ಪುರಾತನ ನಾಣ್ಯಗಳ ವಿರಾಟ್ ಪ್ರದರ್ಶನಕ್ಕೆ ಚಾಲನೆ|ನಾಣ್ಯಗಳ ಸಂಗ್ರಹ ಪ್ರದರ್ಶನದಿಂದ ಇತಿಹಾಸದ ಅರಿವು-ಬಿಎಸ್ ಯಡಿಯೂರಪ್ಪ
ಸಾವಿರಾರು ವರ್ಷಗಳ ಹಿಂದಿನ ನಾಣ್ಯಗಳು ಮತ್ತು 70 ಕ್ಕೂ ವಿವಿಧ ದೇಶಗಳ ಕರೆನ್ಸಿ ಅಂಚೆ ಚೀಟಿ, ಕರ್ನಾಟಕವನ್ನಾಳಿದ ಪ್ರಸಿದ್ದ ದೊರೆಗಳ ಅಪರೂಪದ ನಾಣ್ಯಗಳ ಪ್ರದರ್ಶನ ವೀಕ್ಷಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಮೊಗ್ಗ: ನಾಡಿನ ಪುರಾತನ ಸಂಸ್ಕೃತಿ ಇತಿಹಾಸ ಮತ್ತು ಪರಂಪರೆ ತಿಳಿಯಲು ನಾಣ್ಯಗಳ ಸಂಗ್ರಹ ಪ್ರದರ್ಶನ ಸಹಕಾರಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.
ವೀರಶೈವ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ಕಲಾ ದಸರಾ ಅಂಗವಾಗಿ ಮಲೆನಾಡು ನಾಣ್ಯ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಪುರಾತನ ನಾಣ್ಯಗಳ ವಿರಾಟ್ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ವೇಳೆ ಸಾವಿರಾರು ವರ್ಷಗಳ ಹಿಂದಿನ ನಾಣ್ಯಗಳು ಮತ್ತು 70 ಕ್ಕೂ ವಿವಿಧ ದೇಶಗಳ ಕರೆನ್ಸಿ ಅಂಚೆ ಚೀಟಿ, ಕರ್ನಾಟಕವನ್ನಾಳಿದ ಪ್ರಸಿದ್ದ ದೊರೆಗಳ ಅಪರೂಪದ ನಾಣ್ಯಗಳ ಪ್ರದರ್ಶನ ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಎಸ್.ಎನ್.ಚೆನ್ನಬಸಪ್ಪ ಮಾತನಾಡಿ ಇದು ಬರೀ ನಾಣ್ಯ ಅಲ್ಲ ನಮ್ಮ ಪರಂಪರೆಯ ಪ್ರತಿಬಿಂಬ ಎಂದರು.
ನಾಣ್ಯಗಳು ಕೇವಲ ವಿನಿಮಯ ಮಾಧ್ಯಮವಲ್ಲ. ಅವು ನಮ್ಮ ಭವ್ಯ ಇತಿಹಾಸ, ರಾಜವಂಶಗಳ ಗತವೈಭವ ಹಾಗೂ ಪ್ರಾಚೀನ ಆರ್ಥಿಕ ನಾಗರಿಕತೆಯ ಜೀವಂತ ಸಾಕ್ಷಿಗಳು ಎಂದು ಎಸ್.ಎನ್.ಚೆನ್ನಬಸಪ್ಪ ಹೇಳಿದರು.


