ಕಸ್ತೂರಿರಂಗನ್ ವರದಿ ಎಂಬ ಷೆಡಂಭೂತ!ಭೌತಿಕ ಸಮೀಕ್ಷೆ ನಡೆಸಲು ಸಿಎಂ ತೀರ್ಮಾನ|ರೈತರ ಅಭಿಪ್ರಾಯವೇ ನಮ್ಮ ಅಭಿಪ್ರಾಯ-ಸಿಎಂ ಅಭಯ..
ಕಸ್ತೂರಿರಂಗನ್ ವರದಿ ವಿಚಾರವಾಗಿ ಕೂಲಂಕುಷವಾಗಿ ಚರ್ಚಿಸಲೇಂದೆ ನಿಮ್ಮನ್ನು ಹುಡುಕಿಕೊಂಡು ನಾವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ ಎಂದು ಹೇಳಿದ ಸಿಎಂ ಡಿ.ಕೆ.ಶಿವಕುಮಾರ್, ಎಲ್ಲ ವಿಚಾರವನ್ನು ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.

ತೀರ್ಥಹಳ್ಳಿ/ಶಿವಮೊಗ್ಗ: ಪರಿಸರವನ್ನು ಕಾಪಾಡಿಕೊಂಡು ಬಂದಿರುವ ರೈತರು ವಲಸೆ ಹೋಗಬಾರದು ಎಂಬ ನಿಟ್ಟಿನಲ್ಲಿ ಕರಾವಳಿ ಪ್ರದೇಶ 364 ಕಿ.ಮೀ ನೊಂದಿಗೆ ಮಲೆನಾಡ ಅನ್ನು ಸೇರಿಸಿ ಹೊಸದಾಗಿ ಇಕೋ ಟೂರಿಸಂ ಕುರಿತು ಪ್ರವಾಸೋದ್ಯಮ ನೀತಿ ತರಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಶನಿವಾರ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಮತ್ತು ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಸಿಎಂ ಮಾತನಾಡಿದರು.
ನೊಟೀಸ್ ಕೊಡಬೇಡಿ|
ಅರಣ್ಯ ಇಲಾಖೆಯವರು ರೈತರಿಗೆ ಹೊಸದಾಗಿ ನೋಟಿಸ್ ಅನ್ನು ನೀಡಬಾರದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಕಟ್ಟುನಿಟ್ಟಾಗಿ ಆದೇಶ ನೀಡಿದರು.

ಜೊತೆಗೆ ಹೊಸ ಒತ್ತುವರಿಗೆ ಅವಕಾಶ ನೀಡಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಅರಣ್ಯ ಭಾಗದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದವರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.

ಬಗರ್ ಹುಕುಂ, ಉಳುವವನಿಗೆ ಭೂಮಿ ಹಕ್ಕು ತಂದಿದ್ದು ನಮ್ಮ ಪಕ್ಷದ ಸರ್ಕಾರ ಎಂದು ತಿಳಿಸಿದ ಸಿಎಂ, ರೈತ ಬಾಂಧವರನ್ನು ಭೇಟಿ ಮಾಡಲು ಇದೊಂದು ಅವಕಾಶ ಎಂದು ಸಂತಸ ವ್ಯಕ್ತಪಡಿಸಿದರು.
ರೈತರಿಗೆ ಒದಗಿರುವ ಅಪಾಯ ಎದುರಿಸಿವ ಬಗೆ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುವ ಉದ್ದೇಶದಿಂದ ಇಲ್ಲಿ ಸೇರಲಾಗಿದೆ ಎಂದು ಹೇಳಿದರು.
ಮನೆ ಬಾಗಿಲಿಗೆ ಬಂದಿದ್ದೇವೆ|
ಕಸ್ತೂರಿರಂಗನ್ ವರದಿ ವಿಚಾರವಾಗಿ ಕೂಲಂಕುಷವಾಗಿ ಚರ್ಚಿಸಲೇಂದೆ ನಿಮ್ಮನ್ನು ಹುಡುಕಿಕೊಂಡು ನಾವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ ಎಂದು ಹೇಳಿದ ಸಿಎಂ ಡಿ.ಕೆ.ಶಿವಕುಮಾರ್, ಎಲ್ಲ ವಿಚಾರವನ್ನು ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.

ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಅಭಯ ನೀಡಿದರು.
ಜನರ ಭಾವನೆಗಳ ಮೇಲೆ ಸರ್ಕಾರ ಆಡಳಿತ ಮಾಡಬೇಕು ಎಂದು ಸಿಎಂ ಅಭಿಪ್ರಾಯಪಟ್ಟರು.

ಇದೇ ಉದ್ದೇಶದಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ತಿಂಗಳಿಗೆ ಎರಡು ಬಾರಿ ಉಸ್ತುವಾರಿ ಸಚಿವರು, ಅಧಿಕಾರಿಗಳು ತಾಲ್ಲೂಕು, ಹೋಬಳಿ, ಪಂಚಾಯ್ತಿ ಮಟ್ಟಕ್ಕೆ ಹೋಗಿ ಜನರ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸಲು ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗಿದೆ ಎಂದು ಸಿಎಂ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮಾತನಾಡಿ, ಮಲೆನಾಡು ಭಾಗದ ಜನರ ಆತಂಕ ನಿವಾರಿಸುವ ಕೆಲಸವನ್ನು ಮಾಡುತ್ತೇವೆಂದು ಸಿಎಂ ಮತ್ತು ಅರಣ್ಯ ಸಚಿವರು ಭರವಸೆ ನೀಡಿದ್ದಾರೆ.

ಮನೆ ಬಾಗಿಲಿಗೆ ಬಂದು ಅರಣ್ಯ ಸಮಸ್ಯೆಗಳನ್ನು ತಿಳಿಯಲು ಬಂದಿರುವುದು ಪುಣ್ಯದ ಸುದಿನ ಎಂದು ಹೇಳಿದರು. ಮನೆ, ಭೂಮಿ ಅರಣ್ಯವಾಸಿಗಳಿಗೆ ತೊಂದರೆ ಕೊಡುತ್ತಿರವ ಕೇಂದ್ರದ ನಿಲುವನ್ನು ಧಿಕ್ಕರಿಸಬೇಕಿದೆ ಎಂದರು.

ಸಿಎಂ ಡಿ.ಕೆ.ಶಿವಕುಮಾರ್ ಅವರು, ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ ಎಂದ ಮಧು ಬಂಗಾರಪ್ಪ, ನಮ್ಮ ಹಕ್ಕುಗಳ ರಕ್ಷಣೆಗಾಗಿ ನಮ್ಮ ಊರಿಗೆ ಸಿಎಂ ಬಂದಿದ್ದಾರೆ. ರೈತರಿಂದ ಪರಿಸರ ಉಳಿದಿದೆ ಎಂದು ಹೇಳಿದರು.
ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗ ರೆಡ್ಡಿ, ಪ್ರಾಣಿ ಮತ್ತು ಮಾನವ ಸಂಘರ್ಷ ಸೇರಿದಂತೆ ಅರಣ್ಯ ವಿಷಯಗಳ ಕುರಿತು ಇಲ್ಲೇ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕಿನ ಗ್ರಾಮಗಳು ಹಾಗೂ ಇನ್ನೂ ಕೆಲ ಗ್ರಾಮ ಸೇರಿ 400 ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಅಧಿಸೂಚನೆ ಒಳಪಟ್ಟಿದ್ದು, ಆಕ್ಷೇಪಣೆ ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಪ್ರಸ್ತುತ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮಲೆನಾಡಿನಲ್ಲಿ ಭೌತಿಕ ಸರ್ವೇ ಆಗಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ವಿರುದ್ದ ಒಟ್ಟಾಗಿ, ಒಂದಾಗಿ ಹೋರಾಟ ಮಾಡೋಣ, ಸರಿಯಾದ ದಾಖಲಾತಿಗಳನ್ನು ಕೇಂದ್ರಕ್ಕೆ ನೀಡಿ ಮನವರಿಕೆ ಮಾಡೋಣ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು, ಅಳಲನ್ನು ಸಿಎಂ ಮುಂದೆ ತೋಡಿಕೊಂಡರು. ಮಲೆನಾಡು ಭಾಗದ ಜನಪ್ರತಿನಿಧಿಗಳು, ರೈತ ಸಂಘಟನೆಗಳ ಒಕ್ಕೂಟದ ಪ್ರಮುಖರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







