ಪಕ್ಷ ನಿಷ್ಠೆಗೆ ಒಲಿದು ಬಂದ ಪದವಿ|ಹುಬ್ಬಳ್ಳಿ-ಧಾರವಾಡ ಸರ್ವಾಂಗೀಣ ಅಭಿವೃದ್ಧಿಗೆ ಪಣ|ಹುಡಾ ನೂತನ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಪ್ರತಿಜ್ಞೆ
ಸಾಕಷ್ಟು ನಿಬಂಧನೆಗಳು, ಕಾನೂನಿಗಳಿದ್ದರೂ ಸಹ ಅವಳಿನಗರದಲ್ಲಿ ಅಕ್ರಮ ಬಡಾವಣೆಗಳು ತಲೆ ಏತ್ತಿವೆ. ಕಾನೂನಿನ ಪ್ರಕಾರ ಇವುಗಳನ್ನು ತೆರವು ಮಾಡಲು ಹುಡಾಕ್ಕೆ ಅಧಿಕಾರವಿದೆ ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.

ಹುಬ್ಬಳ್ಳಿ: ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇವತ್ತಿನ ಕಾಲದಲ್ಲಿ ಯಾವುದೇ ಅಧಿಕಾರ ಸಿಗದಿದ್ದರೂ ಒಂದೇ ಪಕ್ಷದಲ್ಲಿ ಸತತ 50 ವರುಷಗಳ ಕಾಲ ಪಕ್ಷ ನಿಷ್ಠೆ ಇಟ್ಟುಕೊಂಡು ಬಂದವರು ಸಿಗೋದು ತುಂಬ ವಿರಳ.

ಆದರೆ ಇದಕ್ಕೆ ಅಪವಾದ ಎಂಬಂತೇ ಇದ್ದಾರೇ! ಹಾಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್. ಹಾಗೂ ಧಾರವಾಡದ ಹಿರಿಯ ಕಾಂಗ್ರೆಸ್ ನಾಯಕ ರಾಬರ್ಟ್ ದದ್ದಾಪುರಿ.
ಇಬ್ಬರು ಸತತ 50 ವರುಷಗಳ ಕಾಲ ಕಾಂಗ್ರೆಸ್ ಪಕ್ಷದ ಮಣ್ಣು ಹೊತ್ತು ಬಂದವರು. ರಾಬರ್ಟ್ ದದ್ದಾಪುರಿ ಅವರಿಗೆ ಈಗ ಭರ್ತಿ 69 ವಯಸ್ಸು ಎಂದರೇ ನಂಬಲೇಬೇಕು. ಆದರೆ ಅವರ ಉತ್ಸಾಹ, ಆರೋಗ್ಯ ನೋಡಿದಾಗ ಯುವಕರನ್ನು ಮೀರಿಸುವಂತಹದ್ದು.

ಇವತ್ತಿಗೂ ಕಾಂಗ್ರೆಸ್ ನಾಯಕರು ಬಂದರೇ , ಪ್ರತಿಭಟನೆ ಮಾಡೋದಾದರೇ ರಾಬರ್ಟ್ ದದ್ದಾಪುರಿ ಮುಂದೆ ಇರುತ್ತಾರೆ.
ಇಂತಹ ರಾಬರ್ಟ್ ದದ್ದಾಪುರಿ ಅವರು ಇಂದಿರಾಗಾಂಧಿ, ರಾಜೀವ್ ಗಾಂಧಿ, ಆರ್ ಗುಂಡೂರಾವ್, ಎಸ್.ಬಂಗಾರಪ್ಪ, ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಆಪ್ತ ಒಡನಾಟ ಇಟ್ಟುಕೊಂಡಿದ್ದರು.


