11 ದಿನಗಳ ದಸರಾ ಮಹೋತ್ಸವಕ್ಕೆ ಸಕಲ ಸಿದ್ದತೆ|ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಚಿನ್ನದ ಮುಖ|ನಟ ಶ್ರೀನಾಥರಿಂದ ವಿದ್ಯುಕ್ತ ಚಾಲನೆ-ಶಾಸಕ ಚೆನ್ನಬಸಪ್ಪ
ಸಕ್ರೆಬೈಲು ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಮತ್ತು ಸಾಗರ್ ಮೂರು ಆನೆಗಳು ಅಂಬಾರಿ ಮೆರವಣಿಯಲ್ಲಿ ಪಾಲ್ಗೊಳ್ಳಲಿದ್ದು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಇದಕ್ಕೆ ವಿಶೇಷ ಅನುಮತಿ ನೀಡಿದ್ದಾರೆಂದು ಶಾಸಕ ಎಸ್.ಎನ್ ಚೆನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ ದಸರಾ ಮಹೋತ್ಸವ ಆಚರಣೆಯ ಭಾಗವಾಗಿ ಈ ಬಾರಿ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಚಿನ್ನದ ಮುಖದ ಆಳವಡಿಸುವ ಮೂಲಕ ಅಂಬಾರಿ ಮೆರವಣಿಗೆ ನಡೆಯಲಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ, ಶಾಸಕ ಎಸ್.ಎನ್ ಚೆನ್ನಬಸಪ್ಪ ತಿಳಿಸಿದರು.

11 ದಿನಗಳ ಅದ್ದೂರಿ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಕ್ಟೋಬರ್ 11 ರಂದು ಖ್ಯಾತ ಚಲನ ಚಿತ್ರ ನಟ ಶ್ರೀನಾಥ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಲಿಕೆಯಲ್ಲಿನ ಅಧಿಕಾರಿಗಳನ್ನೊಳಗೊಂಡ 14 ಸಮಿತಿಗಳನ್ನು ರಚಿಸಲಾಗಿದೆ. ಕಳೆದ ವರ್ಷ ಬೆಳ್ಳಿ ವಿಗ್ರಹವನ್ನು ಅಂಬಾರಿಯಲ್ಲಿ ಸ್ಥಾಪಿಸಲಾಗಿತ್ತು.

ಈ ಬಾರಿ ದೇವಿಗೆ 1.5 ಕೋಟಿ ವೆಚ್ಚದ ಚಿನ್ನದ ಮುಖ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಶಾಸಕ ಎಸ್.ಎನ್ ಚೆನ್ನಬಸಪ್ಪ ಹೇಳಿದರು.
ಚಾಮುಂಡೇಶ್ವರಿ ವಿಗ್ರಹದ ಅಲಂಕಾರದ ವೈಭವವೂ ಪ್ರತಿ ವರ್ಷ ಹೆಚ್ಚಾಗುತ್ತಿದೆ.
ಚಿನ್ನದ ಸರ, ಬಳೆ, ಒಲೆ, ಮೂಗುತಿ ಸೇರಿದಂತೆ ಹಲವು ಆಭರಣಗಳನ್ನು ಹಂತ ಹಂತವಾಗಿ ಮಾಡಿಸಲಾಗಿದೆ. ಅದಕ್ಕೀಗ ಚಿನ್ನದ ಮುಖ ಹೊಸ ಸೇರ್ಪಡೆ ಎಂದು ತಿಳಿಸಿದರು.

ಅಕ್ಟೋಬರ್ 11 ರಂದು ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದವರೆಗೆ ಮೆರವಣಿಗೆ ನಡೆಯಲಿದೆ.
ದೇವಿಯನ್ನು ಉತ್ಸವದ ಮೂಲಕ ಕೊಂಡೊಯ್ದು ಪ್ರತಿಷ್ಠಾಪಿಸಲಾಗವುದು. ಅಂದು ಬೆಳಿಗ್ಗೆ 10.30ಕ್ಕೆ ಚಲನಚಿತ್ರ ನಟ ಶ್ರೀನಾಥ ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಎಂದರು.
ಅಂಬಾರಿ ಹೊರಲಿರುವ ಸಕ್ರೆಬೈಲು ಆನೆಗಳು|

