DharwadDistrict

ಕಾನೂನು,ಶಿಕ್ಷಣ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಆಳವಡಿಕೆ ಅಗತ್ಯ|ಶೈಕ್ಷಣಿಕ ಸುಧಾರಣೆಗೆ ಕವಿವಿ ಮುಂದಾಗಬೇಕು-ನ್ಯಾ.ಚಂದ್ರಶೇಖರ್‌ ಜೋಶಿ

ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಆಳವಡಿಸಿಕೊಳ್ಳಬೇಕಿದೆ. ಕ್ರಾಂತಿಕಾರಿ ಬದಲಾವಣೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯವು ಮಹತ್ವದ ಜವಾಬ್ದಾರಿಯನ್ನು ಹೊರಬೇಕಿದೆ ಎಂದು ನ್ಯಾ.ಚಂದ್ರಶೇಖರ್‌ ಜೋಶಿ ಹೇಳಿದರು.

ಧಾರವಾಡ: ವಕೀಲರ ವೃತ್ತಿಯು ಪವಿತ್ರ ಹಾಗೂ ಜವಾಬ್ದಾರಿಯುತ ಕರ್ತವ್ಯವಾಗಿದೆ. ಸ್ವಾತಂತ್ರ್ಯದ ನಂತರ ಸಂವಿಧಾನ ರಚಿಸುವಲ್ಲಿ ವಕೀಲರ ಪಾತ್ರವು ಮುಖ್ಯವಾಗಿತ್ತು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಚಂದ್ರಶೇಖರ ಜೋಶಿ ಹೇಳಿದರು.

ಧಾರವಾಡದ ಸರ್‌ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದ ಮಂಚೂಣಿ ನಾಯಕರಲ್ಲಿ ಬಹುತೇಕ ವಕೀಲರೇ ಮುಂದಾಳತ್ವ ವಹಿಸಿದ್ದು ಗಮನಾರ್ಹ ಸಂಗತಿ ಎಂದು ಹೇಳಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಸಹ ವಕೀಲರೇ ಆಗಿದ್ದರು ಎಂಬುದನ್ನು ಈಗಿನ ವಿದ್ಯಾರ್ಥಿ ಸಮುದಾಯವು ಗಮನಿಸಬೇಕು ಎಂದರು.

ಇಂದಿನ ದಿನಮಾನದ ಬದಲಾವಣೆ ಹಾಗೂ ಬೆಳವಣಿಗೆಗಳಿಗೆ ಪೈಪೋಟಿ ನೀಡುವಲ್ಲಿ ವಿದ್ಯಾರ್ಥಿಗಳು ಪ್ರವರ್ಧಮಾನಗಳಿಗೆ ಒಗ್ಗಿ ಕಾರ್ಯನಿರ್ವಹಿಸಬೇಕಿದೆ ಎಂದು ನ್ಯಾಯಮೂರ್ತಿ ಚಂದ್ರಶೇಖರ ಜೋಶಿ ಕಿವಿಮಾತು ಹೇಳಿದರು.

ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಆಳವಡಿಸಿಕೊಳ್ಳಬೇಕಿದೆ. ಈ ಎಲ್ಲ ಕ್ರಾಂತಿಕಾರಿ ಬದಲಾವಣೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯವು ಮಹತ್ವದ ಜವಾಬ್ದಾರಿಯನ್ನು ಹೊರಬೇಕಿದೆ ಎಂದರು.

ಈ ನಿಟ್ಟಿನಲ್ಲಿ ಸಿಂಡಿಕೇಟ್‌ ಸದಸ್ಯ ಹಾಗೂ ಸರ್‌ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ರಾಬರ್ಟ್‌ ದದ್ದಾಪುರಿ ಅವರಿಗೆ ನ್ಯಾ.ಚಂದ್ರಶೇಖರ್‌ ಸಲಹೆ ನೀಡಿದರು.

ಗುಜರಾತ್‌ ಹೊರತು ಪಡಿಸಿದರೇ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವು ಧಾರವಾಡದಲ್ಲಿ ಪ್ರಾರಂಭವಾಗಿದೆ.

ಈ ಹಿನ್ನಲೆಯಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಜೊತೆ ಕವಿವಿ ಕೈಜೋಡಿಸುವ ಮೂಲಕ ಮಹತ್ವದ ಶೈಕ್ಷಣಿಕ ಸುಧಾರಣೆಗೆ ಮುಂದಾಗಬೇಕೆಂದು ನ್ಯಾ.ಚಂದ್ರಶೇಖರ್‌ ಜೋಶಿ ಸಲಹೆ ನೀಡಿದರು.

ಪರಿಣಿತರ ಸಾಕ್ಷಿ ಪಡೆಯಲು ವಿಷಯ ತಜ್ಞರ ಕೊರತೆ ಇದೆ. ಈ ಹಿನ್ನಲೆಯಲ್ಲಿ ಹೊಸವಿಷಯಗಳನ್ನು ಆಳವಡಿಸಿಕೊಂಡು ಪರಿಣೀತರನ್ನು ರೂಪಿಸುವ ಜವಾಬ್ದಾರಿಯನ್ನು ಕವಿವಿಯ ಕಾನೂನು ಕಾಲೇಜು ಮುಂದಾಗಬೇಕು ಎಂದು ಹೇಳಿದರು.

ಕರ್ನಾಟಕ ಬಾರ್‌ ಕೌನ್ಸಿಲ್‌ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು. ಪಕ್ಷಗಾರರ ಹಿತರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಬಳಿಕ, ಕವಿವಿ ಸಿಂಡಿಕೇಟ್‌ ಸದಸ್ಯ ರಾಬರ್ಟ್‌ ದದ್ದಾಪುರಿ ಮಾತನಾಡಿ, ನ್ಯಾ.ಚಂದ್ರಶೇಖರ್‌ ಜೋಶಿ ಅವರು ನೀಡಿರುವ ಅಮೂಲ್ಯವಾದ ಸಲಹೆಗಳನ್ನು ಕವಿವಿ ಉಪಕುಲಪತಿ ಎ.ಆರ್.ಖಾನ್‌ ಅವರ ಗಮನಕ್ಕೆ ತರುವದಾಗಿ ಭರವಸೆ ನೀಡಿದರು.

ಮುಂಬರುವ ಶೈಕ್ಷಣಿಕ ವರುಷದಿಂದಲೇ ನ್ಯಾಯಮೂರ್ತಿಗಳು ನೀಡಿರುವ ಸಲಹೆಯಂತೇ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.

ಹಿರಿಯ ನ್ಯಾಯವಾದಿ ಕೆ.ಬಿ.ನಾವಲಗಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಮಂಜುಳಾ ಎಸ್.ಆರ್‌ ಮಾತನಾಡಿದರು. ಮೆಹಕ್‌ ಹಾಗೂ ರೇಗನ್‌ ದದ್ದಾಪುರಿ ಅವರುಗಳು ಕಾರ್ಯಕ್ರಮ ನಿರೂಪಣೆ ಮಾಡಿದರು.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button