈ.ರಾಘವೇಂದ್ರ ಅವರು, ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲಿ ಭಾನುವಾರದಂದು ಸುರಿದ ಭಾರೀ ಮಳೆ ಬಿರುಗಾಳಿ ಜನರ ಜೀವನ ಬೀದಿಗೆ ಬಿದ್ದಿದ್ದು ಲೆಕ್ಕವಿಲ್ಲದಷ್ಟು ಹಾನಿಯಾಗಿದೆ ಎಂದು ತಿಳಿಸಿದರು.

ಇನ್ನು ಕಳೆದ ವರ್ಷ ಹವಾಮಾನ ವೈಪರೀತ್ಯಗಳಿಂದ ಉಂಟಾದ ಬೆಳೆ ಹಾನಿ ವಿಮೆ ಪರಿಹಾರದಲ್ಲಿ ಇನ್ನೂ ಶೇಕಡಾ 75 ರಷ್ಟು ಪರಿಹಾರ ಬಾಕಿ ಇದೆ.
ಪ್ರಸಕ್ತ ಸಾಲಿನ ಬೆಳೆ ಹಾನಿ ವಿಮೆಯಲ್ಲಿ ಅನ್ಯಾಯ ಸರಿಪಡಿಸಿ ಹಿಂದಿನ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ರಾಘವೇಂದ್ರ ಇದೇ ವೇಳೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಕೆ. ಜಗದೀಶ್ ,ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್, ಡಾ.ಧನಂಜಯ್ ಸರ್ಜಿ, ಮಾಜಿ ಶಾಸಕ ಅಶೋಕ್ ನಾಯ್ಕ್, ಮಾಲತೇಶ್, ಸಂತೋಷ್ ಬಳ್ಳೆಕೆರೆ , ಸುರೇಖಾ ಮುರುಳಿಧರ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಉಪಸ್ಥಿತರಿದ್ದರು.
ಹಾನಿಗೀಡಾದ ಪ್ರದೇಶಕ್ಕೆ ಸಂಸದರ ದೌಡು|
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದಾಗಿ ರೈತರ ಬೆಳೆ ಹಾನಿ, ಮನೆಗಳ ಮೇಲ್ಛಾವಣಿ ಕುಸಿತ ಹಾಗೂ ವಿದ್ಯುತ್ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳು ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರದಂದು ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು.


ಭಾರಿ ಮಳೆಯ ಅವಾಂತರಕ್ಕೆ ಸಿಲುಕಿ ಮೃತಪಟ್ಟ ರೈತನ ಮನೆಗೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಅನ್ನದಾತನ ಸಾವು ತಮಗೆ ಅತ್ಯಂತ ನೋವು ತಂದಿದೆ ಎಂದು ಹೇಳಿದರು. ಮೃತ ರೈತನ ಕುಟುಂಬ ಸದಸ್ಯರಿಗೆ ಅವರು ಸಾಂತ್ವನ ಹೇಳಿದರು.
ಮಣ್ಣು ಪಾಲಾದ ಬೆಳೆಗಳು|
ಗರಿಷ್ಠ ಪರಿಹಾರಕ್ಕೆ ಸೂಚನೆ|
ಹಾರತೊಳಲು, ವಡ್ರಟ್ಟಿ, ಮಲ್ಲಾಪುರ, ಮಲ್ಲಿಗೆನಹಳ್ಳಿ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಬೆಳೆಗಳು ಮಣ್ಣು ಪಾಲಾಗಿರುವುದು ಮತ್ತು ಮನೆಗಳು ಹಾನಿಗೊಳಗಾಗಿರುವುದನ್ನು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲನೆ ನಡೆಸಿದರು.


ಮಳೆಯಿಂದ ಹಾನಿಗೊಳಗಾದ ಬೆಳೆ ಮತ್ತು ಮನೆಗಳ ಬಗ್ಗೆ ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ, ಸಂತ್ರಸ್ತರಿಗೆ ವಿಳಂಬವಿಲ್ಲದೆ ಗರಿಷ್ಠ ಪರಿಹಾರ ದೊರಕಿಸಿಕೊಡಬೇಕು ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಮತ್ತು ರೈತರು ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸಲು ಮೆಸ್ಕಾಂ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಬೇಕು.
ರಸ್ತೆಗಳಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದರು.

ನಿಮ್ಮೊಂದಿಗೆ ನಾವಿದ್ದೇವೆ|
ಅನ್ನದಾತರಿಗೆ ಸಂಸದರ ಭರವಸೆ|


ಭಾರಿ ಮಳೆಯಿಂದ ಹಾನಿಗೀಡಾದ ರೈತರೊಂದಿಗೆ ಮಾತನಾಡುವ ವೇಳೆ, ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಜೊತೆಗಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ಆದಷ್ಟು ಬೇಗ ತುರ್ತು ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ರೈತರಿಗೆ ವಾಗ್ದಾನ ಮಾಡಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