ಸಕ್ರೆಬೈಲು ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಮತ್ತು ಸಾಗರ್ ಮೂರು ಆನೆಗಳು ಅಂಬಾರಿ ಮೆರವಣಿಯಲ್ಲಿ ಪಾಲ್ಗೊಳ್ಳಲಿದ್ದು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಇದಕ್ಕೆ ವಿಶೇಷ ಅನುಮತಿ ನೀಡಿದ್ದಾರೆಂದು ಶಾಸಕ ಎಸ್.ಎನ್ ಚೆನ್ನಬಸಪ್ಪ ತಿಳಿಸಿದರು.
ಕ್ರೇಜಿಸ್ಟಾರ್ ರವಿಚಂದ್ರನ್ ಆಗಮನ|

ಅ.20ರಂದು ಯುವ ದಸರಾ ಅಂಗವಾಗಿ ನಡೆಸುವ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಕ್ಕೆ ನಟ ರವಿಚಂದ್ರನ್ ಹಾಗೂ ಹಾಸ್ಯ ನಟ ಸಾಧುಕೋಕಿಲ ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ ಎಂದು ಶಾಸಕ ಚೆನ್ನ ಬಸಪ್ಪ ತಿಳಿಸಿದರು.
ಅ.18ರಂದು ಹಿರಿಯ ನಟಿ ಪದ್ಮಾವಾಸಂತಿ ಅವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ದಸರಾ ನಡೆಯಲಿದೆ.

ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರವಿಚಂದ್ರನ್ ಕಾರ್ಯಕ್ರಮದ ದಿನಾಂಕ ಹೊಂದಾಣಿಕೆ ಸೇರಿದಂತೆ ಅಗತ್ಯ ಸಹಕಾರ ನೀಡಿದ್ದಾರೆ.
ಪಕ್ಷ ಭೇದ ಮರೆತು ಎಲ್ಲ ಜನಪ್ರತಿನಿಧಿಗಳೂ ಕೂಡ ಶಿವಮೊಗ್ಗದ ದಸರಾ ಅದ್ದೂರಿಯಾಗಿ ನಡೆಸಲು ಎಲ್ಲ ರೀತಿಯ ಸಹಕಾರ ನೀಡಿದ್ದಾರೆಂದು ಶಾಸಕ ಚೆನ್ನ ಬಸಪ್ಪ ಅಭಿನಂದಿಸಿದರು.
200ಕ್ಕೂ ಹೆಚ್ಚು ದೇವತೆಗಳ ಸಮಾಗಮ
ಅ.21ರಂದು ಶಿವಪ್ಪನಾಯಕ ಅರಮನೆ ಆವರಣದಿಂದ ನಗರದ 200ಕ್ಕೂ ಹೆಚ್ಚು ದೇವತೆಗಳ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಬರುವ ನಿರೀಕ್ಷೆ ಇರುವುದರಿಂದ ಭದ್ರತೆ, ಸಂಚಾರ ಮತ್ತು ಮೂಲಸೌಕರ್ಯದ ಬಗ್ಗೆ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಚೆನ್ನಬಸಪ್ಪ ವಿವರಿಸಿದರು.
ಲೇಸರ್ ಶೋ ಮತ್ತು ನಾಣ್ಯ ಪ್ರದರ್ಶನ|
ಶಿವಮೊಗ್ಗ ಮಹಾನಗರ ಪಾಲಿಕೆ ಕಟ್ಟಡದಲ್ಲಿ ದಸರಾ ಪ್ರಯುಕ್ತ 11 ದಿನವೂ ಪ್ರತಿದಿನ ಸಂಜೆ ಲೇಸರ್ ಲೈಟಿಂಗ್ ಶೋ ನಡೆಯಲಿದೆ.
ವಿಜಯದಶಮಿ ದಿನ ಬನ್ನಿ ಮುಡಿಯುವ ಕಾರ್ಯಕ್ರಮ ಮತ್ತು ಪಟಾಕಿ ಪ್ರದರ್ಶನದ ಬಳಿಕ ಅಲ್ಲಮ್ಮಪ್ರಭು ಮೈದಾನದಲ್ಲಿ ಬೆಂಗಳೂರಿನ ಕಲಾವಿದರಿಂದ 3D ಲೇಸರ್ ಶೋ ಪ್ರಮುಖ ಆಕರ್ಷಣೆಯಾಗಲಿದೆ ಎಂದರು.
ಈ ಬಾರಿ ವಿವಿಧ ಬಗೆಯ ದಸರಾ ಕಾರ್ಯಕ್ರಮಕ್ಕೆ ನಾಣ್ಯ ದಸರಾ ಹೊಸ ಸೇರ್ಪಡೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ನಾಣ್ಯ ಸಂಗ್ರಹಕರ ಸಂಘದ ಸಹಯೋಗದಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ಐತಿಹಾಸಿಕ ನಾಣ್ಯಗಳ ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಶಿವಮೊಗ್ಗ ನಗರದ ನಾಡಹಬ್ಬದಲ್ಲು ನಾಗರಿಕರು ಮತ್ತು ಜಿಲ್ಲೆಯ ಜನರು ಸಡಗರ-ಸಂಭ್ರಮದಿಂದ ಪಾಲ್ಗೊಂಡು ದಸರಾ ಯಶಸ್ವಿಗೊಳಿಸುವಂತೆ ಶಾಸಕ ಚನ್ನಬಸಪ್ಪ ಮನವಿ ಮಾಡಿದರು.
ದಸರಾಗೆ ₹2.10 ಕೋಟಿರೂ. ಮೀಸಲು|
-ಪಾಲಿಕೆ ಆಯುಕ್ತ ಮಾಯಣ್ಣಗೌಡ|
ಮಕ್ಕಳ ದಸರಾ, ರಂಗ ದಸರಾ, ಮಹಿಳಾ ದಸರಾ, ಚಲನಚಿತ್ರ ದಸರಾ, ಪರಿಸರ ದಸರಾ,ರೈತ ದಸರಾ, ಕಲಾ ದಸರಾ, ಆಹಾರ ದಸರಾ ,ಯೋಗ ದಸರಾ ,ಯುವ ದಸರಾ ಎಂಬ ವಿವಿಧ ಬಗೆಯ ದಸರಾ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಪಾರಂಪರಿಕ ವೈಭವದ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದೆ ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಹೇಳಿದರು.

