ಗೋರಕ್ಷಣೆಗೆ ತೆರಳಿದ್ದವರ ಮೇಲೆ ಹಲ್ಲೆ ಪ್ರಕರಣ|ಶಿಕಾರಿಪುರ ಪಟ್ಟಣ ಬಂದ್ ಬಹುತೇಕ ಯಶಸ್ವಿ|ಆರೋಪಿಗಳ ಬಂಧನಕ್ಕೆ ಸಂಸದ ರಾಘವೇಂದ್ರ ಒತ್ತಾಯ
ಗೋವುಗಳಿದ್ದ ವಾಹನ ಶಿಕಾರಿಪುರದ ಸಾಲೂರು ಬಳಿ ಇರುವಾಗ ಗೋಕಳ್ಳರ ಮತ್ತೊಂದು ತಂಡ ಗೋರಕ್ಷಣೆಗೆ ಮುಂದಾಗಿದ್ದ ಕಾರ್ಯಕರ್ತರ ವಾಹನಕ್ಕೆ ಡಿಕ್ಕಿಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಶಿಕಾರಿಪುರ/ಶಿವಮೊಗ್ಗ: ಗೋರಕ್ಷಣೆಗೆ ತೆರಳಿದ್ದ ವೇಳೆ ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಬುಧವಾರ ಕರೆ ನೀಡಲಾಗಿದ್ದ ಶಿಕಾರಿಪುರ ಬಂದ್ ಬಹುತೇಕ ಯಶಸ್ವಿಯಾಗಿದೆ.
ಬಂದ್ಗೆ ಬೆಂಬಲಿಸಿ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟು, ಹೋಟೆಲ್, ವ್ಯಾಪಾರ ಮಳಿಗೆಗಳನ್ನ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು.
ಆಗಿದ್ದೇನು?
ಹೊಸನಗರ ತಾಲೂಕಿನ ಅರಸಾಳು ಗ್ರಾಮದಿಂದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಗೋವುಗಳನ್ನ ಕದ್ದು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಗೋಕಳ್ಳರ ವಾಹನವನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದರು.
ಗೋವುಗಳಿದ್ದ ವಾಹನ ಶಿಕಾರಿಪುರದ ಸಾಲೂರು ಬಳಿ ಇರುವಾಗ ಗೋಕಳ್ಳರ ಮತ್ತೊಂದು ತಂಡ ಗೋರಕ್ಷಣೆಗೆ ಮುಂದಾಗಿದ್ದ ಕಾರ್ಯಕರ್ತರ ವಾಹನಕ್ಕೆ ಡಿಕ್ಕಿಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಶಿಕಾರಿಪುರ ಬಂದ್|
ಸಂಸದ ರಾಘವೇಂದ್ರ ಬೆಂಬಲ|
ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಬುಧವಾರದಂದು ಹಮ್ಮಿಕೊಂಡಿದ್ದ ಬೃಹತ್ ಬಂದ್ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯು ಶಿಕಾರಿಪುರದ ಖಾಸಗಿ ಬಸ್ ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಸಾಗಿ ಮಾಸೂರು ಸರ್ಕಲ್ ಮೂಲಕ ತರೆಳಿ ಅಕ್ಕಮಹಾದೇವಿ ವೃತ್ತದ ಸಂಪನ್ನಗೊಂಡು ಸಭೆ ನಡೆಸಲಾಯಿತು.




ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಭಟನಾ ಮೆರವಣೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗೋರಕ್ಷಣೆಗೆ ಮುಂದಾಗಿದ್ದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.
ಸರ್ಕಾರ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕು ಹಾಗೂ ಆರೋಪಿಗಳನ್ನ ಬಂಧಿಸುವಂತೆ ಅವರು ಒತ್ತಾಯಿಸಿದರು.
ಬಿಗಿ ಭದ್ರತೆ|
ಶಿಕಾರಿಪುರ ಬಂದ್ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದಾದ್ಯಂತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಹಲವೆಡೆ ಪೊಲಿಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ಹಿಂದೂ ಸಂಘಟನೆಗಳು, ಮುಖಂಡರು, ಗೋಪ್ರೇಮಿಗಳು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







