ಕೆಪಿಎಸ್ ಪಬ್ಲಿಕ್ ಶಾಲೆ ಕಟ್ಟಡ ಕಾಮಗಾರಿ ನೆಪ|ಬೆಳೆದು ನಿಂತ ಮರಗಳ ಮಾರಣಹೋಮ|ಸಚಿವ ಮಧು ಬಂಗಾರಪ್ಪ “ಮೌನಸಮ್ಮತಿ” ಆರೋಪ
ಕನಿಷ್ಟ ಸೆಟ್ ಬ್ಯಾಕ್ ಬಿಟ್ಟು 24 ಮರಗಳನ್ನು ಉಳಿಸಿಕೊಂಡೇ ಕಾಮಗಾರಿ ಆರಂಭಿಸುವಂತೆ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಶಿವಮೊಗ್ಗ: ರಾಜ್ಯದಲ್ಲೇ ಮಾದರಿಯಾಗಿದ್ದ ಶಿವಮೊಗ್ಗ ನಗರದ ಹೃದಯಭಾಗವಾದ ಸೈನ್ಸ್ ಮೈದಾನದಲ್ಲಿರುವ ಕೆಪಿಎಸ್ ಪಬ್ಲಿಕ್ ಶಾಲೆ ಕಟ್ಟಡ ಕಾಮಗಾರಿಯ ನೆಪದಲ್ಲಿ 20 ವರ್ಷ ಹಳೆಯದಾದ 24 ಮರಗಳ ಮಾರಣ ಹೋಮ ಮಾಡಲಾಗಿದೆ.
ಮರಗಳನ್ನು ಕಡಿಯದಂತೇ ಪರಿಸರಪ್ರೇಮಿಗಳು ನಡೆಸಿದ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ.

ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ವಿರುದ್ದ ಕ್ರಮ ಕೈಗೊಳ್ಳುವಂತೆ “ಪರಿಸರಕ್ಕಾಗಿ ನಾವು” ತಂಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಕೆಪಿಎಸ್ ಶಾಲೆ ಒಕೆ, ಮರಕಡಿತಲೆ ಯಾಕೆ?

ಇಲ್ಲಿಯ ಸೈನ್ಸ್ ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಪಿಎಸ್ ಪಬ್ಲಿಕ್ ಶಾಲೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆಯನ್ನು ಒಂದು ವಾರದ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದ್ದರು.
ಈ ವೇಳೆ ಪರಿಸರ ಪ್ರೇಮಿಗಳು ಕಟ್ಟಡ ಕಾಮಗಾರಿಗಾಗಿ 24 ಮರಗಳನ್ನು ಕಟಾವು ಮಾಡಲು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಹಿಂಭಾಗದಿಂದ 8 ಅಡಿ ಮುಂದಕ್ಕೆ ತೆಗೆದುಕೊಂಡಿರುವುದರಿಂದಾಗಿ ಸಮಸ್ಯೆಯಾಗಿದೆ.

ಕನಿಷ್ಟ ಸೆಟ್ ಬ್ಯಾಕ್ ಬಿಟ್ಟು 24 ಮರಗಳನ್ನು ಉಳಿಸಿಕೊಂಡೇ ಕಾಮಗಾರಿ ಆರಂಭಿಸುವಂತೆ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಪರಿಸರವಾದಿಗಳ ಬೇಸರಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರ ಭಕ್ತರ ಬಳಗದ ಮುಖಂಡ ಕೆ.ಇ. ಕಾಂತೇಶ್ ನೇತೃತ್ವದಲ್ಲಿ “ಪರಿಸರಕ್ಕಾಗಿ ನಾವು” ಮತ್ತು ನಾಗರೀಕ ಹಿರತಕ್ಷಣಾವೇದಿಕೆ ಪದಾಧಿಕಾರಿಗಳು ಶನಿವಾರದಂದು ಸೈನ್ಸ್ ಮೈದಾನದಲ್ಲಿ ಮಕ್ಕಳಂತೆ ಬೆಳೆಸಿದ್ದ ಮರಗಳ ಮಾರಣಹೋಮ ವಿರೋಧಿಸಿ ಪ್ರತಿಭಟನೆ ನಡೆಸಿದರು.

