“ಶಿವಸಂಕಲ್ಪ” ಸಂಘಟನೆ ಬೆಂಬಲಕ್ಕೆ ನಿಂತ ಈಶ್ವರಪ್ಪ|ಸಮಾಜದ ವಿಚಾರದಲ್ಲಿ ತಲೆ ಹಾಕಬೇಡಿ ಎಂದ ಆಯನೂರು ಮಂಜುನಾಥ್|ಹಿಂದೂ ಸಮಾಜ ಒಗ್ಗೂಡಿಸುವ ಕೆಲಸ ಮಾಡಿದ್ದೇವೆ-ಕೆ.ಇ.ಕಾಂತೇಶ್
ವೀರಶೈವ ಲಿಂಗಾಯತ ಸಮಾಜದ ವಿಷಯದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಬಹಿರಂಗವಾಗಿ ಮಧ್ಯ ಪ್ರವೇಶ ಮಾಡುತ್ತಿರುವದನ್ನು ಚರ್ಚಿಸುವ ಉದ್ದೇಶದಿಂದ ಶನಿವಾರದಂದು ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ವೀರಶೈವ ಕಲ್ಯಾಣ ಮಂದಿರದಲ್ಲಿ ಸಭೆ ಸೇರಿದ್ದರು.

ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ದ ವೀರಶೈವ ಲಿಂಗಾಯತ ಸಮಾಜದ ಒಂದು ಗುಂಪು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ನಮ್ಮ ಸಮಾಜದಲ್ಲಿ ನಿಮ್ಮದೇನು ಕೆಲಸ ಎಂದು ಪ್ರಶ್ನೆ ಮಾಡಿದೆ.
ನಿಮ್ಮಲ್ಲಿನ ಒಡಕು ಸರಿಪಡಿಸಿಕೊಳ್ಳಿ ನಮ್ಮ ಸಮಾಜದ ವಿಷಯಕ್ಕೆ ಬರಬೇಡಿ ಎಂದು ವೀರಶೈವ ಲಿಂಗಾಯತ ಸಮಾಜದ ಒಂದು ಗುಂಪು ಕೆ.ಎಸ್.ಈಶ್ವರಪ್ಪನವರಿಗೆ ನೇರವಾಗಿ ತಾಕೀತು ಮಾಡಿದೆ.
ಶಿವಸಂಕಲ್ಪದ ಬೆಂಬಲಕ್ಕೆ ನಿಂತ ಈಶ್ವರಪ್ಪ!
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ “ಶಿವಸಂಕಲ್ಪ” ಹೆಸರಿನಲ್ಲಿ ವೀರಶೈವ ಲಿಂಗಾಯತ ಒಕ್ಕೂಟವೊಂದು ಅಸ್ತಿತ್ವಕ್ಕೆ ಬಂದಿದೆ. ಕಳೆದ ಮಂಗಳವಾರದಂದು ಬೃಹತ್ ಸಮಾವೇಶ ನಡೆಸುವ ಮೂಲಕ “ಶಿವಸಂಕಲ್ಪ” ಸಂಘಟನೆಯನ್ನು ಉದ್ಘಾಟಿಸಲಾಯಿತು.

ಮೂರುಸಾವಿರ ಮಠದ ಡಾ.ಗುರುಸಿದ್ದರಾಜಯೋಗಿಂದ್ರ ಶ್ರೀಗಳು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಈ “ಶಿವಸಂಕಲ್ಪ” ಸಂಘಟನೆ ಬೆಂಬಲಕ್ಕೆ ನಿಂತಿದ್ದೇ ಈಗ ವಿವಾದಕ್ಕೆ ಕಾರಣವಾಗಿದೆ.

ಇನ್ನು “ಶಿವಸಂಕಲ್ಪ” ರಚನೆಯಿಂದ ಹಿಡಿದು ಉದ್ಘಾಟನೆ ತನಕ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಫೋಟೋ ರಾರಾಜಿಸಿದ್ದು ಹಲವು ಉಹಾಪೋಹಗಳು, ಮಾತುಗಳು ಆಗಲೇ ಕೇಳಿಬಂದಿದ್ದವು.
ನಮ್ಮ ಸಮಾಜದಲ್ಲಿ ನಿಮ್ಮದೇನು ಕೆಲಸ?
ಈಶ್ವರಪ್ಪ ವಿರುದ್ದ ಅಸಮಾಧಾನ!

