ಬುಧವಾರ ಮಲೆನಾಡಿಗೆ ಕಾಂಗ್ರೆಸ್ ದಂಡು|ಶಿಕಾರಿಪುರದಲ್ಲಿ ಭಾರತ್ ಜೋಡೋ.2.0 ಪಾದಯಾತ್ರೆ |ಹರಿಪ್ರಸಾದ್, ಮಧು ಬಂಗಾರಪ್ಪ ನೇತೃತ್ವ
ಭಾರತ್ ಜೋಡೋ ಯಾತ್ರೆಯ ರೂಪುರೇಷೇ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಂಗಳವಾರದಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

ಶಿವಮೊಗ್ಗ: ಭಾರತ್ ಜೋಡೋ ಯಾತ್ರೆ 2.0 ಬುಧವಾರದಂದು ಶಿಕಾರಿಪುರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪನವರ ಭದ್ರಕೋಟೆಯಾಗಿರುವ ಶಿಕಾರಿಪುರವನ್ನು ಟಾರ್ಗೆಟ್ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವು ಯಾತ್ರೆ ಯಶಸ್ವಿಗೆ ಸಕಲ ತಯಾರಿ ಮಾಡಿಕೊಂಡಿದೆ.
ಭಾರತ್ ಜೋಡೋ ಯಾತ್ರೆಯ ರೂಪುರೇಷೇ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಂಗಳವಾರದಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.
ಭಾರತ್ ಜೋಡೋ 2.0|
ಬಿ.ಕೆ.ಹರಿಪ್ರಸಾದ್ ನೇತೃತ್ವ|
ಬೆಳಿಗ್ಗೆ 10 ಗಂಟೆಗೆ ಕಿಟ್ಟದಹಳ್ಳಿಯಿಂದ ಭಾರತ್ ಜೋಡೋ 2.0 ಪಾದಯಾತ್ರೆ ಆರಂಭಗೊಳ್ಳಲಿದೆ.
ಮಟ್ಟಿಕೋಟೆ ಕ್ರಾಸ್, ನೆಲವಾಗಿಲು ಮಾರ್ಗದದಿಂದ ಶಿಕಾರಿಪುರದವರೆಗೆ 10 ಕಿಲೋಮೀಟರ್ ಪಾದಯಾತ್ರೆಯು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ನಡೆಯಲಿದೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದರು.

ಮಧ್ಯಾಹ್ನ ಶಿಕಾರಿಪುರ ಪಟ್ಟಣದ ಹೊಸ ಸಂತೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿಯವರ ಆಶಯಗಳನ್ನು ಮುಂದುವರೆಸಲು ಮತ್ತೆ ಭಾರತ್ ಜೋಡೋ- 2.0 ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದರು.
ಗ್ರಾಮೀಣ ಭಾಗದ ಜನರನ್ನು ನೇರವಾಗಿ ಸಂಪರ್ಕಿಸಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ರಾಜ್ಯದ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಶಿಕಾರಿಪುರದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆ-2.0 ನಾಂದಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೀಶ್, ಶಾಸಕಿ ಬಲ್ಕೀಶ್ ಬಾನು, ಚೇತನಗೌಡ ಸೇರಿದಂತೆ ಮಂಚೂಣಿ ನಾಯಕರು ಉಪಸ್ಥಿತರಿದ್ದರು.
ಸಿಎಂ, ಮಾಜಿ ಸಿಎಂ ಗೈರು|
ಮಧು ಬಂಗಾರಪ್ಪ ಹಾಜರು|
ಈಗಾಗಲೇ ಭಾರತ್ ಜೋಡೋ ಯಾತ್ರೆಯ ತಯಾರಿ ಹಾಗೂ ಬೃಹತ್ ಸಮಾವೇಶದ ಸಿದ್ದತೆಗಳನ್ನು ಸೋಮವಾರದಂದು ಸಚಿವ ಮಧು ಬಂಗಾರಪ್ಪ ಪರಿಶೀಲನೆ ನಡೆಸಿದ್ದಾರೆ.


ಈ ಮೊದಲು ನಿಗದಿಯಾದಂತೇ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು.
ಆದರೆ ನವದೆಹಲಿಯಲ್ಲಿ ನಡೆದಿರುವ ಸರಣಿ ಕಾಂಗ್ರೆಸ್ ಸಭೆಗಳಲ್ಲಿ ಇಬ್ಬರು ನಾಯಕರು ಭಾಗವಹಿಸಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಯಾತ್ರೆ ಹಾಗೂ ಸಮಾವೇಶ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಬುಧವಾರದ ಭಾರತ್ ಜೋಡೋ ಯಾತ್ರೆಯಲ್ಲಿ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಆರೋಗ್ಯ ಸಚಿವ ಯು,ಟಿ.ಖಾದರ್ ಸೇರಿದಂತೆ ಹಲವು ಸಚಿವರು ಹಾಗೂ ಮಂಚೂಣಿ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






