DistrictEducationShivamogga

ಶಿವಮೊಗ್ಗ: ನೀಟ್ ಮರು ಪರೀಕ್ಷೆ ಹಿನ್ನೆಲೆ|ಜಿಲ್ಲಾಡಳಿತದಿಂದ ಸಕಲ ಸಿದ್ದತೆ, ಬಿಗಿ ಕ್ರಮ|ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಒಟ್ಟು 4832 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಶಿವಮೊಗ್ಗ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಮರುಪರೀಕ್ಷೆಯನ್ನು ಜೂನ್ 21 ರಂದು ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆ ಹಾಗೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ.‌

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಒಟ್ಟು 4832 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಪರೀಕ್ಷೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಭದ್ರತೆ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಇನ್ನು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೇ ಡ್ಯೂಟಿ ಮ್ಯಾಜಿಸ್ಟ್ರೇಟ್‌ರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಯಲಾಗಿದ್ದು, ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.

ನಗರದ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪಾರದರ್ಶಕ ನೀರಿನ ಬಾಟಲಿಗಳನ್ನು ತರಲು ಅನುಮತಿಸಲಾಗಿದೆ ಎಂದರು.

ಪರೀಕ್ಷೆಯ ಸುರಕ್ಷತೆಗಾಗಿ ದೆಹಲಿ ಹೈಕೋರ್ಟ್ ದೇಶಾದ್ಯಂತ ಟೆಲಿಗ್ರಾಮ್ ಆ್ಯಪ್‌ಗೆ ತಾತ್ಕಾಲಿಕ ನಿಷೇಧವನ್ನು ಎತ್ತಿಹಿಡಿದಿದೆ. ನಕಲಿ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ.

ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಡ್ಯೂಟಿ ಮ್ಯಾಜಿಸ್ಟ್ರೇಟ್ ರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಯಲಾಗಿದ್ದು, ಸೂಕ್ತ ಭದ್ರತೆ ನೀಡುವಂತೆ ಜಿಲ್ಲಾಡಳಿತ ಕೋರಿದೆ.

ಪರೀಕ್ಷಾ ಕಾರ್ಯಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಪರೀಕ್ಷಾ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಲು ಮತ್ತು ಪರೀಕ್ಷಾ ದಿನದಂದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30 ಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದರು. ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಡಚಣೆಯಿಲ್ಲದೆ ನಿರಂತರ ವಿದ್ಯುತ್ ಪೂರೈಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಪುಸ್ತಕ, ಬ್ಯಾಗ್, ಪರ್ಸ್, ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಸ್ಮಾರ್ಟ್ ವಾಚ್‌ಗಳು, ಪೆನ್, ಪೆನ್ಸಿಲ್ ಸೇರಿದಂತೆ ಮಾರ್ಗಸೂಚಿಯನ್ವಯ ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ನಿಯೋಜಿತ ಸಿಬ್ಬಂದಿ ಮಾತ್ರ ಹಾಜರಿರಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ವಿಕಲಚೇತನ ಅಭ್ಯರ್ಥಿಗಳಿಗೆ ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು ಒಂದು ಗಂಟೆ ಹೆಚ್ಚಿನ ಸಮಯಾವಕಾಶ ನೀಡಲಾಗಿದೆ ಎಂದು ಡಿಸಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಅಭ್ಯರ್ಥಿಗಳು, ಪರೀಕ್ಷೆ ನಿಯೋಜಿತ ಅಧಿಕಾರಿ, ನೌಕರರು ಪರೀಕ್ಷೆಗೆ ಹಾಜರಾಗಬೇಕಾದ ಸಮಯ, ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.

ಅಭ್ಯರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಯ ವಸ್ತುಗಳನ್ನು ಅಥವಾ ಆಭರಣಗಳನ್ನು ಧರಿಸಲು ಅನುಮತಿಯಿದೆ. ಆದರೆ, ತಪಾಸಣೆಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಕ್ಕೆ ಸಾಕಷ್ಟು ಮುಂಚಿತವಾಗಿಯೇ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

NEET (UG)-2026 ಗೆ ಸಂಬಂಧಿಸಿದ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ, ಅಭ್ಯರ್ಥಿಗಳು ದೂರವಾಣಿ ಸಂಖ್ಯೆ: 011-40759000 / 011-69227700 ಅಥವಾ ಇಮೇಲ್ neetug2026@nta.ac.in ಮೂಲಕ ಸಂಪರ್ಕಿಸಬಹುದಾಗಿದೆ.

ಸಭೆಯಲ್ಲಿ ಡಿಡಿಪಿಯು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಐಎಸ್‌ಎಫ್ ಅಧಿಕಾರಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಹಾಜರಿದ್ದರು.

Follow Us

Leave a Reply

Your email address will not be published. Required fields are marked *

Back to top button