ಹುಸಿ ಬಾಂಬ್ ಸ್ಪೋಟದ ಬೆದರಿಕೆ ಸಂದೇಶ-ಶಿವಮೊಗ್ಗ ಜಿಲ್ಲಾ ಕೋರ್ಟನಲ್ಲಿ ತಲ್ಲಣ|ಕೃತ್ಯದ ಹಿಂದೆ ಚೆನ್ನೈ ನಂಟು?|ಭದ್ರತಾ ಪಡೆಗಳಿಂದ ಫುಲ್ ತಲಾಶ್-ಆವರಣದಲ್ಲಿ ಹೆಚ್ಚಿದ ಭದ್ರತೆ
ಕೆಲ ತಿಂಗಳಿಂದ ರಾಜ್ಯದ ಹಲವು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಈ ರೀತಿಯ ಮೇಲ್ ಮೂಲಕ ಬೆದರಿಕೆ ಸಂದೇಶಗಳು ರವಾನೆಯಾಗುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಬಳಿಕ ಶಿವಮೊಗ್ಗ ನ್ಯಾಯಾಲಯಕ್ಕೂ ಈ ರೀತಿಯ ಬೆದರಿಕೆ ಸಂದೇಶ ಬಂದಿದೆ ಎಂದು ನ್ಯಾಯಾಧೀಶ ಮಂಜುನಾಥ್ ಹೇಳಿದರು.

ಶಿವಮೊಗ್ಗ: ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಸ್ಪೋಟಿಸುವ ಹುಸಿ ಬೆದರಿಕೆ ಸಂದೇಶವೊಂದು ಬಂದ ಪರಿಣಾಮ, ನ್ಯಾಯಾಲಯದ ಸಿಬ್ಬಂದಿ, ವಕೀಲರು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಬುಧವಾರದಂದು ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಕುರಿತು ಅವರು ಮಾಹಿತಿ ನೀಡುತ್ತಿದ್ದಂತೇ ನ್ಯಾಯಾಲಯದ ಆವರಣದಲ್ಲಿ ರಕ್ಷಣಾ ಕಾರ್ಯ ಆರಂಭಗೊಂಡಿದೆ.
ನ್ಯಾಯಾಲಯ ಆವರಣದಲ್ಲಿ ಆತಂಕ|
ಸ್ಥಳಕ್ಕೆ ಧಾವಿಸಿದ ಎಸ್ಪಿ ಬಿ.ನಿಖಿಲ್|

ಆ ಕೂಡಲೇ ನ್ಯಾಯಾಲಯದ ಆವರಣದಲ್ಲಿ ಭದ್ರತಾ ಪಡೆ , ಶ್ವಾನದಳ, ಬಿಡಿಡಿಎಸ್ ಬಾಂಬ್ ಡಿಟೆಕ್ಷನ್ ದಳಗಳು ನ್ಯಾಯಾಲಯ ಸಂಕೀರ್ಣದ ಪ್ರತಿಯೊಂದು ಕೊಠಡಿ ಹಾಗೂ ಇಡೀ ಆವರಣ ಹಾಗೂ ವಾಹನ ನಿಲುಗಡೆ ಪ್ರದೇಶಗಳಲ್ಲಿ, ತೀವ್ರ ತಪಾಸಣೆ ನಡೆಸಿದರು.

ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಎಸ್ಪಿ ಬಿ ನಿಖಿಲ್ ಮತ್ತಿತರ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಭದ್ರತಾ ಕ್ರಮಗಳನ್ನ ದಿಢೀರ್ ಬಿಗಿಗೊಳಿಸಿದರು.
ಹುಸಿ ಬೆದರಿಕೆ ಸಂದೇಶ|
ಎಸ್ಪಿ ನಿಖಿಲ್ ಹೇಳಿದ್ದೇನು?
ಪ್ರಾಥಮಿಕ ಶೋಧ ಕಾರ್ಯಾಚರಣೆಯಲ್ಲಿ ಇದೊಂದು ಹುಸಿ ಬೆದರಿಕೆ ಸಂದೇಶವೆಂದು ತಿಳಿದುಬಂದಿದೆ ಎಂದು ಎಸ್ಪಿ ಬಿ.ನಿಖಿಲ್ ಹೇಳಿದ್ದಾರೆ.

ಉಹಾಪೋಹದಿಂದ ಉಂಟಾಗಿದ್ದ ಪರಿಸ್ಥಿತಿ ಹತೋಟಿಗೆ ಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಧೀಶರ ಕಚೇರಿಯ ಅಧಿಕೃತ ಇಮೇಲ್ ವಿಳಾಸಕ್ಕೆ ಅಜ್ಮಲ್ ಕಸಬ್ ಎಂಬ ಹೆಸರಿನಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಲಾಗಿದೆ.

ಸಂದೇಶದಲ್ಲಿ ತುಕ್ಕು ಹಿಡಿದ ಮೊಳೆಗಳನ್ನ ಜೋಡಿಸಿದ ಐದು ಮಿನಿ ಸಿಲಿಂಡರ್ ಮೂಲಕ ಮಧ್ಯಾನ್ಹ 2.30 ಕ್ಕೆ ಬಾಂಬ್ ಸ್ಪೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿತ್ತು ಎಂದು ತಿಳಿಸಿದರು.
ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕ ಪತ್ತೆಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯ ಆವರಣದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ ಎಂದು ಎಸ್ಪಿ ಬಿ.ನಿಖಿಲ್ ಹೇಳಿದರು.