ಹಸಿರು ವಲಯಲ್ಲಿದ್ದರೂ ಅನುಮತಿ ಕೊಟ್ಟಿದ್ಯಾರು? ಹಸಿರುವಲಯದಲ್ಲಿನ ಮರಗಳ ರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿ, ಅರಣ್ಯ ಇಲಾಖೆ ಹೇಗೆ ಮತ್ತು ಯಾರಿಂದ ಅನುಮತಿ ಪಡೆದಿದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಪರಿಸರವಾದಿಗಳ ಸಲಹೆ ಪಡೆಯದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಕಾನೂನು ಬಾಹಿರವಾಗಿ ಮರ ಕಡಿದದ್ದು ಸರಿಯಲ್ಲ. 20 ವರ್ಷಗಳ ಮರಕ್ಕೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಪ್ರೀತಿಯಿಂದ ನೀರು ಗೊಬ್ಬರ ಹಾಕಿ ಬೆಳೆಸಿದ್ದಾರೆ ಸಾಕಿದ್ದಾರೆ.
ಮರಗಳೊಂದಿಗೆ ಒಡನಾಡಿಯಾಗಿದ್ದ ಮರಗಳೊಂದಿಗಿನ ಬಾಂಧವ್ಯಕ್ಕೆ ಕೊಡಲಿ ಬಿದ್ದಿದೆ ಎಂದು ಪರಿಸರವಾದಿಗಳು ಕಿಡಿಕಾರಿದರು.
ಈಗಾಗಲೇ ಶಿವಮೊಗ್ಗದಲ್ಲಿ ನಗರೀಕರಣದ ಹೆಸರಲ್ಲಿ ಮರಗಳು ಬಲಿಯಾಗಿವೆ, ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಒಂದು ಮರ ಕಡಿದರೂ ನಷ್ಟ ಅಪಾರ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುವಾಗ ಪರಿಸರದ ಮೇಲಿನ ದುಷ್ಪರಿಣಾಮ ಲೆಕ್ಕಿಸದೆ ಮರ ಕಡಿತಲೆ ಮಾಡುವುದನ್ನ ಎಸ್ಡಿಎಂಸಿ ಅಧ್ಯಕ್ಷ ಶಾಸಕ ಚೆನ್ನಬಸಪ್ಪನವರು ತಡೆಯದೇ ಕಣ್ಮುಚ್ಚಿ ಕುಳಿತು ಮೌನ ಸಮ್ಮತಿ ನೀಡಿದ್ದಾರೆಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಇ. ಕಾಂತೇಶ್ ನೇತೃತ್ವದ ನಿಯೋಗ ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರನ್ನು ಭೇಟಿ ಮಾಡಿ ಒಂದು ಗಿಡಕ್ಕೆ 10 ಗಿಡ ನೆಡುವ ಮೂಲಕ ನಷ್ಟ ಸರಿದೂಗಿಸಬೇಕು. ಮರಕಡಿತಲೆ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಹಸಿರುವಲಯದಲ್ಲಿ ಇಂತಹ ಅನಾಹುತಕ್ಕೆ ಅವಕಾಶನೀಡಬಾರದೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಶ್ರೀಕಾಂತ್, ಶ್ರೀಪತಿ, ಜನಾರ್ಧನ ಪೈ, ಕೆವಿ ವಸಂತಕುಮಾರ್, ಶ್ರೀಪತಿ, ಶೇಖರ್ ಗೌಳೇರ್,ಕೆವಿ ಸುಬ್ಬಣ್ಣ, ನಾಗೇಶ್, ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