ಕಾಂಗ್ರೆಸ್ ಹೈಕಮಾಂಡನಲ್ಲಿ ಆಗ ಪ್ರಭಾವಶಾಲಿಯಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ನೀಲಿಕಣ್ಣಿನ ಹುಡುಗ ಎಂದೇ ಕರೆಯಲ್ಪಡುತ್ತಿದ್ದ ರಾಬರ್ಟ್ ದದ್ದಾಪುರಿ ಅವರಿಗೆ ಆಗಿನ ಕಾಲಕ್ಕೆ ಶಾಸಕ, ಮಂತ್ರಿಯಾಗುವ ಎಲ್ಲ ತಾಕತ್ತು, ಬೆಂಬಲ ಅವರಿಗೆ ಇತ್ತು.

ಆದರೆ ಅವರು ಅಧಿಕಾರಕ್ಕಾಗಿ ಎಂದಿಗೂ ಕೈ ಚಾಚಲೇ ಇಲ್ಲ. ಇಂತಹ ರಾಬರ್ಟ್ ದದ್ದಾಪುರಿ ಅವರ ಪಕ್ಷ ನಿಷ್ಠೆ ಕೊನೆಗೂ ಅವರನ್ನು ಕೈ ಹಿಡಿದಿದೆ.

ರಾಬರ್ಟ್ ದದ್ದಾಪುರಿ ಅವರ ಪಕ್ಷ ನಿಷ್ಠೆಯನ್ನು ಗಮನಿಸಿದ್ದ ಸ್ವತಃ ಸಿಎಂ ಡಿ.ಕೆ.ಶಿವಕುಮಾರ್ ಅವರೇ ಕರೆದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ಈ ಸ್ಥಾನಕ್ಕೆ ನಡೆದಿದ್ದ ಭಾರಿ ಲಾಬಿ, ಒತ್ತಡವನ್ನು ಬದಿಗಿಟ್ಟ ಸಿಎಂ ಡಿ.ಕೆ.ಶಿವಕುಮಾರ್ ಅವರು, ತಮ್ಮ ಆಪ್ತ ಶಿಷ್ಯ ರಾಬರ್ಟ್ ದದ್ದಾಪುರಿ ಅವರನ್ನು ಹುಡಾ ಅಧ್ಯಕ್ಷ ಪದವಿಗೆ ತಂದು ಕೂರಿಸಿದ್ದಾರೆ.



ಸಿಎಂ ಡಿ.ಕೆ.ಶಿವಕುಮಾರ್ ಅವರು ಇಟ್ಟ ವಿಶ್ವಾಸಕ್ಕೆ ಚ್ಯುತಿ ಬರದಂತೇ ಅವಳಿನಗರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಪಣ ತೊಟ್ಟಿರುವ ರಾಬರ್ಟ್ ದದ್ದಾಪುರಿ ಅವರನ್ನು “ನ್ಯೂಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆ”ಯು ಅವರ ಸಂದರ್ಶನ ನಡೆಸಿತು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅವಳಿ ನಗರವನ್ನು ಸುಂದರವನ್ನಾಗಿ ಮಾಡಲು ಹಾಗೂ ಬಡವರಿಗೆ ಸೂರು ಒದಗಿಸಲು ಹಲವು ಬಗೆಯ ಯೋಜನೆಗಳನ್ನು ಹಮ್ಮಿಕೊಂಡಿರುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.
50:50 ಅನುಪಾತದಡಿ|
ಲೇಔಟ್ ನಿರ್ಮಾಣ|
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೊದಲ ಬಾರಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ನಿವೇಶನ ಹಂಚಿಕೆ ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.


