ಅಡಿಕೆ ಲಾರಿ ಜಪ್ತಿ ಹಿಂದೆ ಬಿಜೆಪಿ ಕೈವಾಡ?|ಈಶ್ವರಪ್ಪನವರ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ|ವಿದ್ಯುತ್ ವಿತರಣೆ ಖಾಸಗೀಕರಣವಿಲ್ಲ-ಬೇಳೂರು ಗೋಪಾಲಕೃಷ್ಣ
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಅಡಿಕೆ ಲಾರಿಗಳನ್ನು ಜಪ್ತಿ ಮಾಡಿರುವದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಶಂಕೆ ವ್ಯಕ್ತಪಡಿಸಿದರು.

ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅದೇನು! ತಿಪ್ಪರಲಾಗ ಹಾಕಿದರೂ ಅವರ ರಾಜಕೀಯ ಭವಿಷ್ಯ ಇನ್ನು ಮುಗಿದ ಅಧ್ಯಾಯ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಗುರುವಾರ ಪತ್ರಿಕಾಭವನದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂತ್ವದ ಹೆಸರೇಳಿಕೊಂಡು ಏನೇನೋ ಹೋರಾಟ ಮಾಡಿಕೊಂಡು ಬಿಜೆಪಿ ಸೇರುವ ತವಕದಲ್ಲಿರುವ ಕೆ.ಎಸ್.ಈಶ್ವರಪ್ಪನವರಿಗೆ ಬಿಜೆಪಿ ಖಾಯಂ ಆಗಿ ಬಾಗಿಲು ಮುಚ್ಚಿಬಿಟ್ಟಿದೆ ಎಂದರು.

ಆಕಸ್ಮಾತ ಈಶ್ವರಪ್ಪನವರನ್ನು ಬಿಜೆಪಿಗೆ ಸೇರಿಸಿಕೊಂಡರೂ ಅವರಿಗೆ ಟಿಕೆಟ್ ನೀಡುವದಿಲ್ಲ ಎಂದು ಭವಿಷ್ಯ ನುಡಿದರು.
ಹಿಂದೂತ್ವದ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುವ ಬಸನಗೌಡ ಪಾಟೀಲ್, ಅನಂತ್‌ಕುಮಾರ್ ಹೆಗಡೆ, ಅಂತಹವರನ್ನೇ ದೂರ ತಳ್ಳಿರುವ ಬಿಜೆಪಿ, ಈಶ್ವರಪ್ಪನವರಿಗೂ ಅದೇ ದಾರಿ ತೋರಿಸಿದೆ ಎಂದು ಹೇಳಿದರು.
ಈಶ್ವರಪ್ಪನವರ ದ್ವಂದ್ವ ಹೋರಾಟಗಳು|
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಸಕ್ರಿಯ ಹೋರಾಟ ನಡೆಸುತ್ತಿರುವ ಮಾಜಿ ಡಿಸಿಎಂ ಈಶ್ವರಪ್ಪನವರ ಹೋರಾಟದ ಬಗ್ಗೆ ತಮ್ಮ ಆಕ್ಷೇಪವಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಆದರೆ ಇದೇ ಪರಿಸರ ಕಾಳಜಿಯು, ಕೇಂದ್ರ ಸರ್ಕಾರದ ರಸ್ತೆ, ಹೆದ್ದಾರಿ ಕಾಮಗಾರಿಗಾಗಿ ಲಕ್ಷಾಂತರ ಮರಗಳನ್ನ ಕಡಿಯುವಾಗಲೂ ಈಶ್ವರಪ್ಪನವರು ಯಾಕೆ ವಿರೋಧಿಸುವುದಿಲ್ಲವೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ವಿದ್ಯುತ್ ವಿತರಣೆ ಖಾಸಗೀಕರಣವಿಲ್ಲ|
ಕೇಂದ್ರ ಸರ್ಕಾರದ ಒತ್ತಡ ಹಿನ್ನೆಲೆಯಲ್ಲಿಯೇ ವಿದ್ಯುತ್ ಖಾಸಗೀಕರಣದ ವಿಷಯ ಮುನ್ನಲೆಗೆ ಬಂದಿತ್ತು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಉದ್ಯಮಿ ಅದಾನಿ ಮತ್ತು ಅಂಬಾನಿ ಅಂತಹವರಿಗೆ ಅನುಕೂಲ ಮಾಡಿಕೊಡಲು ಇಂತಹ ಖಾಸಗೀಕರಣ ಮಾಡುವ ಯೋಚನೆಯನ್ನು ಕೇಂದ್ರ ಸರ್ಕಾರ ಹೊಂದಿತ್ತು ಎಂದು ಆರೋಪಿಸಿದರು.
ಆದರೆ ರಾಜ್ಯ ಸರ್ಕಾರವು ಈ ವಿದ್ಯುತ್ ಖಾಸಗೀಕರಣಕ್ಕೆ ಒಪ್ಪಿಲ್ಲ ಎಂದು ಹೇಳಿದರು.
ಇನ್ನು ರೈತರಿಗೆ ಎಂದಿನಂತೆ ಉಚಿತ ವಿದ್ಯುತ್ ಮುಂದುರೆಯಲಿದ್ದು, ಅನ್ನದಾತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಭಯ ನೀಡಿದರು.
ಅಡಿಕೆ ಲಾರಿ ಬಿಡುಗಡೆ ವಿಚಾರ|
ಹಿಡಿಸುವುದು-ಬಿಡಿಸುವದರ ಹಿಂದೆ ಬಿಜೆಪಿ ಕೈವಾಡ|
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಅಡಿಕೆ ಲಾರಿಗಳನ್ನು ಜಪ್ತಿ ಮಾಡಿರುವದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಶಂಕೆ ವ್ಯಕ್ತಪಡಿಸಿದರು.

ಈ ವಿಚಾರದಲ್ಲಿ ಬಿಜೆಪಿಯವರದ್ದು ಪಕ್ಕಾ ಮೊಸಳೆ ಕಣ್ಣಿರು ಸುರಿಸಿ ನಾಟಕ ಮಾಡುತ್ತಿದ್ದಾರೆ. ರಾಜ್ಯದ ಅಡಿಕೆ ಲಾರಿಗಳನ್ನು ತಡೆಹಿಡಿಸಿ ನಂತರ ಇವರೇ ಬಿಡಿಸುವ ನಾಟಕ ಮಾಡುತ್ತಾರೆ ಎಂದು ನೇರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಎಂ ಶ್ರೀಕಾಂತ್, ರಮೇಶ್ ಶಂಕರಘಟ್ಟ , ಶಿ.ಜು. ಪಾಶ, ಶ್ರೀಧರ್ ಹುಲ್ತಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







