DistrictKarnatakaShivamogga

ಸಿಎಂ ಮುಂದೆ ಜಿಲ್ಲೆಯ ಬೇಡಿಕೆ ಗುಚ್ಛ ಬಿಚ್ಚಿಟ್ಟ ಬಿ.ವೈ. ರಾಘವೇಂದ್ರ|ಸಂಚಾರಿ ಪೀಠ ಅಗತ್ಯತೆ, ಬೆಳೆ ವಿಮಾ ಯೋಜನೆ ಪ್ರಸ್ತಾಪ| ಸಿಎಂ ಮನವರಿಕೆ ಮಾಡುವಲ್ಲಿ ಸಫಲರಾದ ಸಂಸದ

ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆ ಆಗುವವರೆಗೆ, ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಹೈಕೋರ್ಟ್‌ನ ಪ್ರಧಾನ ಪೀಠದ ವ್ಯಾಪ್ತಿಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸಿಎಂ ಅವರಿಗೆ ಆಗ್ರಹಿಸಿದ ಬೇಡಿಕೆಯಲ್ಲಿ ಇದು ಪ್ರಮುಖವಾಗಿತ್ತು.

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಶಾಸಕರು ಮತ್ತು ಕಾನೂನು ಪ್ರತಿನಿಧಿಗಳನ್ನೊಳಗೊಂಡ ನಿಯೋಗವು ಮಂಗಳವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.

ಶಿವಮೊಗ್ಗ ಜಿಲ್ಲೆಯಾದ್ಯಂತ ಸಾವಿರಾರು ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಬೆಳೆ ವಿಮಾ ಪರಿಹಾರ ವೈಪರೀತ್ಯಗಳನ್ನು ಪರಿಹರಿಸಿ, ಸರಿಪಡಿಸಲು ಸಂಸದರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠದ ಬೇಡಿಕೆಗೆ ವ್ಯಕ್ತವಾಗುತ್ತಿರುವ ಜನಾಗ್ರಹ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಶಿವಮೊಗ್ಗದ ಭೌಗೋಳಿಕ ಅನುಕೂಲಗಳು, ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಶೈಕ್ಷಣಿಕ, ವಾಣಿಜ್ಯ ಮತ್ತು ಸಾಂಸ್ಥಿಕ ಕೇಂದ್ರವಾಗಿ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಸಂಸದ ಬಿ.ವೈ.ರಾಘವೇಂದ್ರ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ವಿವರಿಸಿದರು.

ಜಿಲ್ಲೆಗೆ ಮಾತ್ರವಲ್ಲ, ಮಧ್ಯ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಸೂಕ್ತವಾದ ಸ್ಥಳವಾಗಿದೆ ಎಂಬುದನ್ನ ವಿವರವಾಗಿ ಮನವರಿಕೆ ಮಾಡಿಕೊಟ್ಟರು.

ಮಲೆನಾಡು ಮತ್ತು ಮಧ್ಯ ಕರ್ನಾಟಕದಾದ್ಯಂತ ಕಾನೂನು ಸಮುದಾಯ, ವಕೀಲರ ಸಂಘಗಳು, ನಾಗರಿಕ ಸಂಸ್ಥೆಗಳು ಮತ್ತು ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗಳನ್ನು ಮತ್ತು ಅದಕ್ಕೆ ಸಕಾರಣಗಳೊಂದಿಗೆ ಮುಖ್ಯಮಂತ್ರಿಗಳಿಗೆ ವಿವರವಾದ ಪತ್ರದೊಂದಿಗೆ ವಿವರಿಸಿದ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆ ಆಗುವವರೆಗೆ, ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಹೈಕೋರ್ಟ್‌ನ ಪ್ರಧಾನ ಪೀಠದ ವ್ಯಾಪ್ತಿಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸಿಎಂ ಅವರಿಗೆ ಆಗ್ರಹಿಸಿದ ಬೇಡಿಕೆಯಲ್ಲಿ ಇದು ಪ್ರಮುಖವಾಗಿತ್ತು.

ಪಶ್ಚಿಮ ಘಟ್ಟಗಳ ಕಠಿಣ ಭೂಪ್ರದೇಶ ಮತ್ತು ಮಳೆಗಾಲದಲ್ಲಿ ಪದೇ ಪದೇ ಸಂಭವಿಸುವ ನೈಸರ್ಗಿಕ ಅಡಚಣೆಗಳಿಂದಾಗಿ ಶಿವಮೊಗ್ಗವನ್ನು ಪ್ರಸ್ತಾವಿತ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸುವುದು ಬೇಡ ಎಂದು ಮನವಿ ಮಾಡಿದರು.

