79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ|ಕಲ್ಯಾಣ ಕರ್ನಾಟಕದ ʼಕಲ್ಯಾಣʼಕ್ಕೆ ಸರ್ಕಾರ ಬದ್ಧ|ಪ್ರಜಾಸೇವೆಯೇ ದೇವರ ಸೇವೆ-ಡಿ.ಕೆ.ಶಿವಕುಮಾರ್
ಪ್ರತಿ 2ನೇ ಹಾಗೂ 4ನೇ ಶನಿವಾರ ನಾನೂ ಸೇರಿದಂತೆ ನಮ್ಮ ಸಚಿವರು, ಶಾಸಕರು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಅಭಿಯಾನ ನಡೆಸುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಲ್ಯಾಣ ಕರ್ನಾಟಕದ ʼಕಲ್ಯಾಣʼಕ್ಕೆ ಸರ್ಕಾರ ಬದ್ಧ ಎಂದು ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಕಲಬುರ್ಗಿಯಲ್ಲಿ ಆಯೋಜಿಸಲಾಗಿರುವ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅವರು, ನಾವು ಮತಕ್ಕಾಗಿ ಅಲ್ಲ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಸೇವೆಯೇ ದೇವರ ಸೇವೆ. ಅದಕ್ಕಾಗಿ ಪ್ರಜಾಸೇವೆ ಇಲಾಖೆಯನ್ನೇ ಸ್ಥಾಪಿಸಿದ್ದೇವೆ ಎಂದರು.

ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ. ಪ್ರತಿ 2ನೇ ಹಾಗೂ 4ನೇ ಶನಿವಾರ ನಾನೂ ಸೇರಿದಂತೆ ನಮ್ಮ ಸಚಿವರು, ಶಾಸಕರು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಅಭಿಯಾನ ನಡೆಸುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠ|
ಬೆಂಗಳೂರು ಕರ್ನಾಟಕದ ಕಿರೀಟ. ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠ ಎಂದು ಬಣ್ಣಿಸಿದ ಸಿಎಂ ಡಿ.ಕೆ.ಶಿವಕುಮಾರ್, ಕಲ್ಯಾಣ ಕರ್ನಾಟಕದಲ್ಲಿ ತುಂಗಭದ್ರಾ, ಕೃಷ್ಣಾ ನದಿಗಳಂತೆ ಅಭಿವೃದ್ಧಿಯೂ ತುಂಬಿ ಹರಿಯುತ್ತಿದೆ ಎಂದರು.

ಕೊಪ್ಪಳದ ನವಲಿಯಲ್ಲಿ ತುಂಗಭದ್ರಾ ಅಣೆಕಟ್ಟಿಗೆ ಸಮತೋಲನ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.
ಇದಕ್ಕಾಗಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ 12 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸುಮಾರು ₹25 ಸಾವಿರ ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಇತಿಹಾಸ ಬದಲಾಯಿಸಲು ಕಾಂಗ್ರೆಸ್ ಪಕ್ಷ ರಕ್ತ, ಬೆವರು ಹರಿಸಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ವಿಮೋಚನೆ ದೊರೆತಿದ್ದು ನಮ್ಮ ಕಾಂಗ್ರೆಸ್‌ನಿಂದ ಎಂದು ಒತ್ತಿ ಹೇಳಿದ ಸಿಎಂ ಡಿ.ಕೆ.ಶಿವಕುಮಾರ್, ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಕಲ್ಯಾಣ ಕರ್ನಾಟಕಕ್ಕೆ ನಿಜಾಮರು ಸ್ವಾತಂತ್ರ್ಯ ನೀಡಿರಲಿಲ್ಲ.

