ಕುಳ್ಳಿ ಕಿರಣ್ ಹಂತಕ ಉಮೇಶ್ ಕಾಲಿಗೆ ಗುಂಡೇಟು|ಎನ್.ಆರ್.ಪುರ ಬಳಿ ಅಡಗಿದ್ದ ಐವರು ಆರೋಪಿಗಳು|ಅಪ್ಪು, ಸುನೀಲ್, ಮನುಜ್, ಭುವನ್ ಹೆಡೆಮುರಿ ಕಟ್ಟಿದ ಪೊಲೀಸರು
ಹತ್ಯೆಯಾದ ಕಿರಣ್ ಕುಳ್ಳಿ ಆರೋಪಿ ಉಮೇಶ್ ನಾಯ್ಕ್ ಪೊಲೀಸ್ ವಶದಲ್ಲಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.

ಶಿವಮೊಗ್ಗ: ರಾಮೇನಕೊಪ್ಪದಲ್ಲಿ ಭಾನುವಾರ ಸಂಜೆ ಕುಳ್ಳಿ ಕಿರಣ್ (32) ಹತ್ಯೆ ನಡೆದು ಕೆಲವೇ ಗಂಟೆಗಳಲ್ಲಿ ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ತುಂಗಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.


ಕುಳ್ಳಿ ಕಿರಣನ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೇ ಎಸ್ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದಿದ್ದ ಪೊಲೀಸರು, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಬಳಿ ಅಡಗಿ ಕುಳಿತಿದ್ದ ಆರೋಪಿ ಉಮೇಶ್ ನಾಯ್ಕ್ ಸೇರಿದಂತೆ ಅಪ್ಪು, ಸುನೀಲ್, ಮನುಜ್, ಭುವನ್ ಎಂಬುವರನ್ನು ಸೋಮವಾರ ಬೆಳಗಿನ ಜಾವ ಹೆಡೆಮುರಿ ಕಟ್ಟಿ ಎಳೆದು ತಂದಿದ್ದಾರೆ.
ಪರಾರಿಯಾಗಲು ಯತ್ನ|
ಆರೋಪಿ ಕಾಲಿಗೆ ಬಿತ್ತು ಗುಂಡು|
ಲಿಂಗಾಪುರ ಗ್ರಾಮದ ಬಳಿ ನಖರಾ ಶುರು ಮಾಡಿದ್ದ ಆರೋಪಿ ಉಮೇಶ್ ನಾಯ್ಕ್, ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸ್ ಪೇದೆ ತಮ್ಮಣ್ಣ ಅವರಿಗೆ ಚೈನ್ನಿಂದ ಹಲ್ಲೆ ನಡೆಸಿದ್ದಾನೆ.
ಆಗ ತುಂಗಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್, ಆರೋಪಿಗೆ ಎಚ್ಚರಿಕೆ ನೀಡಿದ್ದಲ್ಲದೇ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಆದರೆ ಉಮೇಶ್ ನಾಯ್ಕ್ ತಪ್ಪಿಸಿಕೊಳ್ಳಲು ಮತ್ತೆ ಪ್ರಯತ್ನ ನಡೆಸಿದ್ದರಿಂದ ಇನ್ಸ್ಪೆಕ್ಟರ್ ಗುರುರಾಜ್ ಅನಿವಾರ್ಯವಾಗಿ ತಮ್ಮ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿದ್ದಾರೆ.
ಉಮೇಶ್ ನಾಯ್ಕ್ನ ಎಡಗಾಲಿಗೆ ಗುಂಡು ತಗುಲಿದೆ. ಆರೋಪಿ ಸೇರಿದಂತೆ ಘಟನೆಯಲ್ಲಿ ಗಾಯಗೊಂಡಿರುವ ಪೇದೆ ತಮ್ಮಣ್ಣ ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಎಸ್ಪಿ ಹೇಳಿಕೆ|
ಹತ್ಯೆಯಾದ ಕಿರಣ್ ಕುಳ್ಳಿ ಆರೋಪಿ ಉಮೇಶ್ ನಾಯ್ಕ್ ಪೊಲೀಸ್ ವಶದಲ್ಲಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