ಹಾಗೆ ಮಾಡುವುದರಿಂದ ದಾವೆದಾರರು, ವಕೀಲರು ಮತ್ತು ಸಾರ್ವಜನಿಕರ ಮೇಲೆ ಅನಗತ್ಯವಾಗಿ ಹೆಚ್ಚಿನ ಹೊರೆ ಹೊರೆಸಿದಂತಾಗುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರ ಗಮನಸೆಳೆದರು.

2024-25ನೇ ಸಾಲಿನ ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ರೈತರಿಗೆ ನೀಡಲಾದ ಪರಿಹಾರದಲ್ಲಿನ ಗಂಭೀರ ವ್ಯತ್ಯಾಸಗಳ ವಿಷಯವನ್ನು ಸಂಸದ ಬಿ.ವೈ.ರಾಘವೇಂದ್ರ ಸಿಎಂ ಗಮನಕ್ಕೆ ತಂದರು.

ಅವೈಜ್ಞಾನಿಕ ಮೇಲ್ವಿಚಾರಣೆ ಮತ್ತು ಟೆಲಿಮೆಟ್ರಿಕ್ ಮಳೆ ಮಾಪಕಗಳು ಮತ್ತು ಟೆಲಿಮೆಟ್ರಿಕ್ ಹವಾಮಾನ ಕೇಂದ್ರಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಪರಿಹಾರದ ಮೊತ್ತದಲ್ಲಿ ಗಮನಾರ್ಹ ವ್ಯತ್ಯಾಸಗಳು ಉಂಟಾಗಿವೆ.

ಒಂದೇ ರೀತಿಯ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿದ ನೆರೆಯ ಹಳ್ಳಿಗಳ ರೈತರು ಪಡೆದ ಬೆಳೆ ನಷ್ಟಗಳ ವಿಭಿನ್ನ ಪಾವತಿಗಳ ಕುರಿತು ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಮನದಟ್ಟು ಮಾಡಿದರು. ತಿಳಿಸಿಕೊಟ್ಟರು.

ಈ ಅಸಮಾನತೆಗಳು ಶಿವಮೊಗ್ಗ ಜಿಲ್ಲೆಯ ರೈತರಲ್ಲಿ ಉಂಟು ಮಾಡಿರುವ ವ್ಯಾಪಕ ಅಸಮಾಧಾನವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವ ಸಂಸದರು,

ಪರಿಹಾರದಲ್ಲಿ ಆಗಿರುವ ವೈಪರೀತ್ಯಗಳನ್ನು ಸರಿಪಡಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಸಲ್ಲಿಸಲಾಗಿದ್ದ ವಿವರವಾದ ಪ್ರಸ್ತಾವನೆಯು ಹಲವಾರು ತಿಂಗಳುಗಳಿಂದ ರಾಜ್ಯ ಸರ್ಕಾರದೊಂದಿಗೆ ಬಾಕಿ ಇರುವ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಕೋರಿದ ಸಂಸದ ರಾಘವೇಂದ್ರ, ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಯ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು.

ಪರಿಹಾರ ಮೌಲ್ಯಮಾಪನದ ಮೇಲೆ ಪರಿಣಾಮ ಬೀರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಮತ್ತು ಬಾಧಿತ ರೈತರು ಮತ್ತಷ್ಟು ವಿಳಂಬವಿಲ್ಲದೆ ನ್ಯಾಯಯುತ ಪರಿಹಾರ ಪಡೆಯುವಂತೆ ನೋಡಿಕೊಳ್ಳಬೇಕೆಂದು ಸಿಎಂ ಅವರಿಗೆ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.

ಬಿ.ವೈ.ರಾಘವೇಂದ್ರ ಅವರ ನೇತೃತ್ವದ ನಿಯೋಗದಲ್ಲಿ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಮತ್ತು ಅರುಣ್ ಡಿ.ಎಸ್., ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಹಿರಿಯ ವಕೀಲ ಕೆ.ಪಿ.ಶ್ರೀಪಾಲ್‌ ಹಾಗೂ ಸಾಗರ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಗಿರೀಶ್ ಗೌಡ; ಶಿಕಾರಿಪುರ ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಉಮೇಶ್ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಹಿರಿಯ ವಕೀಲರು ಮತ್ತು ವಕೀಲರ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button