ಬಡವರಿಗೆ, ಹಿಂದುಳಿದವರಿಗೆ ಕಡಿಮೆ ದರದಲ್ಲಿ ನಿವೇಶನ ದೊರಕಬೇಕು ಎಂಬ ಗುರಿಯೊಂದಿಗೆ ಈಗಾಗಲೇ 50 ಎಕರೆ ಜಾಗೆಯನ್ನು ಗುರುತಿಸಲಾಗಿದೆ ಎಂದರು.
ಪ್ರಾಧಿಕಾರಕ್ಕೆ ಜಮೀನು ನೀಡುವ ಮಾಲೀಕರು ಹಾಗೂ ಹುಡಾ ಜಂಟಿಯಾಗಿ ಕೈಗೊಳ್ಳಲಿರುವ ಈ ಯೋಜನೆಯಲ್ಲಿ ಭೂಮಿ ನೀಡುವ ಮಾಲೀಕರಿಗೆ ಶೇ50 ರಷ್ಟು ಅಭಿವೃದ್ಧಿಗೊಂಡ ನಿವೇಶನಗಳನ್ನು ನೀಡಲಾಗುತ್ತಿದೆ ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ತಿಳಿಸಿದರು.
ಈಗಾಗಲೇ ಹಲವು ಭೂಮಿ ಮಾಲೀಕರು ಸ್ವಯಂ ಆಗಿ ಬಂದು ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲಿ ಪರಿಸ್ಪರ ಜಂಟಿ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಹೇಳಿದರು.
2003-2005ರಿಂದ
ಬಡವರಿಗೆ ಸೂರು ಸಿಕ್ಕಿಲ್ಲ|
ಕಳೆದ 2003-2005 ರಲ್ಲಿ ತಾವು ಸದಸ್ಯರಾಗಿದ್ದ ಕಾಲದಲ್ಲಿ ಬಡವರಿಗೆ, ಹಿಂದುಳಿದವರಿಗೆ ನಿವೇಶನ ಹಂಚಿಕೆ ಮಾಡಿದ್ದು ಬಿಟ್ಟರೇ, ಆನಂತರ ಹುಡಾದಿಂದ ನಿವೇಶನ ಹಂಚಿಕೆ ಮಾಡಿಲ್ಲ ಎಂದು ರಾಬರ್ಟ್ ದದ್ದಾಪುರಿ ವಿಷಾಧ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಧಾರವಾಡದಲ್ಲಿ ಈಗ ನಿವೇಶನ ಬೆಲೆ ಗಗನಕ್ಕೇರಿದೆ. ಬಡವರು ನಿವೇಶನ ಖರೀಧಿ ಮಾಡುವದನ್ನು ಯೋಚಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.
ಈ ಹಿನ್ನೆಲೆಯಲ್ಲಿ ಕಡಿಮೆ ದರದಲ್ಲಿ ಬಡವರಿಗೆ, ಹಿಂದುಳಿದವರಿಗೆ ನಿವೇಶನ ದೊರಕಿಸಿಕೊಡುವುದು ತಮ್ಮ ಮೊದಲ ಆದ್ಯತೆ ಆಗಲಿದೆ ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.
ಸರ್ಕಲ್ ಅಭಿವೃದ್ಧಿಗೆ ಕಾಯಕಲ್ಪ|
ಹುಡಾದಿಂದ ಹೊಸ ಯೋಜನೆ|
ಬೆಂಗಳೂರು ಮಾದರಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಸರ್ಕಲ್ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ ಎಂದು ಹುಡಾ ಅದ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.
