ದ್ವೇಷ ಭಾಷಣ ತಡೆ ಮಸೂದೆ|ಅಂಕಿತ ಹಾಕದಿರಲು ರಾಜ್ಯಪಾಲರಿಗೆ ಕೆ.ಎಸ್.ಈಶ್ವರಪ್ಪ ಮನವಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ಹಾಗೂ ಹಿಂದುತ್ವ ಪರ-ವಿರೋಧ ವಿಚಾರನ್ನೇ ಮುಂದಿಟ್ಟುಕೊಂಡು ಚುನಾವಣೆ ನಡೆಯುವ ಸಂದರ್ಭ ಸೃಷ್ಟಿಯಾಗಲಿದೆ ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ತಡೆ ಮಸೂದೆ 1975ರ ತುರ್ತುಪರಿಸ್ಥಿತಿಗಿಂತಲೂ ಘೋರವಾಗಿದೆ.
ರಾಜ್ಯಪಾಲರು ಯಾವುದೇ ಕಾರಣಕ್ಕೂ ಈ ಕರಾಳ ಮಸೂದೆ ಅನುಮೋದಿಸಬಾರದೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಸೋಮವಾರದಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದ್ವೇಷ ಭಾಷಣ ವಿರೋಧಿ ಕಾಯ್ದೆಯು ತುರ್ತುಪರಿಸ್ಥಿತಿ ಸಂದರ್ಭವನ್ನು ನೆನಪಿಸುವಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಗ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎನ್ನುವವರನ್ನು ಜೈಲಿಗೆ ಹಾಕಲಾಗಿತ್ತು ಎಂದು ಹೇಳಿದರು.
ಹಿಂದೂ ವಿರೋಧಿ ಕೃತ್ಯಗಳಾದಾಗ ಹಿಂದುಗಳ ಮೇಲೆ ಹಲ್ಲೆಯಾದಾಗ ನಾನು ಹಲವು ಬಾರಿ ಖಂಡಿಸಿ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದೇನೆ.
ಇದೇ ಕಾರಣಕ್ಕೆ ನನ್ನ ತಮ್ಮ ಮೇಲೆ 7 ಎಫ್ಐಆರ್ ದಾಖಲಾಗಿವೆ. ಈಗಿನ ದ್ವೇಷ ಭಾಷಣ ತಡೆ ಮಸೂದೆ ಪ್ರಕಾರ ಹೋದರೆ ಜೀವನಪೂರ್ತಿ ಜೈಲಲ್ಲಿರಬೇಕಾಗುತ್ತಿತ್ತೇನೋ ಎಂದು ವ್ಯಂಗ್ಯವಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ಹಾಗೂ ಹಿಂದುತ್ವ ಪರ-ವಿರೋಧ ವಿಚಾರನ್ನೇ ಮುಂದಿಟ್ಟುಕೊಂಡು ಚುನಾವಣೆ ನಡೆಯುವ ಸಂದರ್ಭ ಸೃಷ್ಟಿಯಾಗಲಿದೆ ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ
ವಿರುದ್ದ ಹರಿಹಾಯ್ದ ಕೆಎಸ್ ಈಶ್ವರಪ್ಪ
ರಾಜ್ಯದ ರಾಜಕಾರಣ ಅಸಹ್ಯ ಹುಟ್ಟಿಸುವಂತಿದೆ. ಕಾಂಗ್ರೆಸ್ಗೆ ಅಧಿಕಾರ ಕೊಟ್ಟ ಜನ ಈಗ ಪಶ್ಚಾತಾಪಪಡುವಂತಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಡಿನ್ನರ್ ಬ್ರೇಕ್ ಫಾಸ್ಟ್ ಮೀಟಿಂಗಗಳೆಂದು ಕಾಲಾಹರಣ ಮಾಡುತ್ತಿರೋದು ಖಂಡನೀಯ ಎಂದರು.
ಸಿಎಂ ಡಿಸಿಎಂ ನಡುವಿನ ಅಧಿಕಾರ ಹಂಚಿಕೆ ವಿಚಾರದ ಹೇಳಿಕೆಗಳಲ್ಲಿ ಒಂದೂ ಸಮನ್ವಯವಿಲ್ಲ. ಯಾವುದು ನಿಜ ಅಂತ ಗೊತ್ತಾಗದೇ ಜನರನ್ನ ಗೊಂದಲಕ್ಕೀಡುಮಾಡಿದೆ ಎಂದು ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಕಾರ್ಪೋರೇಟರ್ ಇ ವಿಶ್ವಾಸ್, ಶ್ರೀಕಾಂತ್, ಬಾಲು ರಾಜಣ್ಣ, ಶಂಕ್ರಾನಾಯ್ಕ, ಕುಬೇರಪ್ಪ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