ವೀರಶೈವ ಲಿಂಗಾಯತ ಸಮಾಜದ ವಿಷಯದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಬಹಿರಂಗವಾಗಿ ಮಧ್ಯ ಪ್ರವೇಶ ಮಾಡುತ್ತಿರುವುದನ್ನು ಚರ್ಚಿಸುವ ಉದ್ದೇಶದಿಂದ ಶನಿವಾರದಂದು ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ವೀರಶೈವ ಕಲ್ಯಾಣ ಮಂದಿರದಲ್ಲಿ ಸಭೆ ಸೇರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ರಾಜಕೀಯಕ್ಕಾಗಿ ನಮ್ಮ ಸಮಾಜದ ವಿಷಯದಲ್ಲಿ ಕೆ.ಎಸ್.ಈಶ್ವರಪ್ಪ ತಲೆ ಹಾಕುತ್ತಿರುವದನ್ನು ತೀವ್ರವಾಗಿ ಖಂಡಿಸಿದರು.

ನಮ್ಮ ಸಮಾಜದ ಒಳಪಂಗಡಗಳನ್ನು ಒಗ್ಗೂಡಿಸುವ ಕೆಲಸ ನಾವು ಮಾಡುತ್ತೇವೆ. ನಿಮ್ಮಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಹೇಳಿದರು.
ಪಂಚಪೀಠದ ಶ್ರೀಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೇ ಸಂತೋಷವಾಗುತ್ತದೇ ಎನ್ನುವ ಈಶ್ವರಪ್ಪನವರೇ ನಿಮ್ಮಲ್ಲಿ ಇರುವ ನ್ಯೂನ್ಯತೆಗಳನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಹೇಳಿದರು.
ನಮ್ಮ ಸಮಾಜದ ಕೆಲವು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ನಿಮಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದರು.
ಸಮಾಜದ ಬಗ್ಗೆ ಗೌರವ ಇದ್ದರೇ?
ಯಡಿಯೂರಪ್ಪ ವಿರುದ್ದ ನಿಂತಿದ್ದು ಯಾಕೆ?
ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಭಾರಿ ಗೌರವ ಇದೆ ಎಂದು ಹೇಳಿಕೊಳ್ಳುವ ಈಶ್ವರಪ್ಪನವರು, ಈ ಹಿಂದೆ ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಿದ್ದುಕೊಂಡೆ, ರಾಯಣ್ಣ ಬ್ರಿಗೇಡ್ ಕಟ್ಟಿದ್ದು ಯಾಕೆ? ಹಿಂದುಳಿದವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದು ಯಾಕೆ? ಎಂದು ಆಯನೂರು ಮಂಜುನಾಥ್ ಇದೇ ವೇಳೆ ಪ್ರಶ್ನಿಸಿದರು.
ಅನುಮತಿ ಇಲ್ಲದೇ ಆಮಂತ್ರಣ ಪತ್ರಿಕೆಯಲ್ಲಿ ರುದ್ರೇಗೌಡರ ಹೆಸರು?
“ಶಿವಸಂಕಲ್ಪ” ಸಂಘಟನೆಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಕಟಗೊಂಡಿದ್ದು ತಮಗೆ ಗೊತ್ತೇ ಇರಲಿಲ್ಲ. ಈ ಕುರಿತು ತಾವು ವಿರೋಧ ವ್ಯಕ್ತಪಡಿಸಿದ್ದೆನೆ ಎಂದು ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡರು ಹೇಳಿದರು.

