ಎಸ್‌ಐಆರ್ ಪ್ರಕ್ರಿಯೆಗೆ ಶಿಕ್ಷಕರ ನಿಯೋಜನೆ ಬೇಡ|ಬಿಎಲ್‌ಓ ಕಾರ್ಯಭಾರದಿಂದ ಪಠ್ಯಬೋಧನೆಗೆ ತೊಂದರೆ|ಶಿಕ್ಷಕರಿಗೆ ವಿನಾಯ್ತಿ ನೀಡಲು ಮಧು ಬಂಗಾರಪ್ಪ ಒತ್ತಾಯ
ಎಸ್‌ಐಆರ್‌ನ ಸಂದರ್ಭದಲ್ಲಿ ಬಿಎಲ್‌ಒಗಳು ಯಾವ ರೀತಿಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಈ ಕಾರ್ಯವನ್ನು ಶಿಕ್ಷಕರಿಗೆ ನೀಡಿದರೆ ಖಂಡಿತವಾಗಿಯೂ ಅವರು ಶಾಲೆಯಲ್ಲಿ ಸರಿಯಾಗಿ ಪಾಠ ಮಾಡಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗ: ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ನಿಯೋಜಿಸಿರುವುದನ್ನು ಮಾಜಿ ಸಚಿವ ಮಧು ಬಂಗಾರಪ್ಪ ತೀವ್ರವಾಗಿ ವಿರೋಧಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಅನಸಿಕೆ ಹಂಚಿಕೊಂಡಿರುವ ಅವರು, ಶಿಕ್ಷಕರಿಗೆ ಶಾಲೆಯಲ್ಲಿ ಪಾಠ ಮಾಡುವುದು ಬಿಟ್ಟು ಬೇರೆ ಕೆಲಸ ವಹಿಸುವುದು ಸರಿಯಲ್ಲ ಎಂದಿದ್ದಾರೆ.
ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದು ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಕುಸಿತಕ್ಕೂ ಕಾರಣವಾಗಲಿದೆ ಎಂದು ಮಧು ಬಂಗಾರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು|
ಈ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ʻಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆʼಗೆ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುವುದನ್ನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ವಿರೋಧಿಸಿದ್ದನ್ನು ಅವರು ಸ್ಮರಿಸಿದ್ದಾರೆ.
ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಅನ್ಯ ಒತ್ತಡದ ಕೆಲಸ ನೀಡಲೇಬಾರದು ಎಂದು ಆಗ ಹೇಳಿದ್ದೇ ಎಂದು ತಿಳಿಸಿದ್ದಾರೆ.
ಎಸ್‌ಐಆರ್‌ನ ಸಂದರ್ಭದಲ್ಲಿ ಬಿಎಲ್‌ಒಗಳು ಯಾವ ರೀತಿಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಈ ಕಾರ್ಯವನ್ನು ಶಿಕ್ಷಕರಿಗೆ ನೀಡಿದರೆ ಖಂಡಿತವಾಗಿಯೂ ಅವರು ಶಾಲೆಯಲ್ಲಿ ಸರಿಯಾಗಿ ಪಾಠ ಮಾಡಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಒಂದರಿಂದ ಒಂದೂವರೆ ತಿಂಗಳು ಶಾಲೆಗಳಲ್ಲಿ ಪಾಠ ತಪ್ಪಿದರೆ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿರುವ ಅವರು, ಚುನಾವಣಾ ಆಯೋಗವು ಈ ಕೂಡಲೇ ಎಸ್‌ಐಆರ್ ಚಟುವಟಿಕೆಗೆ ಶಿಕ್ಷಕರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆಯ ಆದ್ಯ ಕರ್ತವ್ಯ.
ಹೀಗಾಗಿ ಎಸ್‌ಐಆರ್‌ನಲ್ಲಿ ತೊಡಗಿರುವ ಶಿಕ್ಷಕರೂ ನಿಯಮಿತವಾಗಿ ಪಾಠ ಮಾಡಬೇಕೆಂದು ಶಿಕ್ಷಣ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಪಾಠ ಮಾಡಬೇಕಾದ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸುವುದನ್ನು ತಡೆಯುವ ಉದ್ದೇಶದಿಂದ ಈ ಹಿಂದೆ ಸಚಿವನಾಗಿದ್ದಾಗ ʻಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಮಸೂದೆʼಯನ್ನು ಜಾರಿಗೆ ತಂದಿದ್ದೆ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಮ್ಮ ಶಿಕ್ಷಕರನ್ನು ಸಮೀಕ್ಷಕರನ್ನಾಗಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಮಧು ಬಂಗಾರಪ್ಪ ಪ್ರತಿಪಾದಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







