KarnatakaShivamogga

ಬರಗಾಲದಿಂದ ಅನ್ನದಾತರ ಸ್ಥಿತಿ ಚಿಂತಾಜನಕ|ಎಕರೆಗೆ 25 ಸಾವಿರ ಪರಿಹಾರ ನೀಡಲು ನಿಖಿಲ್‌ ಕುಮಾರಸ್ವಾಮಿ ಆಗ್ರಹ

ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇಡೀ ರಾಜ್ಯದ ರೈತರ ಸಾಲವನ್ನು ಒಂದೇ ಸಹಿಯಲ್ಲಿ ಮನ್ನಾ ಮಾಡಿ ದಿಟ್ಟತನ ತೋರಿದ್ದರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಭೀಕರ ಬರದಿಂದಾಗಿ ರೈತ ಬಾಂಧವರ ಸ್ಥಿತಿ ಚಿಂತಾಜನಕವಾಗಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಠ ಪ್ರತಿ ಎಕರೆಗೆ 25 ಸಾವಿರ ಬರ ಪರಿಹಾರ ನೀಡಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ತಾಲ್ಲೂಕಿನ ತ್ಯಾಜವಳ್ಳಿ ಗ್ರಾಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು.

ಇಡೀ ರಾಜ್ಯವನ್ನೇ ಬರಪೀಡಿತವೆಂದು ಎಂದು ಘೋಷಿಸಬೇಕು ಇಲ್ಲದಿದ್ದರೆ ರಾಜ್ಯದ ರೈತರೆಲ್ಲರೂ ಸೇರಿ ವಿಧಾನಸೌಧದ ಮುಂದೆ ಬೃಹತ್ ಉಗ್ರ ಹೋರಾಟ ನಡೆಸುತ್ತೇವೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಎಚ್ಚರಿಕೆ ನೀಡಿದರು.

ಕಷ್ಟ ಕಾಲದಲ್ಲಿ ರೈತರ ಬೆನ್ನಿಗೆ ನಿಲ್ಲಬೇಕಾದ ರಾಜ್ಯ ಸರ್ಕಾರ ಪರಿಹಾರ ನೀಡಲು ವಿಳಂಬ ಧೋರಣೆ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿತ್ತನೆ ಬೀಜ, ಗೊಬ್ಬರ, ಕೂಲಿಗಾಗಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಭರಿಸಿದ ವೆಚ್ಚ ಕೂಡ ಕೈಗೆಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮೈಕ್ರೋ ಫೈನಾನ್‌ಗಳ ಚಕ್ರಬಡ್ಡಿ, ಕಿರುಕುಳದಿಂದಾಗಿ ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇಡೀ ರಾಜ್ಯದ ರೈತರ ಸಾಲವನ್ನು ಒಂದೇ ಸಹಿಯಲ್ಲಿ ಮನ್ನಾ ಮಾಡಿ ದಿಟ್ಟತನ ತೋರಿದ್ದರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಅದೇ ರೀತಿಯ ಇಚ್ಛಾಶಕ್ತಿಯನ್ನು ಈಗಿನ ಸರ್ಕಾರವೂ ತೋರಲೆಂದು ಅವರು ಸವಾಲು ಹಾಕಿದರು.

ಸ್ವಾಭಿಮಾನಿ ರೈತ ಯಾತ್ರೆಗೂ ಮುನ್ನ ನಿಖಿಲ್ ಕುಮಾರಸ್ವಾಮಿ ಆಯನೂರು ಮತ್ತು ತ್ಯಾಜವಳ್ಳಿ ಭಾಗದ ರೈತರಾದ ಇಸ್ಮಾಯಿಲ್ ಮತ್ತು ರಮೇಶ್ ಅವರ ಒಣಗಿದ ಜೋಳ ಮತ್ತು ಮೆಕ್ಕೆಜೋಳದ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.

ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಎಸ್.ಎಲ್. ಭೋಜೆಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ಜಿ, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತಾ ಮಹೇಶ್ , ಮಾಜಿ ಜಿಲ್ಲಾಧ್ಯಕ್ಷ ಗೋಪಾಲಗೌಡ, ತಾಲ್ಲೂಕು ಅಧ್ಯಕ್ಷ ಸತೀಶ ಗೌಡ ಮುಖಂಡರಾದ ಛತ್ರಪತಿ ನಾಯ್ಕ್, ತಿಪ್ಪೇಸ್ವಾಮಿ, ಶ್ರೀಮತಿ ರೇಣುಕಾ, ಶಿವಾ ನಾಯ್ಕ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button