ಆಗ ಕಾಂಗ್ರೆಸ್‌ನ ಹೋರಾಟದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಬಂತು ಎಂದು ತಿಳಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್, ನೆಹರು ಅವರು ಕಲ್ಯಾಣ ಕರ್ನಾಟಕವನ್ನು ಕಾಪಾಡಿದರು.
ಧರಂಸಿಂಗ್ ಅವರ ವರದಿಯ ಆಧಾರದ ಮೇಲೆ 1990ರಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು ಎಂದು ಸ್ಮರಿಸಿದರು.

371(ಜೆ) ಶ್ರೀಮತಿ ಸೋನಿಯಾ ಗಾಂಧಿ, ಡಾ. ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ.
371(ಜೆ)ಯ ಉದ್ದೇಶ ಒಂದು ಮನೆಯಲ್ಲಿ ಒಬ್ಬರಾದರೂ ಸರ್ಕಾರಿ ನೌಕರ ಇರಬೇಕು. ಊರಿಗೆ ಒಬ್ಬರಾದರೂ ಡಾಕ್ಟರ್ ಇರಬೇಕು. ಊರಿಗೆ ಐವರಾದರೂ ಇಂಜಿನಿಯರ್‌ಗಳು ಇರಬೇಕು ಎಂಬುದು. ಈ ಕನಸನ್ನು ನನಸು ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಈ ಭಾಗದ ಜನರ ಬದುಕು ಕಟ್ಟಿದ ಮಹಾನ್ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೀವ್ಯಾರೂ ಮರೆಯಬಾರದು. ಚಿಕ್ಕವಯಸ್ಸಿನಲ್ಲೇ ಕುಟುಂಬದ ಸದಸ್ಯರನ್ನು ಕಳೆದುಕೊಂಡರೂ ಅದರಿಂದ ಅವರು ಕುಗ್ಗಲಿಲ್ಲ.
ಬದಲಿಗೆ ಹೋರಾಟದ ಬದುಕು ಕಟ್ಟಿ ಈಗ ರಾಷ್ಟ್ರಮಟ್ಟದ ನಾಯಕರಾಗಿದ್ದಾರೆ ಎಂದು ಅಭಿಮಾನದಿಂದ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆರ್ಟಿಕಲ್ 371(ಜೆ) ಜಾರಿಯಾಗಿ 12 ವರ್ಷಗಳಾಗಿವೆ. ₹25 ಸಾವಿರ ಕೋಟಿ ಅನುದಾನದಲ್ಲಿ ಈಗಾಗಲೇ ₹14,000 ಕೋಟಿ ಖರ್ಚು ಮಾಡಲಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 32,985 ಕಾಮಗಾರಿಗಳು ಪೂರ್ಣಗೊಂಡಿವೆ.
8,118 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಭಾಗದ ಯುವಕರು 371(ಜೆ)ಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಇಲ್ಲಿಯವರೆಗೆ 79,383 ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈಗ 72 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ 32 ಸಾವಿರ ಹುದ್ದೆಗಳು ಈ ಭಾಗದ ಜನರಿಗೆ ದೊರೆಯಲಿವೆ ಎಂದರು.
ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪ್ರತಿವರ್ಷ ₹5 ಸಾವಿರ ಕೋಟಿ ನೀಡಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಅತಿ ದೊಡ್ಡ ESI ಆಸ್ಪತ್ರೆ ಕಟ್ಟಿಸಿದ್ದಾರೆ. ಕಲ್ಯಾಣ ಕರ್ನಾಟಕ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ.
ಯಾದಗಿರಿ, ಕೊಪ್ಪಳ ಮತ್ತು ಬೀದರ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ.
ಇಂದಿರಾಗಾಂಧಿ ತಾಯಿ-ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಇನ್ನಷ್ಟು ಜನರ ಸೇವೆಗೆ ಸಿದ್ಧವಾಗುತ್ತಿವೆ. ಈ ಆಸ್ಪತ್ರೆಗಳಿಗೆ ₹423 ಕೋಟಿ ವೆಚ್ಚ ಮಾಡಲಾಗುತ್ತಿದೆ.
ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್‌ಗೆ ಹೋಗುವುದು ತಪ್ಪುತ್ತಿದೆ.

ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಅಭಿವೃದ್ಧಿಯ ಕ್ರಾಂತಿಯನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು.
ಈ ಭಾಗಕ್ಕೆ 27 ಹೊಸ ರೈಲುಗಳನ್ನು ಮಂಜೂರು ಮಾಡಿಸಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕಲಬುರಗಿ–ವಾಡಿ ಮತ್ತು ಬೀದರ್–ಕಲಬುರಗಿ ಹೊಸ ರೈಲ್ವೆ ಮಾರ್ಗ ಮಾಡಿಸಿದವರು ಖರ್ಗೆಯವರು.
ಬಂಜಾರರನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದಾದ ನಂತರ ಬಂಜಾರರ ಬದುಕು ಗಟ್ಟಿಯಾಗುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು ಕಲ್ಯಾಣ ಕರ್ನಾಟಕ.

ನಮ್ಮ ಕೈಹಿಡಿದ ನಿಮ್ಮನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಪ್ರಮಾಣ ಮಾಡಿದರು.
ಇಲ್ಲಿನ ರಸ್ತೆಗಳ ಸುಧಾರಣೆಗೆ ಕಲ್ಯಾಣಪಥ ಯೋಜನೆ ರೂಪಿಸಿದ್ದೇವೆ. 38 ವಿಧಾನಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿ ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ₹120 ಕೋಟಿ ತೆಗೆದಿರಿಸಿದ್ದೇವೆ.

ಕಲಬುರಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ₹11,770 ಕೋಟಿ ಮೊತ್ತದ ಬೃಹತ್ ಯೋಜನೆಗಳಿಗೆ ನಿರ್ಧಾರ ಮಾಡಲಾಗಿದೆ. 350 KPS ಶಾಲೆಗಳ ನಿರ್ಮಾಣದ ಗುರಿ ಹೊಂದಿದ್ದೇವೆ.
371(ಜೆ)ಯಿಂದ ವೈದ್ಯಕೀಯ ಕ್ಷೇತ್ರದಲ್ಲಿ 10,000ಕ್ಕೂ ಹೆಚ್ಚು ಹಾಗೂ ಇಂಜಿನಿಯರಿಂಗ್‌ನಲ್ಲಿ 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ₹1,797 ಕೋಟಿ ಒದಗಿಸಲಾಗಿದೆ. ಸಣ್ಣ ಕೈಗಾರಿಕೆಗಳಿಗೆ ₹200 ಕೋಟಿ ನೀಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಲಬುರಗಿಯಲ್ಲಿ 120ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಿವೆ.
2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯ ಗುರಿ ಹೊಂದಿದ್ದೇವೆ. ಕಲ್ಯಾಣ ಕರ್ನಾಟಕದ ಕುಡಿಯುವ ನೀರಿನ ಯೋಜನೆಗಳಿಗೆ ₹7,200 ಕೋಟಿ ವಿನಿಯೋಗಿಸಲಾಗುತ್ತಿದೆ.
ಇದೇ ಕಾಂಗ್ರೆಸ್‌ನ ಜನಪರ ಗ್ಯಾರಂಟಿ, ಅಭಿವೃದ್ಧಿಪರ ಗ್ಯಾರಂಟಿ. ನವ ಕರ್ನಾಟಕ, ಸದೃಢ ಕರ್ನಾಟಕ ನಮ್ಮ ಸಂಕಲ್ಪವಾಗಿದೆ. ನಿಮ್ಮ ನೆರವಿಗೆ ಬಂದ ಕಾಂಗ್ರೆಸ್ ಪಕ್ಷವನ್ನು ನೀವು ಮರೆಯಬಾರದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ವರದಿ: ವಿಜಯೀಂದ್ರ ಪಿ.ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಕಲಬುರ್ಗಿ/ಬೆಂಗಳೂರು