ಅವಳಿನಗರಗಳಲ್ಲಿನ ಪ್ರಮುಖ ವೃತ್ತಗಳು ಸರಿಯಾದ ರೀತಿಯಲ್ಲಿ ಉಸ್ತುವಾರಿ ಮಾಡದ ಕಾರಣ ನಗರ ಸೌಂದರ್ಯೀಕರಣ ಹಾಳಾಗುವಂತೇ ಮಾಡಿದೆ.
ಪ್ರಮುಖ ವೃತ್ತಗಳ ಮೂಲೆಗಳು ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿವೆ.
ಶಾಸಕರ ಹಾಗೂ ಪ್ರಾಧಿಕಾರದ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ 20 ಸರ್ಕಲ್ಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಲಕ್ಷ ಸಸಿ ನೆಡುವ ಕಾರ್ಯಕ್ರಮ|
ಖಾಸಗಿ ಬಡಾವಣೆಗಳಲ್ಲಿ ಕಡ್ಡಾಯ|
ಅವಳಿನಗರವನ್ನು ಇನ್ನು ಹೆಚ್ಚಿನ ಹಸಿರೀಕರಣ ಮಾಡುವ ಉದ್ದೇಶದಿಂದ ಲಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ಹುಡಾ ವತಿಯಿಂದ ನಡೆಸಲಾಗುವುದು ಎಂದು ಅಧ್ಯಕ್ಷ ರಾಬರ್ಟ್ ದದ್ದಾಪುರಿ ತಿಳಿಸಿದರು.
ಹುಡಾದಿಂದ ಅನುಮೋದಿತಗೊಳ್ಳುವ ಎಲ್ಲ ಖಾಸಗಿ ಲೇಔಟ್ಗಳಲ್ಲಿ ರಸ್ತೆ ಬದಿ ಸಸಿ ನೆಡುವದನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಇರುವ ಪ್ರಾಧಿಕಾರದ ಬಡಾವಣೆಗಳಲ್ಲಿ ಸಸಿ ನೆಡವುದು ಸೇರಿದಂತೇ ಖಾಸಗಿ ಬಡವಾಣೆಗಳ ನಿವಾಸಿಗಳು ಪ್ರಸ್ತಾವನೆ ಸಲ್ಲಿಸಿದಲ್ಲಿ ಅಲ್ಲಿಯು ಸಹ ಹುಡಾದಿಂದ ಉಚಿತವಾಗಿ ಸಸಿ ನೆಡಲಾಗುವದು ಎಂದರು.
ಈ ಸಸಿ ನೆಡುವ ಯೋಜನೆಗೆ ಕೆಲ ಎನ್ಜಿಒ ದವರು ಸಹಾಯ ಮಾಡುವದಾಗಿ ಮುಂದೆ ಬಂದಿದ್ದಾರೆ. ಸಸಿ ನೆಟ್ಟ ಬಳಿಕ ಅದರ ಉಸ್ತುವಾರಿಯನ್ನು ನೋಡಿಕೊಳ್ಳುವದಾಗಿ ಹೇಳಿದ್ದಾರೆ.
ಕುಸುಗಲ್ನಲ್ಲಿ ಕೆರೆ ಅಭಿವೃದ್ಧಿ|
ವಾಕಿಂಗ್ ಪಾಥ್, ವಿವಿಧ ಅಭಿವೃದ್ಧಿ|
3ಕೋಟಿ ಅನುದಾನ ಮಂಜೂರು|
ನವಲಗುಂದ ಶಾಸಕ ಎನ್.ಹೆಚ್.ಕೋನರೆಡ್ಡಿ ಅವರ ಪ್ರಯತ್ನದ ಫಲವಾಗಿ ಕುಸುಗಲ್ ಗ್ರಾಮದಲ್ಲಿ ಹೂಳು ತುಂಬಿರುವ ಕೆರೆ ಅಭಿವೃದ್ಧಿ ಮಾಡಲು 3 ಕೋಟಿರೂ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.