ನಾಣ್ಯ ಸಂಗ್ರಹಕಾರರ ಸಂಘದ ಕಾರ್ಯದರ್ಶಿ ಚಂದ್ರಕಾಂತ್ ಮಾತನಾಡಿ, ಸಂಘ ಅನೇಕ ವರ್ಷಗಳಿಂದ ನಾಣ್ಯ ಪ್ರದರ್ಶನ ನಡೆಸುತ್ತಿದ್ದು ಶಾಶ್ವತ ಸಭಾಂಗಣ ವ್ಯವಸ್ಥೆ ಬೇಕಾಗಿದೆ ಎಂದು ಹೇಳಿದರು.
ಜೊತೆಗೆ ಇತಿಹಾಸ ಪುರುಷರ ಮತ್ತು ಮಹಾನ್ ವ್ಯಕ್ತಿಗಳ ನಾಣ್ಯಗಳ ಬಿಡುಗಡೆಗೆ ಕೇಂದ್ರ ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡಿದರು.
ಪುರಾತನ ನಾಣ್ಯಗಳ ವಿರಾಟ್ ಪ್ರದರ್ಶನ|
ಸಾವಿರಾರು ವರ್ಷ ಪುರಾತನ ಇತಿಹಾಸವಿರುವ ಚಿನ್ನದ ನಾಣ್ಯಗಳು ಬೆಳ್ಳಿಯ ನಾಣ್ಯಗಳು ವಿವಿಧ ದೇಶಗಳ ಅಂಚೆ ಚೀಟಿಗಳು ಕರೆನ್ಸಿಗಳು ದೇಶದ ಮತ್ತು ನಾಡಿನ ಸಂಸ್ಕೃತಿಯನ್ನು ಸಾರುವ ಅನೇಕ ರಾಜ ಮಹಾರಾಜರ ಇತಿಹಾಸ ನಾಣ್ಯಗಳ ವಿರಾಟ್ ಪ್ರದರ್ಶನ ಕಾಣಬಹುದಾಗಿದೆ.

ಶಾತವಾಹನರು, ಗುಪ್ತರು, ಕುಶಾನರು, ಇಂಡೋ-ಗ್ರೀಕರು, ಇಂಡೋ-ಪಾರ್ಥಿಯನ್ನ ರೋಮನ್ನರು ಸೇರಿದಂತೆ ವಿವಿಧ ರಾಜವಂಶಗಳ ನಾಣ್ಯಗಳು, ಪ್ರಾಚೀನ ಬೆಳ್ಳಿ ಮುದ್ರೆಯ ನಾಣ್ಯಗಳು, ದೆಹಲಿ ಸುಲ್ತಾನರು, ಮೊಘಲರು, ಬಹಮನಿ ಹಾಗೂ ವಿಜಯಪುರ ಸುಲ್ತಾನರ ಕಾಲದ ನಾಣ್ಯಗಳು, ಬ್ರಿಟಿಷರ ಆಳ್ವಿಕೆಯ ಅವಧಿ ಮತ್ತು ಸ್ವತಂತ್ರ ಭಾರತದ ನಾಣ್ಯಗಳ ಸಂಗ್ರಹವೂ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಕರ್ನಾಟಕವನ್ನು ಆಳಿದ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಅಳುಪರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ಅರಸರ ಕಾಲದ ನಾಣ್ಯಗಳನ್ನು ವೀಕ್ಷಿಸಬಹುದಾಗಿದೆ.

ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಕಾಲದ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳ ಸಂಗ್ರಹವಿದೆ.




ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ 17,18 ಎರಡು ದಿನ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಿಸಲು ಅವಕಾಶವಿದೆ.
ಮಾಜಿ ಶಾಸಕ ಎಸ್ ರುದ್ರೇಗೌಡ. ಪಾಲಿಕೆ ಆಯುಕ್ತ ಮಾಯಣ್ಣಗೌಡ, ವಿರೂಪಾಕ್ಷಪ್ಪ, ಜ್ಯೋತಿಪ್ರಕಾಶ್, ಸಂಘದ ಅಧ್ಯಕ್ಷ ದೇವದಾಸ್ ನಾಯಕ್, ವಿನೋದ್ ಕುಮಾರ್ ಜೈನ್. ಜೆ. ವಿರೂಪಾಕ್ಷಪ್ಪ, ಎಸ್. ಚಂದ್ರಕಾಂತ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.