ಕೆಲವರ ಸ್ವಹಿತಾಸಕ್ತಿಗಾಗಿ ಸಮಾಜದ ಹಿತವನ್ನು ಬಲಿಕೊಡುವುದು ಸರಿಯಲ್ಲ. ಧರ್ಮದಲ್ಲಿ ರಾಜಕೀಯ ಬೆರೆಸಬಾರದು. ಮುಂದಿನ ಪೀಳಿಗೆಗಾಗಿ ಸಮಾಜವನ್ನು ಬಲಿಷ್ಠವಾಗಿ ಕಟ್ಟುವಂತಹ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈಶ್ವರಪ್ಪನವರನ್ನು ರಾಜಕೀಯವಾಗಿ ಬೆಳೆಸಿದ್ದು ಯಾರು?
ವೀರಶೈವ ಲಿಂಗಾಯತ ಸಮಾಜದ ಪ್ರಮುಖರ ಸಭೆಯಲ್ಲಿ “ಶಿವಸಂಕಲ್ಪ” ಸಂಘಟನೆ ರಚನೆ ಬಗ್ಗೆ ಪರ ಹಾಗು ವಿರೋಧದ ಮಾತುಗಳು ಕೇಳಿ ಬಂದವು.
ಸಮಾಜದ ಹಲವು ಪ್ರಮುಖರು “ಶಿವಸಂಕಲ್ಪ”ದ ಸಮಾವೇಶದ ಅಗತ್ಯತೆ ಬಗ್ಗೆ, ಇನ್ನು ಆ ಸಂಘಟನೆಯಿಂದ ನಮಗೆ ಯಾವ ತೊಂದರೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿನ ಯಾವ ಮುಖಂಡರು ಕರೆದರೂ ನಾವು ಹೋಗುತ್ತೇವೆ ಎಂದು ಕೆಲವರು ತಮ್ಮ ಅನಸಿಕೆ ಹಂಚಿಕೊಂಡರು.
ಇನ್ನು “ಶಿವಸಂಕಲ್ಪ”ಸಮಾವೇಶದಲ್ಲಿ ಭಾಗವಹಿಸಿದ್ದ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಸಮಾಜದ ಅಧ್ಯಕ್ಷನಾಗಿರುವದರಿಂದ ಎಲ್ಲರೊಂದಿಗೆ ಬೆರೆಯಬೇಕಾಗುತ್ತದೆ.
ಈ ಹಿಂದೆ ಸಮಾಜದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ತಾವು “ಶಿವಸಂಕಲ್ಪ” ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವದು ಬೇಡ ಎಂದರು.
ಅಷ್ಟಕ್ಕೂ ಈಶ್ವರಪ್ಪನವರನ್ನು ರಾಜಕೀಯವಾಗಿ ಬೆಳೆಸಿದ್ದು ಯಾರು ಎಂಬುದನ್ನು ಎಲ್ಲರೂ ಒಮ್ಮೆ ಅವಲೋಕನ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಸಮಾಜದ ಮುಖಂಡರಿಗೆ ಪ್ರಶ್ನಿಸಿದರು ಎನ್ನಲಾಗಿದೆ.
ತಪ್ಪು ಹುಡುಕುವುದು ಬೇಡ-ಕೆ.ಇ.ಕಾಂತೇಶ್|
ಹಿಂದೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ನಾವು ಕೆಲಸ ಮಾಡುತ್ತಿದ್ದೇವೆ ಹೊರತು ಬೇರೆ ಉದ್ದೇಶಕ್ಕಲ್ಲ ಎಂದು ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಇ.ಕಾಂತೇಶ್ ಹೇಳಿದ್ದಾರೆ.

ಭಾನುವಾರದಂದು “ನ್ಯೂ ಇಂಡಿಯಾ ಕನ್ನಡ”ದೊಂದಿಗೆ ಮಾತನಾಡಿದ ಅವರು, “ಶಿವಸಂಕಲ್ಪ” ಸಂಘಟನೆ ರಚನೆ ವಿಷಯದಲ್ಲಿ ತಪ್ಪು ಹುಡುಕುವ ಕೆಲಸ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.
ಒಟ್ಟಾರೇ, “ಶಿವಸಂಕಲ್ಪ” ಸಂಘಟನೆ ಅಸ್ತಿತ್ವಕ್ಕೆ ಬಂದ ನಂತರ ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಸಮಾಜದಲ್ಲಿ ಪರ ವಿರೋಧ ವಿಚಾರಗಳು ಮುನ್ನೆಲೆಗೆ ಬರುವಂತೆ ಮಾಡಿದೆ.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪನವರು ಪಾತ್ರದ ಬಗ್ಗೆ ಈಗ ಬಹಿರಂಗವಾಗಿ ಸಮಾಜ ಮುಖಂಡರ ಸಭೆ ನಡೆಸಿ ಚರ್ಚೆ ನಡೆಸಿದ್ದು ಹೊಸ ಬೆಳವಣಿಗೆಗೆ ಕಾರಣವಂತೂ ಆಗಲಿದೆ.
ವೀರಶೈವ ಲಿಂಗಾಯತರ ಪ್ರಮುಖರ ಸಭೆಯಲ್ಲಿ ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಬಳ್ಳೆಕೆರೆ ಸಂತೋಷ್, ಸುಜಾತಾ, ಎಸ್.ಪಿ.ದಿನೇಶ್,ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ವೈ.ಹೆಚ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ವಿಶೇಷ ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