ವಿಶೇಷ ತಪಾಸಣಾ ತಂಡಗಳು, ಭದ್ರತೆಯ ದೃಷ್ಟಿಯಿಂದ ಒಳಗೆ ಹೋಗುವವರು ಬರುವವರ ಬ್ಯಾಗ್‌ಗಳನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಂದೇಶ ಕಳಿಸಿರುವ ವ್ಯಕ್ತಿಯು ಉದಯನಿಧಿ ಸ್ಟಾಲಿನ್ ಬೆಂಬಲಿಸಲು ಅಲ್ಲಿನ ಪತ್ರಕರ್ತರಿಗೆ ಅಪ್ರಾಪ್ತ ಬಾಲಕಿ ಸರಬರಾಜು ಮಾಡಲಾಗಿದೆ ಅವರ ಮೇಲೆ ಎಫ್.ಐ.ಆರ್ ಮಾಡಿಲ್ಲ. ಯಾವುದೇ ಕ್ರಮವಾಗಿಲ್ಲವೆಂದು ಆರೋಪಿದ್ದಾನೆ.
ಈ ಬಗ್ಗೆ ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ಬಿ ನಿಖಿಲ್ ತಿಳಿಸಿದರು.
ನ್ಯಾಯಾಧೀಶರನ್ನು ಗುರಿ ಇಟ್ಟು ಕೃತ್ಯ|
ನ್ಯಾಯಾಧೀಶ ಮಂಜುನಾಥ್ ಹೇಳಿಕೆ|
ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ ಬಾಂಬ್ ಬೆದರಿಕೆ ಸಂದೇಶದ ಬಗ್ಗೆ ಮಾಹಿತಿ ನೀಡಿದರು.
ಕೆಲ ತಿಂಗಳಿಂದ ರಾಜ್ಯದ ಹಲವು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಈ ರೀತಿಯ ಮೇಲ್ ಮೂಲಕ ಬೆದರಿಕೆ ಸಂದೇಶಗಳು ರವಾನೆಯಾಗುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಬಳಿಕ ಶಿವಮೊಗ್ಗ ನ್ಯಾಯಾಲಯಕ್ಕೂ ಈ ರೀತಿಯ ಬೆದರಿಕೆ ಸಂದೇಶ ಬಂದಿದೆ ಎಂದು ನ್ಯಾಯಾಧೀಶ ಮಂಜುನಾಥ್ ಹೇಳಿದರು.
ಜಯನಗರ ಪೊಲೀಸ್ ಠಾಣೆಗೆ ದೂರು|



ಆ ವ್ಯಕ್ತಿಯ ಉದ್ದೇಶ ಅರ್ಥವಾಗಿಲ್ಲ. ಹೀಗಾಗಿ ಜಯನಗರ ಪೊಲೀಸ್ ಠಾಣೆಗೆ ಬೆದರಿಕೆ ಸಂದೇಶ ಕುರಿತು ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ಕಳೆದ ಎರಡು ತಿಂಗಳ ಹಿಂದೆ ರಾಜ್ಯದ ಹಲವು ನ್ಯಾಯಾಧೀಶರ ಪೋಟೋ ದುರ್ಬಳಕೆ ಮಾಡಿಕೊಂಡು ವಿದೇಶಿ ವ್ಯಕ್ತಿಗಳು ಅಲ್ಲಿನ ನಂಬರ್ ಬಳಸಿ ನ್ಯಾಯಾಲಯದ ಸಿಬ್ಬಂದಿ ಅಧಿಕಾರಿಗಳಿಗೆ ಸಂದೇಶ ಕಳಿಸಿ ಹಣ ಕೇಳುವ ಪ್ರಕರಣ ಹೆಚ್ಚಾಗುತ್ತಿವೆ ಎಂದು ನ್ಯಾಯಾಧೀಶ ಮಂಜುನಾಥ್ ಕಳವಳ ವ್ಯಕ್ತಪಡಿಸಿದರು
ವಕೀಲರ ಸಂಘದಿಂದ ತುರ್ತು ಸಂದೇಶ|
ಬಾಂಬ್ ಸ್ಪೋಟ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ವಕೀಲರ ಸಂಘವು ತನ್ನ ಎಲ್ಲ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ತಪಾಸಣೆಗೆ ಸಹಕರಿಸಲು ತುರ್ತು ಸಂದೇಶ ರವಾನಿಸಿತ್ತು ಎಂದು ಹೇಳಲಾಗಿದೆ.
ಒಟ್ಟಾರೇ, ಹುಸಿ ಬಾಂಬ್ ಬೆದರಿಕೆಯ ಪರಿಣಾಮ ಕೆಲಕಾಲ ನ್ಯಾಯಾಲಯ ಸಂರ್ಕೀಣ ಸೇರಿದಂತೆ ನಗರದ ಜನತೆಗೂ ಸಹ ಆತಂಕಕ್ಕೀಡು ಮಾಡಿತ್ತು.
ಈ ಮಧ್ಯೆ ಶಿವಮೊಗ್ಗ ನ್ಯಾಯಾಲಯ ಸಂಕೀರ್ಣದಲ್ಲಿ ಶಾಶ್ವತವಾಗಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬ ಮಾತು ಸಹ ಇದೇ ವೇಳೆ ಕೇಳಿ ಬಂದಿತು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







