ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿ| ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಿಂದ ಆಯೋಜನೆ|ಪ್ರೌಢಶಾಲೆಗಳ 100 ಕ್ಕೂ ಹೆಚ್ಚು ತಂಡ ಭಾಗಿ-ಕೊಳಿಗೆ ವಾಸಪ್ಪಗೌಡ
ಚುಂಚಾದ್ರಿ ಕಪ್ ವಾಲಿಬಾಲ್ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮವು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಲಿದೆ.

ಶಿವಮೊಗ್ಗ: ಇಲ್ಲಿಯ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ವಾಲಿಬಾಲ್ ಸಂಸ್ಥೆ ಸಹಯೋಗದಲ್ಲಿ 80 ನೇ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 13 ,14 ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಕೊಳಿಗೆ ವಾಸಪ್ಪಗೌಡರು ತಿಳಿಸಿದರು.

ಸೋಮವಾರದಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ವಿದ್ಯಾಸಂಸ್ಥೆ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಯೋಗ್ಯ ಮಾರ್ಗದರ್ಶನ ತರಬೇತಿ ನೀಡುವ ಪ್ರಯತ್ನದ ಭಾಗವಾಗಿ ಶಿವಮೊಗ್ಗದಲ್ಲಿ ಚುಂಚಾದ್ರಿ ಕಪ್ ಹೆಸರಿನಲ್ಲಿ 24 ನೇ ವರ್ಷದ ವಾಲೀಬಾಲ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ವಿದ್ಯಾಸಂಸ್ಥೆಯಿಂದ ಕ್ರೀಡೆಯಲ್ಲಿ ಉತ್ತಮ ತರಬೇತಿ ನೀಡಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಬೆಳೆಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಚುಂಚಾದ್ರಿ ಕಪ್ ವಾಲಿಬಾಲ್ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮವು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಲಿದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ, ನಾದಮಯಾನಂದನಾಥ ಸ್ವಾಮೀಜಿ ಉಪಸ್ಥಿತರಿರುವರು.
ಚುಂಚಾದ್ರಿ ಕಪ್ ಪಂದ್ಯಾವಳಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ನುರಿತ ವಾಲಿಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆಂದು ಅವರು ತಿಳಿಸಿದರು.
ಪ್ರಾಂಶುಪಾಲೆ ದಿವ್ಯ ಕರಣಂ ಮಾತನಾಡಿ, ಪಂದ್ಯಾವಳಿಯಲ್ಲಿ ಪ್ರತಿ ವರ್ಷ ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲೆಗಳಿಂದ 65 ಬಾಲಕರ ತಂಡಗಳು, 35 ಬಾಲಕಿಯರ ತಂಡಗಳು ಭಾಗವಹಿಸಿ ಅದ್ಭುತ ಪ್ರದರ್ಶನ ನೀಡುತ್ತಿವೆ.
ಈ ಬಾರಿ ಜಿಲ್ಲೆಯ ವಿವಿಧ ಶಾಲೆಗಳ 100 ತಂಡಗಳು ಭಾಗಿಯಾಗುತ್ತಿದ್ದು, ಒಟ್ಟು 8 ಅಂಕಣಗಳಲ್ಲಿ ಸ್ಥರ್ಧೆ ನಡೆಯಲಿದೆ ಎಂದು ತಿಳಿಸಿದರು.
ಅತ್ಯುತ್ತಮ ಆಟ ಪ್ರದರ್ಶಿಸಿದ ಬಾಲಕ, ಬಾಲಕಿಯರಿಗೆ “ಬೆಸ್ಟ್ ಅಟ್ಯಾಕರ್,ಬೆಸ್ಟ್ ಬೂಸ್ಟರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಲೀಬ್ರೋ, ಬೆಸ್ಟ್ ಸೆಂಟರ್ ಬ್ಲಾಕರ್ ” ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪಂದ್ಯಾವಳಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 5 ಸಾವಿರ ನಗದು ಮತ್ತು ಪಾರಿತೋಷಕ, ಎರಡು ಮೂರನೇ ಸ್ಥಾನ ವಿಜೇತರಿಗೆ ಕ್ರಮವಾಗಿ 4, ಮತ್ತು 3 ಸಾವಿರ ನಗದು ಬಹುಮಾನಗಳನ್ನು ನೀಡಲಾಗುತ್ತಿದೆ.
ನಾಲ್ಕನೇ ಸ್ಥಾನ ಪಡೆದ ಬಾಲಕಿಯರ ತಂಡಕ್ಕೆ 2 ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಈ ಪಂದ್ಯಾವಳಿಯು ಆರಂಭವಾದಾಗಿನಿಂದ ಪ್ರತಿವರ್ಷವೂ ಶಿವಮೊಗ್ಗ ಜಿಲ್ಲೆಯ 20 ರಿಂದ 25 ವಾಲಿಬಾಲ್ ಕ್ರೀಡಾಪಟು ಕರ್ನಾಟಕ ರಾಜ್ಯ ಮತ್ತು ಭಾರತ ತಂಡವನ್ನು ಪ್ರತಿನಿಧಿಸಿ ಶಿವಮೊಗ್ಗ ಜಿಲ್ಲೆಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆಂದು ಹೆಮ್ಮೆ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾಪಟುಗಳಿಗೂ ವಸತಿ ಹಾಗೂ ಊಟದ ವ್ಯವಸ್ಥೆಯನ್ನೂ,ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
17 ವರ್ಷದೊಳಗಿನ ವಯೋಮಿತಿಯ ಕ್ರೀಡಾಪಟುಗಳು ಪ್ರೌಢಶಾಲಾ ತಂಡಗಳು ಭಾಗವಹಿಸಬಹುದಾಗಿದ್ದು ಚುಂಚಾದ್ರಿ ಕಪ್ ಯಶಸ್ವಿಯಾಗಿಸಲು ಕೋರಿದರು.
ಆ. 14 ರಂದು ರಸ್ತೆ ಓಟದ ಸ್ಪರ್ಧೆ|
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಚುಂಚಾದ್ರಿ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲೆಯ ಬಾಲಕ ಬಾಲಕಿಯರಿಗಾಗಿ ಆ.14 ರಂದು ಓಟದ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಥಳದಲ್ಲಿಯೇ ನೊಂದಣಿ ಮಾಡಿಕೊಳ್ಳಬಹುದು. ನೆಹರೂ ಕ್ರೀಡಾಂಗಣದಿಂದ ಆರಂಭವಾಗಿ ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಆವರಣದಲ್ಲಿ ಕೊನೆಗೊಳ್ಳಲಿದೆ ಎಂದು ಪ್ರಾಂಶುಪಾಲೆ ದಿವ್ಯ ತಿಳಿಸಿದರು.
ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಜಿ ಕಾಮತ್,ಕಾರ್ಯದರ್ಶಿ ಕೆ. ಎಸ್. ಶಶಿ, ಆದಿಚುಂಚನಗಿರಿ ಸಂಸ್ಥೆಯ ಪ್ರಾಂಶುಪಾಲರಾದ ಸುರೇಶ್ ಎಸ್. , ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಖಜಾಂಚಿ, ಉದಯ್, ಚಾಲೆಂಜರ್ಸ್ ಕ್ಲಬ್ ನ ಅಶೋಕ್, ಕೆ. ಜಿ. ಮಠಪತಿ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