ಶಿವಮೊಗ್ಗ ದಸರಾ ಆಚರಣೆಗಾಗಿ 2.10 ಕೋಟಿ ಬಜೆಟ್ ಅಂದಾಜಿಸಲಾಗಿದೆ ಎಂದು ತಿಳಿಸಿದರು.
50 ಲಕ್ಷರೂ. ರಾಜ್ಯ ಸರ್ಕಾರದ ಅನುದಾನ ಸಿಕ್ಕಿದೆ. ₹1.60 ಕೋಟಿ ಪಾಲಿಕೆಯ ಅನುದಾನ ಹಾಗೂ ವಿವಿಧ ಮಂಡಳಿಯಿಂದಲೂ ಸುಮಾರು ₹25 ಲಕ್ಷ ನೆರವು ದೊರೆತಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹೆಚ್ಚುವರಿ ಅನುದಾನ ಪಡೆಯುವ ಪ್ರಯತ್ನ ನಡೆದಿದ್ದು, ಅದು ಸಿಕ್ಕರೆ ಪಾಲಿಕೆಯ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಆಯುಕ್ತ ಮಾಯಣ್ಣಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾಗತ ಸಮಿತಿ ಕಾರ್ಯದರ್ಶಿ ಪುಷ್ಪಾವತಿ ಹೆಚ್ ಎಸ್, ಅಲಂಕಾರ ಸಮಿತಿಯ ಕಾರ್ಯದರ್ಶಿ ಹರೀಶ್ ಡಿ, ಯುವದಸರಾ ಸಮಿತಿಯ ಯಶವಂತ್, ವಿಕಾಸ್ ಆರ್, ಸುಧಾಕರ್ ಬಿಜ್ಜೂರ್, ಸಿದ್ದಪ್ಪ ಸಿ ಆರ್ ಸೇರಿದಂತೆ ವಿವಿಧ ಸಮಿತಿ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸೌಮ್ಯ ಹೆಚ್.ಪಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







