KarnatakaShivamogga

ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚಲು ಬಿಡಲ್ಲ|ಜಿಲ್ಲೆ ಬಂದ್‌ ಮಾಡಿ ಹೋರಾಟ-ಕೆ.ಎಸ್‌.ಈಶ್ವರಪ್ಪ ಗುಡುಗು

ಉಡಾನ್ ಯೋಜನೆ ಮೂರು ವರ್ಷದ ಅವಧಿಯದ್ದೆಂಬ ಅರಿವು ರಾಜ್ಯ ಸರ್ಕಾರಕ್ಕೆ ಇರಲಿಲ್ಲವಾ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಶಿವಮೊಗ್ಗ ವಿಮಾನ ನಿಲ್ದಾಣ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಬೇಡ ಎಂದು ವಿನಂತಿಸಿರುವ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಯಾವುದೇ ಕಾರಣಕ್ಕೂ ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚಲು ಬಿಡುವದಿಲ್ಲ. ಇದಕ್ಕಾಗಿ ಜಿಲ್ಲೆ ಬಂದ್‌ ಮಾಡಿ ಹೋರಾಟ ಮಾಡಲು ತಾವು ಸಿದ್ದ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಮಾನ ನಿಲ್ದಾಣ ನವೆಂಬರ್ 21 ರಿಂದ ಬಂದ್ ಆಗಲಿದೆ ಎಂಬ ವಿಚಾರದಲ್ಲಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಮೌನತಾಳಬಾರದು.

ತಕ್ಷಣ ಎಲ್ಲ ಪಕ್ಷದ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಜೊತೆ ಸಭೆ ಕರೆದು ಕೇಂದ್ರದಿಂದ ಪರಿಹಾರವಾಗಬೇಕೋ, ರಾಜ್ಯದಿಂದ ಪರಿಹಾರ ಸಿಗುತ್ತದೋ ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಅವರು ಆಗ್ರಹಿಸಿದರು. .

ಶಿವಮೊಗ್ಗ ವಿಮಾನ ನಿಲ್ದಾಣ ಬಂದ್ ಆಗಲಿದೆ ಎಂದು ಕೆಎಸ್ಐಡಿಸಿ ಅಧ್ಯಕ್ಷ ನಂಜಯ್ಯನಮಠ್ ಹೇಳಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಡಾನ್ ಯೋಜನೆ ಮೂರು ವರ್ಷದ ಅವಧಿಯದ್ದೆಂಬ ಅರಿವು ರಾಜ್ಯ ಸರ್ಕಾರಕ್ಕೆ ಇರಲಿಲ್ಲವಾ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಯೋಜನೆಯ ಗಡುವು ಮುಗಿಯುವ ಮುನ್ನವೇ ಮುಂಜಾಗ್ರತೆ ವಹಿಸಿ ಪರ್ಯಾಯ ಕ್ರಮ ಕೈಗೊಳ್ಳದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.

ಮೂರು ವರ್ಷದ ಉಡಾನ್ ಯೋಜನೆ ಅವಧಿ ಮುಗಿದಿದ್ದು ಇದು ಮತ್ತೆ ಚಾಲ್ತಿಯಲ್ಲಿ ಬರುವತನಕ ಕಲ್ಬುರ್ಗಿ, ಬೀದರ್ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿದಂತೆ ಶಿವಮೊಗ್ಗ ವಿಮಾನ ನಿಲ್ದಾಣಗಳಿಗೂ ನೀಡಬೇಕು ಎಂದು ಆಗ್ರಹಿಸಿದ ಈಶ್ವರಪ್ಪ, ವಿಮಾನ ನಿಲ್ದಾಣ ಉಳಿಸಿಕೊಳ್ಳಲು ಸಚಿವ ಮಧು ಬಂಗಾರಪ್ಪ ಮುಂದಾಗಬೇಕು ಎಂದು ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲೆ ವಿಮಾನ ನಿಲ್ದಾಣ ಸ್ಥಾಪನೆಗೆ ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರ ವಿಶೇಷ ಪರಿಶ್ರಮ ವಹಿಸಿದ್ದನ್ನು ಇದೇ ವೇಳೆ ಕೆ.ಎಸ್.ಈಶ್ವರಪ್ಪ ಸ್ಮರಿಸಿದರು.

ಜಿಲ್ಲೆಯ ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಪರ್ಕ ಸೇತುವೆಯಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಲ್ಲಿಸಿದರೆ , ರಾಜ್ಯ, ಕೇಂದ್ರ ಸರ್ಕಾರ ವ್ಯಯಿಸಿದ ಕೋಟ್ಯಾಂತರ ರೂಪಾಯಿ ತೆರಿಗೆ ಹಣ, ನೂರಾರು ಎಕರೆ ಜಮೀನು ಕಳೆದುಕೊಂಡ ರೈತರ ಶ್ರಮ ಎಲ್ಲವೂ ವ್ಯರ್ಥವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಬೇಸರ ಹೊರಹಾಕಿದರು.

Follow Us

Leave a Reply

Your email address will not be published. Required fields are marked *

Back to top button