10 ಎಕರೆ ವ್ಯಾಪ್ತಿಯಲ್ಲಿ ವಾಕಿಂಗ್ ಪಾಥ್ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಶೀಘ್ರದಲ್ಲೇ ಇಲ್ಲಿ ಅಭಿವೃದ್ಧಿಕಾರ್ಯ ಆರಂಭಗೊಳ್ಳಲಿದೆ ಎಂದು ಹೇಳಿದರು.
ಸ್ಮಶಾನಗಳಲ್ಲಿ ಹೈಮಾಸ್ಕ್|
ರಾತ್ರಿಯಾದರೇ ಸಾಕು! ಕೆಲವು ಸ್ಮಶಾನಗಳಲ್ಲಿ ಪುಂಡ ಪೋಕರು ಇಸ್ಪೀಟ್ ಆಡುವದು, ಶೆರೆ ಕುಡಿಯುವುದು ಮಾಡುತ್ತಿರುವದು ಈ ಹಿಂದಿನಿಂದ ಆರೋಪ ಕೇಳಿ ಬಂದಿದ್ದವು.
2003-05ರಲ್ಲಿ ತಾವು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದ ಅವಧೀಯಲ್ಲಿ ಸ್ಮಶಾನಗಳಲ್ಲಿ ಹೈಮಾಸ್ಕ್ ಆಳವಡಿಸಿದ್ದರ ಪರಿಣಾಮ, ರಾತ್ರಿ ಹೊತ್ತಿನ ಅಕ್ರಮ ಚಟುವಟಿಕೆಗಳು ನಿಲ್ಲುವಂತಾಗಿತ್ತು ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.
ಈಗಲೂ ಕೆಲ ಸ್ಮಶಾನಗಳಲ್ಲಿ ಸರಿಯಾದ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ, ಅಕ್ರಮ ಚಟುವಟಿಕೆಗಳು ಮುಂದುವರೆದಿರುವ ಬಗ್ಗೆ ದೂರುಗಳು ಇವೆ.
ಈ ಹಿನ್ನೆಲೆಯಲ್ಲಿ ಗುರುತಿಸಲಾದ ಸ್ಮಶಾನಗಳಲ್ಲಿ ಹೈಮಾಸ್ಕ್ ಆಳವಡಿಸಲಾಗುವುದು ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ತಿಳಿಸಿದರು.
ಇನ್ನು ಹುಬ್ಬಳ್ಳಿ ಹಾಗೂ ಧಾರವಾಡಕ್ಕೆ ಪ್ರವೇಶಿಸುದ ಮಾರ್ಗದಲ್ಲಿ ಬೃಹತ್ ಗಾತ್ರದ ಸ್ವಾಗತ ಕಮಾನುಗಳನ್ನು ಹುಡಾದಿಂದ ಆಳವಡಿಸಲಾಗವುದು ಎಂದು ಹೇಳಿದರು.
ಅಕ್ರಮ ಬಡಾವಣೆಗಳಿಗೆ|
ಕಾನೂನಿನ ಸ್ಪರ್ಶ|
ಸಾಕಷ್ಟು ನಿಬಂಧನೆಗಳು, ಕಾನೂನಿಗಳಿದ್ದರೂ ಸಹ ಅವಳಿನಗರದಲ್ಲಿ ಅಕ್ರಮ ಬಡಾವಣೆಗಳು ತಲೆ ಏತ್ತಿವೆ. ಕಾನೂನಿನ ಪ್ರಕಾರ ಇವುಗಳನ್ನು ತೆರವು ಮಾಡಲು ಹುಡಾಕ್ಕೆ ಅಧಿಕಾರವಿದೆ ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.
ಆದರೆ ಈಗಾಗಲೇ ಮನೆ ಕಟ್ಟಿಕೊಂಡು ವಾಸ ಮಾಡಿರುವ ಜನರ ಹಿತದೃಷ್ಟಿ ಸಹ ನೋಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನುಬದ್ದವಾಗಿ , ಕಾನೂನಿನ ಚೌಕಟ್ಟಿನೊಳಗೆ ಸಕ್ರಮ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವದಾಗಿ ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.
ಆದರೆ ಭವಿಷ್ಯದಲ್ಲಿ ಅಕ್ರಮ ಬಡಾವಣೆ ಮಾಡುವವರ ವಿರುದ್ದ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವದಾಗಿ ಅವರು ಎಚ್ಚರಿಕೆ ನೀಡಿದರು.
ಸಂದರ್ಶನ: ವಿಜಯೀಂದ್ರ.ಪಿ.ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.
ಮುಂದಿನ ಸಂಚಿಕೆಯಲ್ಲಿ: ಹುಡಾದಲ್ಲಿ ನಡೆದಿರುವ ಹಗಲು ದರೋಡೆ, ಅಧಿಕಾರಿಗಳ ಭ್ರಷ್ಟಾಚಾರ, ರಿಯಲ್ ಎಸ್ಟೇಟ್ ಮಾಫಿಯಾದ ಬಗ್ಗೆ ರಾಬರ್ಟ್ ದದ್ದಾಪುರಿ ಹೇಳೋದೇನು? ನಿರೀಕ್ಷಿಸಿ…

ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ ವಿಡಿಯೋ ತುಣಕು..







