ಶಿವಮೊಗ್ಗದಲ್ಲಿ ನೂತನ ಆಡಳಿತ ಸೌಧ ನಿರ್ಮಾಣ|ಸಚಿವ ಜಾರಕಿಹೊಳಿ ಭೇಟಿಯಾದ ಚೇತನ್ ಕೆ. ಗೌಡ|ಕೂಡಲೇ ಅನುದಾನ ಬಿಡುಗಡೆಗೆ ಮನವಿ
ಶಿವಮೊಗ್ಗದಲ್ಲಿ ಇರುವ ಸರ್ಕಾರಿ ಕಚೇರಿಗಳು ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವದರಿಂದ ಸಾರ್ವಜನಿಕರು ಹಾಗೂ ರೈತ ಬಾಂಧವರಿಗೆ ತೊಂದರೆಯಾಗಿದೆ ಎಂದು ಚೇತನ್ ಕೆ. ಗೌಡ, ಸಚಿವರ ಗಮನಕ್ಕೆ ತಂದರು.

ಶಿವಮೊಗ್ಗದ ನೂತನ ಆಡಳಿತ ಸೌಧ ನಿರ್ಮಾಣಕ್ಕೆ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ಆಗ್ರಹಿಸಿದ್ದಾರೆ.
ಸಚಿವರ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಮನವಿ ಅರ್ಪಿಸಿರುವ ಚೇತನ್ ಕೆ. ಗೌಡ, ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಆಡಳಿತ ಸೌಧ ನಿರ್ಮಾಣ ಅಗತ್ಯತೆ|
ಮನದಟ್ಟು ಮಾಡಿದ ಚೇತನ್ ಕೆ. ಗೌಡ|
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಯೋಜನಾ ವರದಿ ಹಾಗೂ ಪೂರಕ ದಾಖಲೆಗಳ ಪ್ರತಿಗಳನ್ನು ಸಚಿವ ಸತೀಶ ಜಾರಕಿಹೊಳಿ ಅವರ ಮುಂದೆ ಎಳೆಎಳೆಯಾಗಿ ಚೇತನ್ ಕೆ. ಗೌಡ ಪ್ರಸ್ತುತ ಪಡಿಸಿದರು.

ಪ್ರಸ್ತುತ ಶಿವಮೊಗ್ಗ ನಗರದ ಹಲವು ಪ್ರಮುಖ ಸರ್ಕಾರಿ ಕಚೇರಿಗಳು ಖಾಸಗಿ ಮಾಲೀಕತ್ವದ ಕಟ್ಟಡಗಳಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ.
ಇದರಿಂದಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ಸರ್ಕಾರವೇ ಭರಿಸಬೇಕಾಗಿದ್ದು, ಬೊಕ್ಕಸಕ್ಕೆ ಅನಗತ್ಯ ಆರ್ಥಿಕ ಹೊರೆಯಾಗಿದೆ ಎಂದು ಚೇತನ್ ಕೆ. ಗೌಡ ಮನವರಿಕೆ ಮಾಡಿದರು.
ಸಾರ್ವಜನಿಕರು, ರೈತರ ಪರದಾಟ|
ಶಿವಮೊಗ್ಗದಲ್ಲಿ ಇರುವ ಸರ್ಕಾರಿ ಕಚೇರಿಗಳು ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವದರಿಂದ ಸಾರ್ವಜನಿಕರು ಹಾಗೂ ರೈತ ಬಾಂಧವರಿಗೆ ತೊಂದರೆಯಾಗಿದೆ ಎಂದು ಚೇತನ್ ಕೆ. ಗೌಡ, ಸಚಿವರ ಗಮನಕ್ಕೆ ತಂದರು.
ಆಡಳಿತ ಸೌಧ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಜಾಗವು ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಜನಸಾಮಾನ್ಯರಿಗೆ ಅತ್ಯಂತ ಸುಲಭವಾಗಿ ತಲುಪಲು ಯೋಗ್ಯವಾದ ಕೇಂದ್ರ ಸ್ಥಾನವಾಗಿದೆ ಎಂದು ತಿಳಿಸಿದರು.
ಈ ಯೋಜನೆಯು ಜಾರಿಗೆ ಬಂದರೆ ಸಾರ್ವಜನಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗುವುದರ ಜೊತೆಗೆ ಸರ್ಕಾರದ ಆರ್ಥಿಕ ಹೊರೆಯೂ ತಪ್ಪಲಿದೆ ಎಂದು ಸಚಿವರಿಗೆ ಚೇತನ್ ಕೆ. ಗೌಡ ಮನದಟ್ಟು ಮಾಡಿದರು.
ಯೋಜನೆಗೆ ಸಚಿವರ ಸ್ಪಂದನೆ|
ಶಿವಮೊಗ್ಗದ ಅಭಿವೃದ್ಧಿ ದೃಷ್ಟಿಯಿಂದ ಉದ್ದೇಶಿತ ಆಡಳಿತ ಸೌಧ ನಿರ್ಮಾಣದ ಅವಶ್ಯಕತೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದು, ಮಹತ್ವದ ಯೋಜನೆಗೆ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ತಿಳಿಸಿದ್ದಾರೆ.
ಸಚಿವರ ಭೇಟಿ ವೇಳೆ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ಶಿವಮೊಗ್ಗ.







